ಅತಿವೃಷ್ಠಿ, ಅನಾವೃಷ್ಟಿಯಿಂದ ಹಾನಿಯಾಗಿರುವ ಕಾಫಿ ಬೆಳೆಗೆ ಪರಿಹಾರ: ಎಚ್. ಟಿ ಮೋಹನ್ ಕುಮಾರ್ ಆಗ್ರಹ

Prasthutha|

ಹಾಸನ:  ಅತಿವೃಷ್ಠಿ ಹಾಗೂ ಅನಾವೃಷ್ಟಿಯಿಂದ ಹಾನಿಯಾಗಿರುವ ಕಾಫಿ ಬೆಳೆಗೆ ಹೆಕ್ಟೇರ್ ಗೆ 50 ಸಾವಿರ ಪರಿಹಾರ ನೀಡಬೇಕು,  ಹಾಗೂ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಎಂದು ಕರ್ನಾಟಕ  ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್. ಟಿ ಮೋಹನ್ ಕುಮಾರ್ ಒತ್ತಾಯಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಕಳೆದ ಅನೇಕ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ತೋಟಗಾರಿಕೆ ಬೆಳೆಗಳಾದ ಕಾಫಿ, ಅಡಿಕೆ, ಕಾಳುಮೆಣಸು ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣ ಹಾನಿಯಾಗಿದೆ, ಜಿಲ್ಲೆಯಲ್ಲಿ ಒಟ್ಟು  40 ಸಾವಿರ ಎಕ್ಟೀರ್ ಜಮೀನಿನಲ್ಲಿ 400-500 ಕೋಟಿ ರೂಪಾಯಿ ಮೊತ್ತದ ಬೆಳೆ ಹಾನಿಯಾಗಿದೆ, ಶೇಕಡಾ 80 ರಷ್ಟು ಬೆಳೆ ಹಾನಿಯಾಗಿದ್ದು ಕಾಫಿ ಮಂಡಳಿ ಅಧಿಕಾರಿಗಳು ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

ಒಂದೆಡೆ ಕಾಡಾನೆ ಹಾಗೂ ವನ್ಯ ಜೀವಿಗಳ ಹಾವಳಿಯಿಂದ ಬೆಳೆ ಕಳೆದುಕೊಂಡು ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ, ಇನ್ನೊಂದೆಡೆ ಕಾಡಾನೆ ದಾಳಿಯಿಂದ ಪ್ರಾಣ ಹಾನಿಯಾಗಿದ್ದು ಕಾಡಾನೆ ಹಾವಳಿ ನಿಯಂತ್ರಣಕ್ಕೆ ಸರ್ಕಾರ ಸಂಪೂರ್ಣ ವಿಫಲವಾಗಿದೆ ಸರ್ಕಾರ ಬೆಳೆಗಾರರ ಹಿತ ರಕ್ಷಣೆಗೆ ಕ್ರಮ ವಹಿಸದೆ ಇದ್ದರೆ  ಕಾಫಿ ಉದ್ಯಮ ಸಾಧ್ಯವಿದೆ ಎಂದು ತಮ್ಮ ಅಳಲು ತೋಡಿಕೊಂಡರು.

- Advertisement -

ಕೃಷಿ  ಇಲಾಖೆ ಕಾಫಿ ಬೆಳೆಗಾರರಿಗೆ  ನ್ಯಾನೋ ಯೂರಿಯಾ ಉಪಯೋಗಿಸಲು ಒತ್ತಾಯಪೂರ್ವಕವಾಗಿ ನೀಡುತ್ತಿದೆ ನ್ಯಾನೋ ಯೂರಿಯಾ ಕಾಫಿ ಬೆಳೆಗಾರರಿಗೆ ಯಾವುದೇ ಉಪಯೋಗ ಆಗುವುದಿಲ್ಲ ಕೂಡಲೇ ಕೃಷಿ ಇಲಾಖೆ ಈ ಬಗ್ಗೆ ಗಮನ ಹರಿಸಿ ನ್ಯಾನೋ ಯೂರಿಯಾ ವನ್ನು ಒತ್ತಾಯ ಪೂರ್ವಕವಾಗಿ ನೀಡುವುದನ್ನು ನಿಲ್ಲಿಸಬೇಕು ಎಂದರು.

ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಫಿ ಬೆಳೆಗಾರರು 40 ವರ್ಷಗಳಿಂದ ಸರ್ಕಾರಿ ಜಾಮೀನು ಸಾಗುವಳಿ ಮಾಡಿಕೊಂಡು ಬೆಳೆ ಬೆಳೆದುಕೊಂಡು ಜೀವನ ನಡೆಸುತ್ತಿದ್ದಾರೆ, ಇದೀಗ ಅರಣ್ಯ ಇಲಾಖೆಯ ಅಧಿಕಾರಿಗಳು ಬೆಳಗಾರರಿಗೆ ಮಾಹಿತಿ ಅಥವಾ  ನೋಟಿಸ್ ನೀಡದೆ ಏಕಾಏಕಿ ನಾಶ ಮಾಡುತ್ತಿರುವ ನಡೆಯನ್ನು ಒಕ್ಕೂಟ ಖಂಡಿಸುತ್ತದೆ, ಬೆಳೆಗಾರರಿಗೆ ಮಂಜೂರಾಗಿರುವ  ದಾಖಲೆಗಳ ಆಧಾರದಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಯ ಜಂಟಿ ಸರ್ವೆ ಮಾಡುವ ವರೆಗೂ ತೆರವು ಕಾರ್ಯಕ್ಕೆ ಮುಂದಾಗಬಾರದು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ. ಬಿ ಕೃಷ್ಣಪ್ಪ, ಉಪಾಧ್ಯಕ್ಷ ನಾಗರಾಜ್, ಶಿವಕುಮಾರ್, ಏ.ಎನ್ ನಾಗರಾಜ್, ಸಚಿನ್ ಇತರರು ಹಾಜರಿದ್ದರು.

Join Whatsapp