ಬಾರ್‌ ಕೌನ್ಸಿಲ್‌’ನ ಹಿರಿಯ ವಕೀಲರು ಸಿದ್ಧಪಡಿಸಿರುವ ಡ್ರಾಫ್ಟ್‌ ಬಿಲ್ ಅನ್ನು ಪರಿಶೀಲಿಸಿ ಕಾನೂನು ಅನುಷ್ಠಾನಗೊಳಿಸಿ: ಸಿದ್ದರಾಮಯ್ಯ

Prasthutha|

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳ ವಕೀಲರು ತಮಗೆ ಕಾನೂನಾತ್ಮಕ ರಕ್ಷಣೆ ಬೇಕು ಎಂಬ ಕಾರಣಕ್ಕೆ ಬೆಳಗಾವಿಯ ಸುವರ್ಣಸೌಧದ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದು, ನ್ಯಾಯ ಕೊಡಿಸುವ ಮಹತ್ತರ ಕಾಯಕ ನಿರ್ವಹಿಸುತ್ತಿರುವ ಅವರ ಬೇಡಿಕೆಯನ್ನು ಸರ್ಕಾರ ಸಕಾರಾತ್ಮಕವಾಗಿ ಆಲಿಸಿ, ಆದಷ್ಟು ಶೀಘ್ರ ಈಡೇರಿಸಬೇಕು ಎಂದು ವಿರೋಧ ಪಕ್ಷದ ನಾಯಕ  ಸಿದ್ದರಾಮಯ್ಯ ಇಂದಿನ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯ ಮಾಡಿದರು.

- Advertisement -

ರಾಜ್ಯದ ವಕೀಲರ ಮೇಲೆ ದೌರ್ಜನ್ಯ ಮತ್ತು ಹಲ್ಲೆಗಳು ಆಗುತ್ತವೆ ಎಂಬ ಕಾರಣಕ್ಕೆ ತಮಗೆ ರಕ್ಷಣೆ ನೀಡುವ ಕಾನೂನು ಬೇಕು ಎಂದು ಬೆಂಗಳೂರು ಬಾರ್‌ ಕೌನ್ಸಿಲ್ ಅಸೋಸಿಯೇಷನ್‌’ನ ಹಿರಿಯ ನ್ಯಾಯವಾದಿಗಳು ಒಂದು ಕರಡು ಮಸೂದೆಯನ್ನು ತಯಾರು ಮಾಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಕಾನೂನು ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ನೀಡಿದ್ದಾರೆ, ನಿನ್ನೆ ಸುವರ್ಣಸೌಧದ ಮುಂಭಾಗ ಪ್ರತಿಭಟನೆ ಹಾಗೂ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಹಿರಿಯ ವಕೀಲರಾದ ಹೊಳ್ಳ ಅವರು, ಹನುಮಂತರಾಯರು, ಪೊನ್ನಣ್ಣನವರು ಸೇರಿಕೊಂಡು ಒಂದು ಕರಡು ಮಸೂದೆಯನ್ನು ತಯಾರು ಮಾಡಿದ್ದಾರೆ. ವಕೀಲರು ನ್ಯಾಯ ಒದಗಿಸಲು ಕಕ್ಷಿದಾರರ ಪರವಾಗಿ ವಾದ ಮಾಡುತ್ತಾರೆ. ಇದರಿಂದ ಅನೇಕ ಬಾರಿ ಎದುರಿನವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಇಂಥವರಿಗೆ ರಕ್ಷಣೆ ಇಲ್ಲದೆಹೋದರೆ ನಿರ್ಭೀತವಾಗಿ ನ್ಯಾಯ ಒದಗಿಸಲು ಕಷ್ಟವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಇಡೀ ರಾಜ್ಯದ ನ್ಯಾಯವಾದಿಗಳು ಬೆಳಗಾವಿಗೆ ಬಂದಿದ್ದಾರೆ. ಅವರೇ ಒಂದು ಕರಡು ಮಸೂದೆಯನ್ನು ತಯಾರಿ ಮಾಡಿದ್ದಾರೆ, ಕಾನೂನು ಇಲಾಖೆ ಅದನ್ನು ಪರಿಶೀಲನೆ ಮಾಡಿ ಸಮರ್ಪಕ ಅನ್ನಿಸಿದಲ್ಲಿ ಕೂಡಲೇ ಒಂದು ಕಾನೂನನ್ನು ಜಾರಿ ಮಾಡಬೇಕು ಎಂದು ರಾಜ್ಯದ ಎಲ್ಲಾ ವಕೀಲರ ಪರವಾಗಿ ಸರ್ಕಾರವನ್ನು ಒತ್ತಾಯ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.



Join Whatsapp