ಗಣರಾಜ್ಯೋತ್ಸವ ದಿನದ ಹಿಂಸಾಚಾರ| ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದ ಅರ್ಜಿ ವಜಾ

Prasthutha|

ಹೊಸದಿಲ್ಲಿ: ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾನೂನನ್ನು ವಿರೋಧಿಸಿ ಗಣರಾಜ್ಯೋತ್ಸವದ ದಿನ ರೈತರು ನಡೆಸಿದ ಟ್ರ್ಯಾಕ್ಟರ್ ರ್ಯಾಲಿಯ ಸಂದರ್ಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದ ವೇಳೆ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾ ಮಾಡಿದೆ.

- Advertisement -

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠ, ವಿಚಾರಣೆ ವೇಳೆ ಅರ್ಜಿದಾರರು ಹಾಜರಿಲ್ಲದ ಕಾರಣ ಅರ್ಜಿಯನ್ನು ವಜಾಗೊಳಿಸಿದೆ.

ದೆಹಲಿ ನಿವಾಸಿ ಧನಂಜಯ್ ಜೈನ್ ಎನ್ನುವವರು ಜನವರಿಯಲ್ಲಿ ರೈತರ ಪ್ರತಿಭಟನೆಯ ನೆಪದಲ್ಲಿ ಪ್ರತಿಭಟನೆಗೆ ಕೂರುವ ಜನರನ್ನು ಹಾಗೂ ಎಲ್ಲಾ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ತೆರವುಗೊಳಿಸಬೇಕು ಎಂದು ಕೂಡ ಅರ್ಜಿ ಸಲ್ಲಿಸಿದ್ದರು.

- Advertisement -

ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತಕ್ಷಣವೇ ಜಾರಿಗೆ ಬರುವಂತೆ ದೆಹಲಿ ಪೊಲೀಸ್ ಕಮಿಷನರ್ ಅವರನ್ನು ತಮ್ಮ ಸ್ಥಾನದಿಂದ ವಜಾಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಅಲ್ಲದೆ, ಪ್ರಮುಖ ಸ್ಮಾರಕಗಳನ್ನು ರಕ್ಷಿಸಲು ಮತ್ತು ದೆಹಲಿ ನಾಗರಿಕರ ಜೀವ ಮತ್ತು ಆಸ್ತಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ಯಾರಾಮಿಲಿಟರಿ ಪಡೆಯನ್ನು ನಿಯೋಜಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು.

‘ಜನವರಿ 26ರ ಗಣರಾಜ್ಯೋತ್ಸವದಂದು ರಾಜಧಾನಿ ದೆಹಲಿಯಲ್ಲಿ ಗಂಭೀರ ಮತ್ತು ತುರ್ತು ಪರಿಸ್ಥಿತಿ ಉಂಟಾಗಿತ್ತು. ಹಲವು ದಿನಗಳಿಂದ ನಡೆಯುತ್ತಿದ್ದ ರೈತರ ಪ್ರತಿಭಟನೆಯು ಹಿಂಸಾತ್ಮಕ ರೂಪ ಪಡೆಯಿತು. ರೈತರು ಆಯುಧಗಳು, ಹಾಕಿ ಸ್ಟಿಕ್ಗಳು, ಕತ್ತಿಗಳು ಮತ್ತು ಇತರ ಆಕ್ರಮಣಕಾರಿ ಆಯುಧಗಳೊಂದಿಗೆ ದೆಹಲಿಯ ಒಳಭಾಗವನ್ನು ಪ್ರವೇಶಿಸಿ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕದಡಿದರು. ಗಣರಾಜ್ಯೋತ್ಸವದ ಆಚರಣೆಯನ್ನು ಅವಮಾನಿಸಿದರು ಎಂದು’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಸಾವಿರಾರು ಪ್ರತಿಭಟನಾಕಾರರು ದೆಹಲಿಯ ಕೆಂಪು ಕೋಟೆ ಮತ್ತು ನಗರದ ಇತರ ನಿರ್ಣಾಯಕ ಸ್ಥಳಗಳಿಗೆ ಹತೋಟಿ ಮಾಡಲಾಗದ ಮತ್ತು ನಿಯಂತ್ರಿಸಲಾಗದ ಸ್ಥಿತಿಯಲ್ಲಿ ಬಂದರು. ಈ ವೇಳೆ ದೆಹಲಿ ಪೊಲೀಸರು ಸಾರ್ವಭೌಮತ್ವವನ್ನು ರಕ್ಷಿಸುವ ಮೂಲಕ ತನ್ನ ಗೌರವವನ್ನು ಉಳಿಸಿಕೊಳ್ಳುವಾಗ ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಅನುಮತಿ ನೀಡಲು ದೆಹಲಿ ಪೊಲೀಸರು ಸಮಯೋಚಿತ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದೂ ಕೂಡ ಅರ್ಜಿಯಲ್ಲಿ ಆರೋಪಿಸಲಾಗಿದೆ.

Join Whatsapp