ಲಕ್ನೋ: ಉತ್ತರ ಪ್ರದೇಶದಲ್ಲಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸಬೇಕಾಗಿರುವುದರಿಂದ ಸರ್ಕಾರದ ನಾಲ್ವರು ಉನ್ನತ ಅಧಿಕಾರಿಗಳನ್ನು ತಕ್ಷಣವೇ ತಮ್ಮ ಹುದ್ದೆಯಿಂದ ವಜಾಗೊಳಿಸಬೇಕೆಂದು ಸಮಾಜವಾದಿ ಪಕ್ಷ (ಎಸ್ಪಿ) ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ಚುನಾವಣೆಗೆ ಒಳಪಡುವ ರಾಜ್ಯದಲ್ಲಿ ಗೃಹ ಖಾತೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ತಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ( ಮಾಹಿತಿ ) ನವನೀತ್ ಸೆಹಗಲ್, ಎಡಿಜಿ ( ಕಾನೂನು ಮತ್ತು ಸುವ್ಯವಸ್ಥೆ ) ಪ್ರಶಾಂತ್ ಕುಮಾರ್ ಮತ್ತು ಎಡಿಜಿ ಅಮಿತಾಬ್ ಯಶ್ ಅವರು ಬಿಜೆಪಿ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಈ ಮೇಲಿನ ಅಧಿಕಾರಿಗಳನ್ನು ವಜಾಗೊಳಿಸದೆ ಸ್ವತಂತ್ರ, ನಿಷ್ಪಕ್ಷಪಾತ ಮತ್ತು ನ್ಯಾಯಯುತವಾಗಿ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಎಸ್ಪಿ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಚೌಧರಿ, ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರನ್ನು ಒತ್ತಾಯಿಸಿದ್ದಾರೆ.