ಮಂಗಳೂರು: ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು, ಬೆಳ್ಳಾರೆಯ ಮಸೂದ್ ಮತ್ತು ಮಂಗಳಪೇಟೆಯ ಫಾಝಿಲ್ ಕೊಲೆ ಪ್ರಕರಣಗಳನ್ನು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರು ಎಂಬಾತನ ಕೊಲೆಯನ್ನು ಮಾತ್ರ NIA ವಹಿಸಿರುವುದು ಸರಿಯಾದ ಕ್ರಮವಲ್ಲ. ಈ ರೀತಿ ಮಾಡುವುದಿದ್ದರೆ ಎಲ್ಲಾ ಪ್ರಕರಣಗಳನ್ನು NIA ವಹಿಸಿ ಎಂದು ಅವರು ಒತ್ತಾಸಿದರು.
ಕೋಮುವಾದಿ ಸಂಘಟನೆಗಳ ಸಹಕಾರದೊಂದಿದೆ ಈ ಎಲ್ಲಾ ಹತ್ಯೆಗಳು ನಡೆದಿದೆ. ಈ ನಿಟ್ಟಿನಲ್ಲಿ ಮೂರು ಕೊಲೆಗಳನ್ನು ಯೂತ್ ಕಾಂಗ್ರೆಸ್ ಕಟು ಶಬ್ದಗಳಿಂದ ಖಂಡಿಸುತ್ತದೆ. ಈ ಹಿಂದೆ ದ್ವೇಷಕಾರುವ ಭಾಷಣಕ್ಕೆ ಬ್ರೇಕ್ ಹಾಕಿದ್ದರೆ ಈ ಅಮಾಯಕರ ಹತ್ಯೆಯನ್ನು ತಡೆಯಬಹುದಿತ್ತು. ಚುನಾಯಿತ ಪ್ರತಿನಿಧಿಗಳು ಶವ ರಾಜಕೀಯದಲ್ಲಿ ತೊಡಗಿಸಿಕೊಂಡಿರುವುದು ದುರಂತ ಎಂದು ತಿಳಿಸಿದರು.
ಮುಖ್ಯಮಂತ್ರಿ ಬೊಮ್ಮಾಯಿ ಅವರು ತಾನು ಸಮಸ್ತ ಕನ್ನಡಿಗರ ಪ್ರತಿನಿಧಿ ಎಂಬ ವಾಸ್ತವವನ್ನು ಮರೆತು ವ್ಯವಹರಿಸುತ್ತಿದ್ದಾರೆ. ಪ್ರವೀಣ್ ನೆಟ್ಟಾರು ಅವರ ನಿವಾಸಕ್ಕೆ ಹೋದ ಅವರು, ಅಲ್ಲೇ ಪಕ್ಕದಲ್ಲಿದ್ದ ಮಸೂದ್ ಮನೆಗೆ ಸೌಜನ್ಯಕ್ಕಾದರೂ ಭೇಟಿ ನೀಡಿಲ್ಲ. ಅಲ್ಲದ್ ಕೊಲೆಯಾದ ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ಸರ್ಕಾರದ ಪರಿಹಾರ ಮೊತ್ತವನ್ನು ನೀಡದೇ ತಾರತಮ್ಯವೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಸರ್ಫರಾಜ್ ನವಾಝ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಮಾನಂದ ಪೂಜಾರಿ, ನವಾಲ್ ಬಿ.ಕೆ, ನವೀದ್ ಆಕ್ತರ್, ಇಸ್ಮಾಯಿಲ್ ಬಿ.ಎಸ್, ಮೊಹಮ್ಮದ್ ಕಬೀರ್, ಸೌಹಾನ್ ಎಸ್.ಕೆ, ಇಸ್ಮಾಯಿಲ್ ಸಿದ್ದಿಕ್, ಫಯಾಜ್ ಅಮ್ಮೇಮಾರ್ ಎಂಬವರು ಉಪಸ್ಥಿತರಿದ್ದರು.