ಬೆಂಗಳೂರು: 2002 ರಲ್ಲಿ ನಡೆದ ಬಿಲ್ಕೀಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆಗೊಳಿಸುವ ಗುಜರಾತ್ ಸರ್ಕಾರದ ನಿರ್ಧಾರವನ್ನು ನ್ಯಾಷನಲ್ ವುಮೆನ್ಸ್ ಫ್ರಂಟ್- NWF ಅಧ್ಯಕ್ಷೆ ಲುಬ್ನಾ ಮೆನ್ಹಾಝ್ ತೀವ್ರವಾಗಿ ಖಂಡಿಸಿದ್ದಾರೆ. ಈ ಬಿಡುಗಡೆಯು ನ್ಯಾಯದ ಮೇಲಿನ ಕೋಮು ರಾಜಕೀಯದ ವಿಜಯವಾಗಿದೆ ಎಂದು ಅವರು ಟೀಕಿಸಿದ್ದಾರೆ.
2002 ರಲ್ಲಿ ಗುಜರಾತ್’ನಲ್ಲಿ ಅಮಾಯಕ ಮುಸ್ಲಿಮರ ಹತ್ಯಾಕಾಂಡ ನಡೆದಾಗಿನಿಂದ, ರಾಜ್ಯ ಸರ್ಕಾರ ನ್ಯಾಯಕ್ಕೆ ಅಡ್ಡಿಪಡಿಸುವ ಎಲ್ಲಾ ಪ್ರಯತ್ನಗಳನ್ನೂ ಮಾಡಿದೆ ಎಂದು ಅವರು ದೂರಿದ್ದಾರೆ.
ಬಿಲ್ಕಿಸ್ ಬಾನು ಪ್ರಕರಣವು ಶಿಕ್ಷೆ ಪ್ರಕರಣಗೊಂಡ ಪ್ರಕರಣಗಳಲ್ಲಿ ಒಂದಾಗಿದೆ. ಮುಸ್ಲಿಮ್ ಗೃಹಿಣಿ ಬಿಲ್ಕಿಸ್ ಬಾನು ಅವರ ವಿರೋಚಿತ ಕಾನೂನು ಹೋರಾಟಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಬಿಲ್ಕಿಸ್ ಬಾನು ಗಲಭೆಯ ಸಮಯದಲ್ಲಿ ಅತ್ಯಂತ ಕೆಟ್ಟ ಕ್ರೌರ್ಯದಿಂದ ಬದುಕುಳಿದ ಮಹಿಳೆಯಾಗಿದ್ದಾರೆ ಎಂದು ಅವರು ಹೇಳಿದರು.
5 ತಿಂಗಳ ಗರ್ಭಿಣಿ ಬಿಲ್ಕಿಸ್ ಬಾನು ಅವರು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು ಮತ್ತು ಆಕೆಯ ಎರಡು ವರ್ಷದ ಮಗು, ಕುಟುಂಬದ ಇತರ 7 ಸದಸ್ಯರನ್ನು ಬರ್ಬರವಾಗಿ ಹತ್ಯೆ ಮಾಡುವುದನ್ನು ಕೂಡ ಕಣ್ಣಾರೆ ನೋಡಿದ್ದಾರೆ. ಇದೀಗ ಶಿಕ್ಷೆಗೊಳಗಾದ ಅಪರಾಧಿಗಳು ಜೈಲಿನಿಂದ ಹೊರಬರುತ್ತಿರುವುದು ದುರಂತವಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಸ್ಲಿಮ್ ವಿರೋಧಿ ಹತ್ಯಾಕಾಂಡದಲ್ಲಿ ತೊಡಗಿರುವ ಹಿಂದುತ್ವ ಅಪರಾಧಿಗಳನ್ನು ರಕ್ಷಿಸಲು ಅಧಿಕಾರದ ದುರುಪಯೋಗದ ವಿರುದ್ಧ ಧ್ವನಿಯೆತ್ತಬೇಕು ಎಂದು ನ್ಯಾಷನಲ್ ವುಮೆನ್ಸ್ ಫ್ರಂಟ್ ನಾಗರಿಕ ಸಮಾಜಕ್ಕೆ ಕರೆ ನೀಡುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.