ಮೈಸೂರು: ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ಯಾರಿಂದಲೂ ನನಗೆ ತೊಂದರೆ ಆಗಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅಪಹರಣ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿರುವ ಪ್ರಕರಣದ ಸಂತ್ರಸ್ತೆ ಮಹಿಳೆ ವೀಡಿಯೋ ಮೂಲಕ ಹೇಳಿಕೆ ನೀಡಿದ್ದಾರೆ.
ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ನನ್ನ ಮಗ ತಪ್ಪು ತಿಳಿದು ದೂರು ಕೊಟ್ಟಿದ್ದಾನೆ. ನಾನು ಎಲ್ಲಿಯೂ ಹೋಗಿಲ್ಲ. ನನ್ನ ಸಂಬಂಧಿಕರ ಮನೆಯಲ್ಲಿದ್ದೇನೆ. ರೇವಣ್ಣ, ಪ್ರಜ್ವಲ್, ಭವಾನಿ ಅಕ್ಕ ಅಥವಾ ಸತೀಶ್ ಬಾಬಣ್ಣ ಆಗಲಿ ಯಾರಿಂದಲೂ ತೊಂದರೆ ಆಗಿಲ್ಲ. ನನ್ನನ್ನು ಚೆನ್ನಾಗಿ ನೋಡಿಕೊಂಡು ಕಳಿಸಿಕೊಟ್ಟಿದ್ದಾರೆ. ನಾನು ಆರಾಮವಾಗಿದ್ದೇನೆ. ಸಂಬಂಧಿಕರ ಮನೆಯಲ್ಲಿ ಟಿವಿ ನೋಡುವಾಗ ವಿಚಾರ ಗೊತ್ತಾಯಿತು. ಮೊಬೈಲ್‌ನಲ್ಲಿ ಬಂದಿ ರುವ ವೀಡಿಯೋಗೂ ನನಗೂ ಸಂಬಂಧ ಇಲ್ಲ. ಯಾರೂ ಗಾಬರಿ ಆಗುವುದು ಬೇಡ. ನಾನು ಸುರಕ್ಷಿತವಾಗಿದ್ದೇನೆ. ವಾಪಸ್ ಬರುತ್ತೇನೆ. ಎಲ್ಲಿ ಯಾರಿಗೆ ಮಾಹಿತಿ ಕೊಡಬೇಕೋ ಕೊಡುತ್ತೇನೆ. ಯಾರೂ ಮನೆ ಹತ್ತಿರ ಹೋಗಬೇಡಿ, ಪೊಲೀಸ್‌ನವರು ಟಾರ್ಚರ್ ಕೊಡಬೇಡಿ. ನಾವು ಕೂಲಿ ಮಾಡಿಕೊಂಡು ಇರುವವರು. ಹೊಟ್ಟೆ ಮೇಲೆ ಹೊಡಿಯಬೇಡಿ. ಏನಾದರೂ ತೊಂದರೆಯಾದರೆ ನಾನೇ ಬಂದು ಹೇಳಿಕೆ ಕೊಡುತ್ತೇನೆ. ನನಗಾಗಲಿ, ಕುಟುಂಬದವರಿ ಗಾಗಲಿ ತೊಂದರೆಯಾದರೆ ನೀವೇ ಜವಾಬ್ದಾರರು ಎಂದು ಪ್ರಕರಣದ ಸಂತ್ರಸ್ತೆ ಎನ್ನಲಾದ ಮಹಿಳೆ ವೀಡಿಯೋ ಮೂಲಕ ಹೇಳಿದ್ದಾರೆ.
ವೀಡಿಯೋದಲ್ಲಿ ಹೇಳಿಕೆ ನೀಡುತ್ತಿರುವ ಸಂತ್ರಸ್ತೆ ಎನ್ನಲಾದ ಮಹಿಳೆಯು ಎಸ್‌ಐಟಿಯವರು ರಕ್ಷಣೆ ಮಾಡಿ, ಕರೆದುಕೊಂಡು ಹೋದ ಮಹಿಳೆಯೇ ಎನ್ನುವುದೂ ಗೊತ್ತಾಗಿಲ್ಲ. ಮಹಿಳೆಯ ಮಾತುಗಳನ್ನು ಕೇಳಿಸಿಕೊಂಡರೆ, ಅದು ಎಸ್‌ಐಟಿಯವರು ರಕ್ಷಣೆ ಮಾಡುವ ಮೊದಲು ಮಾಡಿಕೊಂಡಿರುವ ವೀಡಿಯೋ ಎಂಬ ಶಂಕೆ ಮೂಡುತ್ತದೆ. ಪೊಲೀಸರು ಮನೆ ಬಳಿ ಹೋಗಿ ಟಾರ್ಚರ್ ಕೊಡಬೇಡಿ. ತೊಂದರೆ ಆದರೆ ನಾನೇ ಬಂದು ಹೇಳಿಕೆ ಕೊಡುತ್ತೇನೆ ಎಂಬ ಮಹಿಳೆ ಹೇಳಿಕೆ ಗಮನಿಸಿದರೆ ರಕ್ಷಣೆಗೂ ಪೂರ್ವದಲ್ಲೇ ಈ ವೀಡಿಯೋ ಚಿತ್ರೀಕರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಆದರೆ ಇದರಿಂದಾಗಿ ಪ್ರಕರಣ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.