ಬೆಂಗಳೂರು : ಬೆಂಗಳೂರಿನಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮದಿಂದ ನಡೆಯುತ್ತಿದ್ದು, ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲರು ಧ್ವಜಾರೋಹಣ ನೆರವೇರಿಸಿದ್ದಾರೆ.
ನಂತರ ಮಾತನಾಡಿದ ಅವರು, ಸಂವಿಧಾನವು ಭಾರತದ ನಾಗರೀಕರಿಗೆ ನ್ಯಾಯ, ಸ್ವಾತಂತ್ರ್ಯ, ಹಾಗೂ ಸಮಾನತೆಯ ಅವಕಾಶವನ್ನು ಒದಗಿಸಿದೆ ಎಂದರು.
ಗೃಹಲಕ್ಷ್ಮೀ ಮತ್ತು ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಭೀಕರ ಬರಗಾಲ ಹಿನ್ನೆಲೆ ಬರಪೀಡಿತ ತಾಲೂಕುಗಳನ್ನ ಘೋಷಿಸಲಾಗಿದೆ ಎಂದರು. ಗ್ಯಾರಂಟಿ ಯೋಜನೆಗಳಿಂದ ಎಲ್ಲರಿಗೂ ಅನುಕೂಲವಾಗಿದೆ ಎಂದು ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಉಪಸ್ಥಿತರಿದ್ದಾರೆ. ಈ ಬಾರಿ ಗಣರಾಜ್ಯೋತ್ಸವದಲ್ಲಿ ಕೇರಳ ಪೊಲೀಸ್ ಪಡೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಎನ್ಸಿಸಿ, ಸೇವಾದಳ, ವಿವಿಧ ಶಾಲಾ ತಂಡಗಳು ಸೇರಿದಂತೆ 38 ತುಕಡಿಗಳಲ್ಲಿ ಒಟ್ಟು 1,150 ಜನರು ಭಾಗಿಯಾಗುತ್ತಿವೆ.
7 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಆಹ್ವಾನಿತರಿಗಾಗಿ ಹಳದಿ ಕಾರ್ಡ್ ವಿತರಿಸಲಾಗಿದೆ. ಮಾಣೆಕ್ ಷಾ ಗ್ರೌಂಡ್ ಸುತ್ತಮುತ್ತ ಹೈ ಸೆಕ್ಯುರಿಟಿ ಮಾಡಲಾಗಿದೆ. ಮೈದಾನದ ಸುತ್ತಲೂ 100 ಸಿಸಿಟಿವಿ ಅಳವಡಿಸಲಾಗಿದ್ದು, ಕೆಲವೊಂದು ಮಾರ್ಗಗಳನ್ನು ಮಾಡಲಾಗಿದೆ.
ಸರ್ಕಾರದ ಗ್ಯಾರಂಟಿಗಳನ್ನು ಕೊಂಡಾಡಿದ ರಾಜ್ಯಪಾಲ ಗೆಹ್ಲೋಟ್
ವಚನ ಭಂಗಕ್ಕಿಂತ ದೊಡ್ಡ ದೇಶದ್ರೋಹ ಮತ್ತೊಂದಿಲ್ಲ ಎಂದು ನಾನು ಬಲವಾಗಿ ನಂಬಿದವನು. ಇದು ನಮ್ಮ ಪಕ್ಷದ ಬದ್ಧತೆ ಕೂಡಾ ಆಗಿದೆ. ಭರವಸೆಗಳನ್ನು ನೀಡಿ ಚುನಾವಣೆಯಲ್ಲಿ ಗೆದ್ದು ಬಂದಿರುವ ನಮಗೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ಇದೆ. ಇದನ್ನು ನಾವು ಮರೆತಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಗ್ಯಾರಂಟಿ ಯೋಜನೆಗಳ ಭರವಸೆಯ ಈಡೇರಿಕೆಗೆ ಮೊದಲ ಸಚಿವ ಸಂಪುಟದಲ್ಲಿಯೇ ತಾತ್ವಿಕ ಅಂಗೀಕಾರ ಪಡೆದು ಜಾರಿ ಪ್ರಕ್ರಿಯೆಗೆ ಚಾಲನೆ ನೀಡಿದ್ದೆವು. ಇದರ ಫಲವಾಗಿ ಇಂದು ಐದು ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಂಡಿವೆ ಎನ್ನುವುದನ್ನು ನಿಮ್ಮ ಮುಂದೆ ಹೇಳಲು ಹೆಮ್ಮೆ ಪಡುತ್ತೇನೆ ಎಂದು ರಾಜ್ಯಪಾಲರು ಸರಕಾರವನ್ನು ಕೊಂಡಾಡಿದ್ದಾರೆ.
ದೇಶದ ಯಾವುದೇ ರಾಜ್ಯ ಸರ್ಕಾರ ಕೂಡಾ ಇಂತಹದ್ದೊಂದ ಸಾಧನೆ ಮಾಡಿಲ್ಲ ಎನ್ನುವುದನ್ನು ವಿಶ್ವಾಸಪೂರ್ವಕವಾಗಿ ಹೇಳಬಲ್ಲೆ. ಇದು ರಾಜ್ಯದ ಜನತೆ ನಮ್ಮ ಸರ್ಕಾರಕ್ಕೆ ಕೊಟ್ಟಿರುವ ಶಕ್ತಿ ಎನ್ನುವುದನ್ನು ನಾವು ಮರೆತಿಲ್ಲ.ಗ್ಯಾರಂಟಿ ಯೋಜನೆಗಳ ಜೊತೆಯಲ್ಲಿ ನಮ್ಮ ಸರ್ಕಾರದ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ, ಪಶುಭಗ್ಯ, ಋಣಮುಕ್ತಭಾಗ್ಯ, ವಿದ್ಯಾಸಿರಿ, ಆರೋಗ್ಯಭಾಗ್ಯ, ಜಲಭಾಗ್ಯ ಕಾರ್ಯಕ್ರಮಗಳು ಕೂಡಾ ಯಶಸ್ವಿಯಾಗಿ ಜಾರಿಯಲ್ಲಿದೆ. ಇವೆಲ್ಲ ಯೋಜನೆಗಳು ದುಡಿಯುವ ಕೈಗಳನ್ನು ಇನ್ನಷ್ಟು ಬಲಪಡಿಸಿ ಅವುಗಳು ರಾಜ್ಯದ ಅಭಿವೃದ್ಧಿಗೆ ಬಳಕೆಯಾಗುವಂತೆ ಮಾಡುವ ಕಾರ್ಯಕ್ರಮಗಳು ಎಂದು ರಾಜ್ಯಪಾಲರು ಸರಕಾರದ ಯೋಜನೆಗಳನ್ನು ಕೊಂಡಾಡಿದ್ದಾರೆ.