ಕ್ಯಾನ್ ಬೆರಾ: ಆಕಾಶಗಂಗೆ (ಮಿಲ್ಕಿ ವೇ) ಅಥವಾ ಕ್ಷೀರಪಥವು ನಮ್ಮ ಭೂಮಿ ಸಹಿತ ಇತರ ಗ್ರಹಗಳು ಮತ್ತು ಸೌರವ್ಯೂಹವನ್ನು ಒಳಗೊಂಡಿರುವ ಗ್ಯಾಲಕ್ಸಿಯಾಗಿದೆ. ಮಾನವನಿಗೆ ಕಂಡು ಹಿಡಿಯಲು ಅಸಾಧ್ಯವಾದ ಜಗತ್ತಿನ ಅನಂತವಾದ ಅನೇಕ ರಹಸ್ಯಗಳು ಆಕಾಶಗಂಗೆಯಲ್ಲಿ ಅಡಗಿವೆ. ಅವುಗಳನ್ನು ಬಿಚ್ಚಿಡಲು ವೈಜ್ಞಾನಿಕ ಜಗತ್ತು ತನ್ನ ಸಂಶೋಧನೆ ಮುಂದುವರಿಸಿದೆ. ಇದೀಗ ಕ್ಷೀರಪಥದ ಬಗ್ಗೆ ಒಂದು ಸಂಶೋಧನೆಯು ಇಡೀ ವೈಜ್ಞಾನಿಕ ಜಗತ್ತನ್ನೇ ದಿಗ್ಭ್ರಮೆಗೊಳಿಸಿದೆ. ಆಕಾಶಗಂಗೆಯಲ್ಲಿ ಹಿಂದೆಂದೂ ಕಾಣಸಿಗದ ಅಜ್ಞಾತ ವಸ್ತುವೊಂದು ಕಂಡು ಬಂದಿದೆ ಎಂದು ಆಸ್ಟ್ರೇಲಿಯಾದ ವಿಜ್ಞಾನಿಗಳು ಹೇಳುತ್ತಿದ್ದಾರೆ.
ಈ ವಸ್ತುವನ್ನು ಮೊದಲು ಕಂಡುಹಿಡಿದಿರುವುದು ಟೈರಾನ್ ಓಡೋಹರ್ಟಿ ಕರ್ಟಿನ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದಾನೆ. ಈ ವಸ್ತುವು ಪ್ರತಿ 18 ನಿಮಿಷಗಳಿಗೊಮ್ಮೆ ಒಂದು ನಿಮಿಷದ ವರೆಗೆ ಹೆಚ್ಚು ಶಕ್ತಿಯೊಂದಿಗೆ ರೇಡಿಯೋ ತರಂಗಗಳನ್ನು ಬಿಡುಗಡೆ ಮಾಡುತ್ತದೆ. ಜಗತ್ತಿನಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುವ ವಸ್ತುಗಳು ಈ ಮೊದಲು ದಾಖಲಿಸಲ್ಪಟ್ಟಿದ್ದರೂ, ಸುಮಾರು ಒಂದು ನಿಮಿಷ ಶಕ್ತಿಯನ್ನು ತೀವ್ರವಾಗಿ ಹೊರಸೂಸುವ ವಸ್ತುವು ತುಂಬಾ ಅಸಾಮಾನ್ಯವಾಗಿದೆ ಎಂದು ಸಂಶೋಧಕರು ಹೇಳುತ್ತಾರೆ. ಈ ಅಜ್ಞಾತ ವಸ್ತು ಏನಾಗಿರಬಹುದು ಎಂಬ ಸಂಶೋಧನೆ ನಡೆಯುತ್ತಿದೆ.
ಪರ್ತ್ ಮೂಲದ ಇಂಟರ್ ನ್ಯಾಷನಲ್ ಸೆಂಟರ್ ಫಾರ್ ರೇಡಿಯೋ ಆಸ್ಟ್ರೋನಮಿ ರಿಸರ್ಚ್ ನ ಸಂಶೋಧಕರು ಹೇಳುವಂತೆ ಸಂಶೋಧನೆ ನಡೆಸುವ ಮಧ್ಯೆ ಈ ಅಜ್ಞಾತ ವಸ್ತುವು ಹಲವಾರು ಬಾರಿ ಕಣ್ಮರೆಯಾಗಿ ಪುನಃ ಪ್ರತ್ಯಕ್ಷವಾಗುತ್ತಿತ್ತು. ಭೂಮಿಯಿಂದ 4,000 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಈ ವಸ್ತುವು ಹೆಚ್ಚು ಪ್ರಕಾಶಮಾನ ಬಲವಾದ ಕಾಂತೀಯ ಕ್ಷೇತ್ರವನ್ನು ಹೊಂದಿದೆ. ಈ ವಸ್ತು ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದು ನ್ಯೂಟ್ರಾನ್ ನಕ್ಷತ್ರ ಅಥವಾ ವಿಕಾಸದ ಅಂತ್ಯವನ್ನು ತಲುಪುವ ವೈಟ್ ಡ್ವಾರ್ಫ್ ಆಗಿರಬಹುದು ಎಂದು ಕೆಲವು ಸಂಶೋಧಕರು ಹೇಳುತ್ತಾರೆ.