ರೈತ ಕ್ರಾಂತಿ ಬಗ್ಗೆ ರಿಹಾನ್ನಾ ಟ್ವೀಟ್ | ಬಿಜೆಪಿ ಸರಕಾರದ ಪರ ಭಾರತದ ಸೆಲೆಬ್ರಿಟಿಗಳ ಟ್ವೀಟ್ ಕುರಿತು ಮಹಾರಾಷ್ಟ್ರ ಸರಕಾರದಿಂದ ತನಿಖೆ

Prasthutha|

ಮುಂಬೈ : ದೆಹಲಿಯಲ್ಲಿ ಬಿಜೆಪಿ ಸರಕಾರದ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ ಬೆಂಬಲಿಸಿ ಅಂತಾರಾಷ್ಟ್ರೀಯ ಖ್ಯಾತಿಯ ಪಾಪ್ ಗಾಯಕಿ ರಿಹಾನ್ನಾ ಮಾಡಿದ್ದ ಟ್ವೀಟ್ ಬಳಿಕ, ಭಾರತದ ಸೆಲೆಬ್ರಿಟಿಗಳು ಸರಕಾರದ ಪರವಾಗಿ ಮಾಡಿರುವ ಟ್ವೀಟ್ ಗಳ ಕುರಿತಂತೆ ತನಿಖೆ ನಡೆಸಲು ಮಹಾರಾಷ್ಟ್ರ ಸರಕಾರ ಮುಂದಾಗಿದೆ.

- Advertisement -

ಕೆಲವು ಸೆಲೆಬ್ರಿಟಿಗಳಿಂದ ಒಂದೇ ಸಮಯದಲ್ಲಿ ಒಂದೇ ರೀತಿಯ ಟ್ವೀಟ್ ಗಳು ಮಾಡಿರುವುದು ಕಂಡುಬಂದಿದೆ. ಹೀಗಾಗಿ, ಇದು ಯಾಕೆ ನಡೆಯಿತು ಎಂಬುದರ ಬಗ್ಗೆ ತನಿಖೆ ನಡೆಯಲಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸರಕಾರದ ಪರವಾಗಿ ಬೆಂಬಲಿಸುವಂತೆ ಸೆಲೆಬ್ರಿಟಿಗಳ ಮೇಲೆ ಬಿಜೆಪಿ ಒತ್ತಡ ಹೇರಿತ್ತೇ? ಎಂಬುದರ ಬಗ್ಗೆ ತನಿಖೆ ನಡೆಯಬೇಕೆಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದರು.

- Advertisement -

“ಅಕ್ಷಯ್ ಕುಮಾರ್ ಮತ್ತು ಸೈನಾ ನೆಹ್ವಾಲ್ ಪದಪದವೂ ಒಂದೇ ರೀತಿಯಲ್ಲಿ ಟ್ವೀಟ್ ಮಾಡಿದ್ದರು ಮತ್ತು ನಟ ಸುನೀಲ್ ಶೆಟ್ಟಿ ತಮ್ಮ ಟ್ವೀಟ್ ಅನ್ನು ಬಿಜೆಪಿ ನಾಯಕರೊಬ್ಬರಿಗೆ ಟ್ಯಾಗ್ ಮಾಡಿದ್ದರು. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆದರೆ, ಈ ಟ್ವೀಟ್ ವಿಷಯದಲ್ಲಿ ಸರಕಾರ ಇವರ ಮೇಲೆ ಒತ್ತಡ ಹೇರಿತ್ತೇ? ಎಂಬುದನ್ನು ಪರಿಶೀಲಿಸಬೇಕೆಂದು ನಾವು ಬಯಸಿದ್ದೇವೆ” ಎಂದು ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ಹೇಳಿದ್ದಾರೆ.

ದೆಹಲಿಯಲ್ಲಿ ರೈತರು ಕಳೆದ ಎರಡು ತಿಂಗಳುಗಳಿಂದ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಗಾಯಕಿ ರಿಹಾನ್ನಾ ಕೇವಲ, ಈ ಬಗ್ಗೆ ನಾವು ಯಾಕೆ ಮಾತನಾಡುತ್ತಿಲ್ಲ? ಎಂದು ಟ್ವೀಟ್ ಮಾಡಿದ್ದರು. ಅಷ್ಟಕ್ಕೇ, ಒಮ್ಮೆಗೇ ಎಚ್ಚೆತ್ತವರಂತೆ ನಟಿಸಿದ್ದ ಭಾರತದ ಸೆಲೆಬ್ರಿಟಿಗಳು ಸರಕಾರದ ಪರವಾಗಿ ಟ್ವೀಟ್ ಮಾಡಿ ಅಪಹಾಸ್ಯಕ್ಕೀಡಾಗಿದ್ದರು.

ಕೊರೆವ ಚಳಿಯಲ್ಲಿ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಪರವಾಗಿ ಒಂದು ಪದವನ್ನೂ ಆಡದ ಭಾರತದ ಸೆಲೆಬ್ರಿಟಿಗಳು ಏಕಾಏಕಿ ಒಂದೇ ಸ್ವರದಲ್ಲಿ ಮಾತನಾಡಿದ್ದುದು ಅನುಮಾನಗಳಿಗೆ ಕಾರಣವಾಗಿದೆ. ಬಹುತೇಕ ಸೆಲೆಬ್ರಿಟಿಗಳು ಮಾಡಿದ್ದ ಟ್ವಿಟ್ ನಲ್ಲಿ ಬಳಸಿದ್ದ ಹ್ಯಾಶ್ ಟ್ಯಾಗ್ ಗಳು ಮತ್ತು ರಿಹಾನ್ನಾ ಹೇಳಿಕೆಯನ್ನು ಪ್ರತಿರೋಧಿಸಿ, ಸರಕಾರ ಬಳಸಿದ್ದ ಹ್ಯಾಶ್ ಟ್ಯಾಗ್ ಒಂದೇ ಆಗಿದ್ದವು. ಬಹುತೇಕ ಎಲ್ಲರ ಟ್ವೀಟ್ ಗಳಲ್ಲಿ ‘amicable’ ಎಂಬ ಪದ ಸೇರಿದಂತೆ ಕೆಲವು ಪದಗಳು ಒಂದೇ ರೀತಿ ಬಳಕೆಯಾಗಿದ್ದುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗೆ ಕಾರಣವಾಗಿತ್ತು.     



Join Whatsapp