ಹಿಜಾಬ್ ಮೇಲ್ಮನವಿ ಅರ್ಜಿಯ ತುರ್ತು ವಿಚಾರಣೆಗೆ ಮನವಿ: ‘ನೋಡೋಣ, ಸಮಯಕೊಡಿ’ ಎಂದ ಸುಪ್ರೀಂಕೋರ್ಟ್

Prasthutha|

ನವದೆಹಲಿ: ಹಿಜಾಬ್ ನಿಷೇಧ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್ ನ ತೀರ್ಪಿನ ವಿರುದ್ಧ ಸಲ್ಲಿಸಿರುವ ಮೇಲ್ಮನವಿಯನ್ನು ಶೀಘ್ರ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಗೆ ಬುಧವಾರ ಮನವಿ ಮಾಡಿದಾಗ, ನೋಡೋಣ, ಸ್ವಲ್ಪ ಸಮಯಕೊಡಿ ಎಂದು ಪೀಠ ಹೇಳಿದೆ.

- Advertisement -

ಹಿರಿಯ ವಕೀಲರಾದ ಸಂಜಯ್ ಹೆಗ್ಡೆ ಅವರು ಇಂದು ವಿಷಯ ಪ್ರಸ್ತಾಪಿಸಿ, ಕರ್ನಾಟಕ ಹೈಕೋರ್ಟ್ ಆದೇಶದಿಂದ ಹಲವು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಈಗಾಗಲೇ ಪರೀಕ್ಷೆ ಆರಂಭಗೊಂಡಿರುವುದರಿಂದ ಮೇಲ್ಮನವಿಯನ್ನು ತುರ್ತು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.

ಆದಾಗ್ಯೂ, ತುರ್ತು ವಿಚಾರಣೆಗೆ ನಿರಾಕರಿಸಿದ ಪೀಠ, ಇತರರು ಕೂಡ ಪ್ರಸ್ತಾಪಿಸಿದ್ದಾರೆ, ನೋಡೋಣ, ನಮಗೆ ಸಮಯ ಕೊಡಿ, ನಾವು ಪರಿಶೀಲಿಸುತ್ತೇವೆ ಎಂದು ಹೇಳಿತು.

- Advertisement -

  ಹೋಳಿ ರಜೆಯ ನಂತರ ಪ್ರಕರಣವನ್ನು ಪಟ್ಟಿ ಮಾಡುವುದಾಗಿ ಸಿಜೆಐ ನೇತೃತ್ವದ ಪೀಠ ತಿಳಿಸಿತು.

ಮಂಗಳವಾರವೇ ಹಿಬಾ ನಾಝ್ ಎಂಬ ಮುಸ್ಲಿಮ್ ವಿದ್ಯಾರ್ಥಿನಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ವಕೀಲ ಅನಸ್ ತನ್ವೀರ್ ಅವರ ಮೂಲಕ ಮೇಲ್ಮನವಿ ಸಲ್ಲಿಸಿದ್ದರು.

ಕುಂದಾಪುರ ಸರ್ಕಾರಿ ಪಿಯು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ಆಯಿಶಾ ಶಿಫಾತ್ ಕೂಡ ಸುಪ್ರೀಂಕೋರ್ಟ್ ಗೆ ಮತ್ತೊಂದು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ.

ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ ಎಂದು ನಿನ್ನೆ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿ, ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದಿತ್ತು.



Join Whatsapp