ಮಧ್ಯಪ್ರದೇಶ: ಯೋಗ ಶಿಬಿರದಲ್ಲಿ ನೃತ್ಯ ಮಾಡುವಾಗ 73 ವರ್ಷದ ವ್ಯಕ್ತಿ, ನಿವೃತ್ತ ಯೋಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಶುಕ್ರವಾರ ನಡೆದಿದೆ. ಅವರು ಮೃತರಾಗಿದ್ದನ್ನು ತಿಳಿಯದೆ ಯೋಗ ಕ್ಲಾಸಿನ ಒಂದು ಭಾಗವಾಗಿ ಅವರು ಮಲಗಿದ್ದಾರೆಂದು ತಿಳಿದ ಶಿಬಿರಾರ್ಥಿಗಳು ಚಪ್ಪಾಳೆ ತಟ್ಟುತ್ತಾ ಇದ್ದರು. ಘಟನೆಯ ವೀಡಿಯೋ ವೈರಲ್ ಆಗುತ್ತಿದೆ.
ಶಿಬಿರಾರ್ಥಿಗಳ ಎದುರು ರಾಷ್ಟ್ರಧ್ವಜ ಹಿಡಿದು ಕೆಲ ನಿಮಿಷಗಳ ನೃತ್ಯ ಮಾಡಿದರು. ಈ ವೇಳೆ ಅವರಿಗೆ ಧ್ವಜವನ್ನು ಪಕ್ಕಕ್ಕೆಯಿಟ್ಟು ಅಲ್ಲೇ ನೆಲಕ್ಕುರುಳಿ ಪ್ರಾಣ ಬಿಟ್ಟಿದ್ದಾರೆ.
ಮಧ್ಯಪ್ರದೇಶದ ಇಂದೋರ್ ಯೋಗ ಕೇಂದ್ರದಲ್ಲಿ ಆಸ್ತ ಯೋಗ ಕ್ರಾಂತಿ ಅಭಿಯಾನದ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಗು ಮತ್ತು ತೂಕ ಇಳಿಸುವ ಯೋಗಕ್ಕೆ ಹೆಸರಾದ ಬಲ್ವಿಂದರ್ ಸಿಂಗ್ ಛಾಬ್ರಾ ಎಂಬ ನಿವೃತ್ತ ಸೈನಿಕ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ವೇದಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಒಳಗಾಗಿ ಅವರು ನೆಲಕ್ಕೆ ಬಿದ್ದಿದ್ದಾರೆ. ಆದರೆ, ಇದು ಕೂಡ ಡ್ಯಾನ್ಸ್ನ ಒಂದು ಭಾಗವೆಂದು ತಿಳಿದ ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಾ ಕುಳಿತಿದ್ದಾರೆ. ಬಹಳ ಹೊತ್ತಾದ ನಂತರವೂ ಅವರು ಮೇಲಕ್ಕೆ ಏಳದ ಹಿನ್ನೆಲೆಯಲ್ಲಿ ಹತ್ತಿರ ಹೋಗಿ ನೋಡಿದಾಗ ಅವರು ಸಾವನ್ನಪ್ಪಿರುವುದು ಗೊತ್ತಾಗಿದೆ.
ಸ್ಥಳದಲ್ಲೇ ಸಿಪಿಆರ್ ಪಡೆದು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಛಾಬ್ರಾ ಅವರ ಕುಟುಂಬವು ಅವರ ಕೊನೆಯ ವಿಧಿಗಳಿಗೂ ಮೊದಲು ಅವರ ಕಣ್ಣುಗಳು, ಚರ್ಮ ಮತ್ತು ಇತರ ಅಂಗಗಳನ್ನು ದಾನ ಮಾಡಿದ್ದಾರೆ. ಈ ಮೂಲಕ ಬಲ್ವಿಂದರ್ ಸಿಂಗ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.