ಬೆಂಗಳೂರು: ರಸ್ತೆ ಅಪಘಾತಗಳಿಂದ ನಮಗರಿವಿಲ್ಲದೆ ದೇಶದ ಸಾಮಾಜಿಕ-ಆರ್ಥಿಕತೆ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತಿದ್ದು, ವರ್ಷಕ್ಕೆ ಅಂದಾಜು 2.91ಲಕ್ಷ ಕೋಟಿ ರೂ. ನಷ್ಟ ಉಂಟಾಗುತ್ತಿದೆ ಎಂದು ವರದಿಯಾಗಿದೆ.
ಇದು ದೇಶದ ಒಟ್ಟಾರೆ ಆಂತರಿಕ ವೃದ್ಧಿ (ಜಿಡಿಪಿ)ಯ ಶೇ. 0.55ರಿಂದ ಶೇ. 1.35ರಷ್ಟಾಗುತ್ತದೆ! ಬಾಷ್ ಇಂಡಿಯಾ ಕಂಪೆನಿಯ ರೋಡ್ ಆಕ್ಸಿಡೆಂಟ್ ಸ್ಯಾಂಪ್ಲಿಂಗ್ ಸಿಸ್ಟಮ್ ಆಫ್ ಇಂಡಿಯಾ (RASSI) ಈಚೆಗೆ ದೇಶದಲ್ಲಿ ನಡೆಯುವ ರಸ್ತೆ ಅಪಘಾತಗಳು ಮತ್ತು ಅದರಿಂದಾದ ಸಾಮಾ ಜಿಕ-ಆರ್ಥಿಕ ನಷ್ಟದ ಅಧ್ಯಯನ ನಡೆಸಿದ್ದು, ಈ ಸಂಬಂಧದ ವರದಿ ಬಿಡುಗಡೆಗೊಳಿಸಿದೆ. ಅದರಲ್ಲಿ ಈ ಅಚ್ಚರಿ ಅಂಶ ಬೆಳಕಿಗೆ ಬಂದಿದೆ.
ವಿಶ್ವದ ರಸ್ತೆ ಅಪಘಾತಗಳಲ್ಲಿ ಭಾರತದ ಪಾಲು ಶೇ. 11ರಷ್ಟಿದ್ದು, ಮೊದಲ ಸ್ಥಾನದಲ್ಲಿದೆ. 2019ರಲ್ಲಿ ದೇಶಾದ್ಯಂತ ನಡೆದ ವಿವಿಧ ಪ್ರಕಾರದ ರಸ್ತೆ ಅಪಘಾತಗಳಲ್ಲಿ 1.51 ಲಕ್ಷ ಜನ ಸಾವನ್ನಪ್ಪಿದ್ದಾರೆ. ಇದೆಲ್ಲವೂ ಸಾಮಾಜಿಕ-ಆರ್ಥಿಕ ನಷ್ಟದ ರೂಪದಲ್ಲಿ ಪರಿಣಮಿಸುತ್ತಿದ್ದು, ಒಂದೇ ವರ್ಷದಲ್ಲಿ 15.71ರಿಂದ 38.81 ಬಿಲಿಯನ್ ಡಾಲರ್ (2.91 ಲಕ್ಷ ಕೋಟಿ ರೂ.) ಆಗುತ್ತದೆ. ಇದು ದೇಶದ ಜಿಡಿಪಿಯ ಶೇ. 0.55ರಿಂದ ಶೇ. 1.35ರಷ್ಟು ಆಗುತ್ತದೆ.
ಈ ನಷ್ಟವು ವ್ಯಕ್ತಿ ಅಥವಾ ಕಂಪೆನಿಯ ಉತ್ಪಾದಕತೆ, ಚಿಕಿತ್ಸಾ ವೆಚ್ಚ, ಜಖಂಗೊಂಡ ವಾಹನದ ರಿಪೇರಿ, ಸಂಚಾರದಟ್ಟಣೆಯಲ್ಲಿ ವ್ಯಯ ಆಗುವ ಸಮಯ, ಪರಿಹಾರ ಸೇರಿದಂತೆ ವಿವಿಧ ಪ್ರಕಾರಗಳನ್ನು ಈ ಸಾಮಾಜಿಕ-ಆರ್ಥಿಕ ನಷ್ಟವು ಒಳಗೊಂಡಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. 2019ರಲ್ಲಿ ಸುಮಾರು 7,81,668 ವಾಹನಗಳು ರಸ್ತೆ ಅಪಘಾತಗಳಲ್ಲಿ ಜಖಂಡಗೊಂಡಿವೆ. ಇದರ ಮೊತ್ತ 1.81 ಬಿಲಿಯನ್ ಡಾಲರ್ ಆಗುತ್ತದೆ.
ಇದು ವಾಣಿಜ್ಯ ವಾಹನಗಳು, ಕಾರು, ದ್ವಿಚಕ್ರ ವಾಹನಗಳು ಮತ್ತು ಬಸ್‌ಗಳನ್ನು ಒಳಗೊಂಡಿದೆ. ಇನ್ನು ರಸ್ತೆ ಅಪಘಾತಗಳಿಗೆ ತುತ್ತಾದವರ ಒಟ್ಟಾರೆ ವೈದ್ಯಕೀಯ ವೆಚ್ಚ ಈ ಅವಧಿಯಲ್ಲಿ 0.82ರಿಂದ 1.92 ಬಿಲಿಯನ್ ಡಾಲರ್‌ನಷ್ಟಾಗಿದೆ. ಇದೆಲ್ಲದರಿಂದ ಆ ಒಂದು ವರ್ಷದಲ್ಲಿ ಗಂಭೀರ ಗಾಯಗೊಂಡವರ ವೈದ್ಯಕೀಯ ವೆಚ್ಚ 123 ಮಿಲಿಯನ್ ಡಾಲರ್ ಹಾಗೂ ಸಣ್ಣಪುಟ್ಟ ಗಾಯಗಳ ಚಿಕಿತ್ಸೆಗೆ 14 ಮಿಲಿಯನ್ ಡಾಲರ್ ನಷ್ಟು ವ್ಯಯ ಆಗಿದೆ.