ಕೋಲ್ಕತ್ತಾ: ಸಫಾರಿಗೆ ಹೊರಟಿದ್ದ ಪ್ರವಾಸಿಗರ ವಾಹನಕ್ಕೆ ಎರಡು ಘೇಂಡಾಮೃಗಗಳು ಢಿಕ್ಕಿ ಹೊಡೆದ ಘಟನೆ ಜಲ್ದಪಾರಾ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ.
ಪ್ರವಾಸಿಗರು ಜಲ್ದಪಾರಾ ನ್ಯಾಶನಲ್ ಪಾರ್ಕ್ ನಲ್ಲಿ ಜೀಪ್ ನಲ್ಲಿ ಸಫಾರಿ ಮಾಡುತ್ತಿದ್ದರು. ಈ ವೇಳೆ ರಸ್ತೆಯ ಪಕ್ಕದ ಪೊದೆಗಳಲ್ಲಿ ಎರಡು ಘೇಂಡಾಮೃಗಗಳು ಕಾದಾಟದಲ್ಲಿ ತೊಡಗಿದ್ದವು. ಪ್ರವಾಸಿಗರು ಆ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿದ್ದರು.
ಈ ವೇಳೆ ಎರಡು ಘೇಂಡಾಮೃಗಳು ಇವರತ್ತ ಧಾವಿಸಿ ಬಂದಾಗ ಜೀಪು ಚಾಲಕ ಕೂಡಲೇ ವಾಹನವನ್ನು ಚಲಾಯಿಸಲು ಯತ್ನಿಸುತ್ತಾನೆ. ಆದರೆ ಈ ಪ್ರಯತ್ನದಲ್ಲಿ ಅವರ ವಾಹನ ಸ್ಕಿಡ್ ಆಗಿ ಕಂದಕಕ್ಕೆ ಉರುಳುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.
ಜೀಪ್ ಉರುಳಿ ಬಿದ್ದು ಎಲ್ಲಾ ಏಳು ಪ್ರವಾಸಿಗರು ಗಾಯಗೊಂಡಿದ್ದಾರೆ. ಕೆಲವರ ಮೂಳೆ ಮುರಿತವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿದ್ದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.