ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆ: ಸರ್ಕಾರದ ನಡೆಯನ್ನು ಸಮರ್ಥಿಸಿದ ಸಚಿವ ಪ್ರಹ್ಲಾದ್ ಜೋಶಿ

Prasthutha|

ಬೆಂಗಳೂರು: 2002ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನು ಅವರ ಮೇಲೆ ನಡೆದ ಅಮಾನುಷ ಸಾಮೂಹಿಕ ಅತ್ಯಾಚಾರ ಮತ್ತು ಕುಟುಂಬದ ಸದಸ್ಯರ ಕೊಲೆ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆಗೊಳಿಸಲು ಕೇಂದ್ರ ಸರ್ಕಾರ ಸಮ್ಮತಿಸಿದ ನಡೆಯನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸಮರ್ಥಿಸಿದ್ದಾರೆ.

- Advertisement -

ಈ ಕುರಿತು ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಇದು ಸರ್ಕಾರ ಮತ್ತು ಸಂಬಂಧಪಟ್ಟವರು ತೆಗೆದ ನಿರ್ಧಾರವಾಗಿದೆ. ಇದು ಕಾನೂನಿನ ಪ್ರಕ್ರಿಯೆ ಆಗಿರುವುದರಿಂದ ನನಗೆ ಅದರಲ್ಲಿ ಯಾವುದೇ ತಪ್ಪು ಕಂಡುಬಂದಿಲ್ಲ ಎಂದು ಅವರು ತಿಳಿಸಿದರು.

ಜೈಲಿನಲ್ಲಿ ಸಾಕಷ್ಟು ಸಮಯವನ್ನು ಕಳೆದ ಅಪರಾಧಿಗಳನ್ನು ಬಿಡುಗಡೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಈ ಕಾನೂನಿನ ಪ್ರಕಾರ ಅವರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

- Advertisement -

ಘೋರ ಮತ್ತು ಗಂಭೀರ ಅಪರಾಧವೆಸಗಿರುವವರನ್ನು ಅವಧಿಗೂ ಮೊದಲು ಬಿಡುಗಡೆಗೊಳಿಸುತ್ತಿರುವ ಸರ್ಕಾರದ ನಡೆಗೆ ವ್ಯಾಪಕ ಆಕ್ರೋಶದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಜೋಶಿ, ಗುಜರಾತ್ ಸರ್ಕಾರ ನೀಡಿದ ಉತ್ತಮ ನಡವಳಿಕೆಯ ಆಧಾರದಲ್ಲಿ ಅವರನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಕಳೆದ ಜೂನ್’ನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಹಾರ್ದಿಕ್ ಪಟೇಲ್ ಅವರು ಕೂಡ ಅಪರಾಧಿಗಳ ಬಿಡುಗಡೆಯನ್ನು ಸ್ವಾಗತಿಸಿದ್ದಾರೆ. ರಾಜ್ಯ ಸರ್ಕಾರ ಕೈದಿಗಳನ್ನು ಉತ್ತಮ ನಡವಳಿಕೆಗಾಗಿ ಬಿಡುಗಡೆಗೊಳಿಸುವ ಅಧಿಕಾರಿವನ್ನು ಪಡೆದಿದೆ. ಈ ಮಧ್ಯೆ ಸರ್ಕಾರದ ನಡೆಯನ್ನು ತಪ್ಪಾಗಿ ಚಿತ್ರೀಕರಿಸಲಾಗುತ್ತಿದೆ. ಯಾವುದೇ ಅಪರಾಧಿ ಅವರ ಕೃತ್ಯಕ್ಕೆ ಶಿಕ್ಷೆ ಅನುಭವಿಸಬೇಕು ಎಂದು ತಿಳಿಸಿದ್ದಾರೆ.

ದೇಶವ್ಯಾಪಿಯಾಗಿ ಪ್ರಕಟವಾದ ಆಕ್ರೋಶದ ಮಧ್ಯೆ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಅಪರಾಧಿಗಳನ್ನು ಬಿಡುಗಡೆಗೊಳಿಸಲಾಗಿದ್ದು, ಗುಜರಾತ್ ಜೈಲಿನ ಹೊರಗೆ ಅವರನ್ನು ಹೂಮಾಲೆ ಹಾಕಿ, ಸಿಹಿ ಹಂಚಿ ಸ್ವಾಗತಿಸಲಾಗಿತ್ತು.



Join Whatsapp