ಪುತ್ತೂರು: ಪುತ್ತೂರು ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ವಿರುದದ್ಧ ಆಕ್ರೋಶ ಭುಗಿಲೆದ್ದಿದೆ. ಗೌಡ ಸಮುದಾಯಕ್ಕೆ ಸೇರಿದ ಸುಳ್ಯ ಕ್ಷೇತ್ರದ ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್ ನೀಡಿರುವ ಬಗ್ಗೆ ಹಿಂದುತ್ವ ಕಾರ್ಯಕರ್ತರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿಂದುತ್ವ ಮುಖಂಡ ಅರುಣಕುಮಾರ್ ಪುತ್ತಿಲ ಅವರು ಪಕ್ಷೇತರರಾಗಿ ಕಣಕ್ಕಿಳಿಯಬೇಕು ಎಂಬ ಒತ್ತಡಗಳು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತವಾಗುತ್ತಿದೆ.
ಗೌಡ ಸಮುದಾಯ ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ನೀಡಬೇಕಿತ್ತು. ಕ್ಷೇತ್ರದ ಹೊರಗಿನವರಿಗೆ ಟಿಕೆಟ್ ನೀಡಬಾರದಿತ್ತು. ಹಿಂದುತ್ವ ಪ್ರತಿಪಾದಿಸುವವರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆಯನ್ನು ಅಭ್ಯರ್ಥಿ ಆಯ್ಕೆ ವೇಳೆ ಮುಂದಿಟ್ಟಿದ್ದರೂ, ಅದನ್ನು ಪರಿಗಣಿಸಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಪ್ರವೀಣ್ ನೆಟ್ಟಾರು ಹತ್ಯೆ ವೇಳೆ ಕಾರು ಅಲ್ಲಾಡಿಸುವ ಮೂಲಕ ಬಿಸಿ ತಗುಲಿಸಲಾಗಿತ್ತು. ಇನ್ನು ಪುತ್ತೂರಿಗೆ ಬಂದರೆ ಮತ್ತೆ ಅದನ್ನು ನೆನಪಿಸುವ ಸಂದರ್ಭ ಎದುರಾಗಿದೆ ಎಂದು ಕೆಲ ಹಿಂದುತ್ವ ಕಾರ್ಯಕರ್ತರು ನಳಿನ್ಕುಮಾರ್ ಕಟೀಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ.