75ನೇ ಗಣರಾಜ್ಯೋತ್ಸವ ಆಚರಣೆಗೆ ಇಡೀ ದೇಶ ಸಜ್ಜಾಗಿದ್ದು, ಪ್ರಧಾನ ಕಾರ್ಯಕ್ರಮ ನವದೆಹಲಿಯಲ್ಲಿ ಇಂದು ಬೆಳಗ್ಗೆ ನಡೆಯುತ್ತಿದೆ. ದೇಶದ ಸೇನಾ ಸಾಮರ್ಥ್ಯ, ಶ್ರೀಮಂತ ಸಂಸ್ಕೃತಿಯು ದೆಹಲಿಯ ಕರ್ತವ್ಯ ಪಥದಲ್ಲಿ ಒಂದೂವರೆ ಗಂಟೆ ಅನಾವರಣಗೊಳ್ಳುತ್ತಿದೆ. ರಾಷ್ಟ್ರಪತಿ ದೌಪದಿ ಮುರ್ಮು ಅವರು ಗಣರಾಜ್ಯೋತ್ಸವದ ನೇತೃತ್ವ ವಹಿಸಲಿದ್ದು, ಸಮಾರಂಭದ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಪಾಲ್ಗೊಳ್ಳುತ್ತಿದ್ದಾರೆ.
ಬೆಳಗ್ಗೆ 10.30ಕ್ಕೆ ಸಮಾರಂಭ ಆರಂಭವಾಗಲಿದ್ದು, ಒಂದೂವರೆ ತಾಸು ನಡೆಯಲಿದೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸೇನಾ ಸ್ಮಾರಕಕ್ಕೆ ಭೇಟಿ ನೀಡಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಿದ್ದಾರೆ. ಇದಾದ ಬಳಿಕ ರಾಷ್ಟ್ರ ಪತಿ ಮುರ್ಮು ಹಾಗೂ ಮ್ಯಾಕ್ರೋನ್ ಅವರು ಸಾಂಪ್ರದಾಯಿಕ ಕುದುರೆಗಾಡಿಯಲ್ಲಿ ಬರಲಿದ್ದಾರೆ. 40 ವರ್ಷಗಳ ಬಳಿಕ ಈ ಸಂಪ್ರದಾಯವನ್ನು ಪುನಾರಂಭಿಸಲಾಗುತ್ತಿದೆ.
ಭಾರತವನ್ನು ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಘೋಷಿಸಿ 74 ವರ್ಷಗಳು ತುಂಬಿವೆ. ಅತಿದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿರುವ ಭಾರತ ಸಂವಿಧಾನವನ್ನು ಅಳವಡಿಸಿಕೊಂಡ ದಿನವನ್ನು ಗಣರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತದೆ.
75ನೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮುಖ್ಯ ಅತಿಥಿಯಾಗಿದ್ದಾರೆ. 6ನೇ ಬಾರಿ ಫ್ರಾನ್ಸ್ ಅಧ್ಯಕ್ಷರು ಗಣರಾಜ್ಯೋತ್ಸವದಲ್ಲಿ ಅತಿಥಿಯಾಗಿ ಭಾಗಿಯಾಗುತ್ತಿರುವುದು ವಿಶೇಷವಾಗಿದೆ.
ಈ ಬಾರಿಯ ಗಣರಾಜ್ಯೋತ್ಸವದಲ್ಲಿ 16 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ 9 ಸಚಿವಾಲಯಗಳ ಮತ್ತು ವಿವಿಧ ಸಂಸ್ಥೆಗಳ 25 ಸ್ತಬ್ಧಚಿತ್ರಗಳು ಈ ಬಾರಿ ಪ್ರದರ್ಶನಗೊಳ್ಳಲಿವೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಛತ್ತೀಸ್ಗಢ, ಗುಜರಾತ್, ಹರ್ಯಾಣ, ಜಾರ್ಖಂಡ್, ಲಡಾಖ್, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಉತ್ತರ ಪ್ರದೇಶಗಳ ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳಲಿವೆ. ಆದರೆ ಈ ಬಾರಿ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ ದೊರೆತಿಲ್ಲ.
ಈ ಬಾರಿಯ ಗಣರಾಜ್ಯೋತ್ಸವವನ್ನು ಮಹಿಳಾ ಕೇಂದ್ರಿತವಾಗಿ ‘ಲೋಕತಂತ್ರ ಕಿ ಮಾತೃಕಾ’ ಎಂಬ ಥೀಮ್ನಲ್ಲಿ ರೂಪಿಸಲಾಗಿದೆ. ಇದೇ ಮೊದಲ ಬಾರಿಗೆ 2 ಸಂಪೂರ್ಣ ಮಹಿಳಾ ಸೇನಾ ತುಕಡಿ ಪರೇಡ್ನಲ್ಲಿ ಭಾಗವಹಿಸಲಿವೆ. ವಾಯುಪಡೆಯ 5 ಮಹಿಳಾ ಲೆಫ್ಟಿನೆಂಟ್ಗಳ ಪೈಕಿ 4 ಮಂದಿ ಪರೇಡ್ನಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿ 100 ಮಂದಿ ಮಹಿಳೆಯರ ತಂಡ ವಿವಿಧ ಶಾಸ್ತ್ರೀಯ ಸಂಗೀತ ವಾದ್ಯಗಳನ್ನು ನುಡಿಸಲಿದ್ದಾರೆ.