ಬಿಲ್ಕೀಸ್ ಬಾನು ಅತ್ಯಾಚಾರಿಗಳ ಬಿಡುಗಡೆ: ಗುಜರಾತ್ ಸರಕಾರದ ನಡೆ ಖಂಡಿಸಿದ ಕಾಂಗ್ರೆಸ್

Prasthutha|

ಅತ್ಯಾಚಾರಿಗಳನ್ನು ಆರತಿ ಎತ್ತಿ ಸ್ವಾಗತಿಸುವುದು ಅಮೃತ ಮಹೋತ್ಸವವೇ? – ಕಾಂಗ್ರೆಸ್

- Advertisement -

ನವದೆಹಲಿ: ಸ್ವಾತಂತ್ರ್ಯದ ದಿನದಂದು ಸ್ತ್ರೀ ಸುರಕ್ಷೆ, ಸ್ತ್ರೀ ಸಬಲೀಕರಣದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ ಕೆಲವೇ ಗಂಟೆಗಳ ಬಳಿಕ ಗುಜರಾತ್ ಸರಕಾರ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟವರನ್ನು ಶಿಕ್ಷೆ ವಿನಾಯಿತಿ ನೀಡಿ ಜೈಲಿನಿಂದ ಬಿಡುಗಡೆ ಮಾಡುತ್ತಿದೆ ಎಂದು ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.

ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ 5 ತಿಂಗಳ ಗರ್ಭಿಣಿ ಬಿಲ್ಕೀಸ್ ಬಾನುಳನ್ನು ಸಾಮೂಹಿಕ ಅತ್ಯಾಚಾರಗೈದ ಪ್ರಕರಣದಡಿ 11 ಮಂದಿ ಜೀವಾವಾಧಿ ಶಿಕ್ಷೆಗೆ ಒಳಗಾಗಿದ್ದರು. ಇವರನ್ನು ಸನ್ನಡತೆಯ ಆಧಾರದಲ್ಲಿ ಗುಜರಾತ್ ಸರಕಾರ ಶಿಕ್ಷೆ ವಿನಾಯಿತಿ ನೀಡಿ ಬಿಡುಗಡೆ ಗೊಳಿಸಿದ್ದು, ಇದನ್ನು ಕಾಂಗ್ರೆಸ್ ಸಹಿತ ಹಲವರು ಖಂಡಿಸಿದ್ದಾರೆ.

- Advertisement -

ಇದು ಬಿಜೆಪಿ ಸ್ವಾತಂತ್ರ್ಯ ದಿನಾಚರಣೆಯಾಗಿದೆ ಎಂದು ಎಐಎಂಐಎಂನ ಅಸಾದುದ್ದೀನ್ ಉವೈಸಿ ಟೀಕಿಸಿದ್ದಾರೆ.

ಇನ್ನು ಈ ವಿಚಾರವಾಗಿ ಪತ್ರಕಾಗೋಷ್ಟಿ ನಡೆಸಿದ AICCಯ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಚಯರ್‌ಮಾನ್ ಪವನ್ ಖೇರಾ, ನಮಗೆ ನಿಜವಾದ ನರೇಂದ್ರ ಮೋದಿ ಯಾರೆಂದೇ ಗೊತ್ತಾಗುತ್ತಿಲ್ಲ. ಕೆಂಪು ಕೋಟೆಯಲ್ಲಿ ನಿಂತು ಸುಳ್ಳು ಭಾಷಣ ಮಾಡುತ್ತಿರುವವರೋ ಅಥವಾ ತಮ್ಮ ಗುಜರಾತ್ ಸರಕಾರಕ್ಕೆ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಲು ಹೇಳುತ್ತಿರುವವರೋ ಎಂದು ಮೋದಿಯ ದ್ವಿಮುಖ ಧೋರಣೆಯನ್ನು ಪ್ರಶ್ನಿಸಿದ್ದಾರೆ.

ಜೈಲಿನಿಂದ ಹೊರಬರುತ್ತಿರುವವರನ್ನು ಆರತಿ ಎತ್ತಿ ತಿಲಕವಿಟ್ಟು ಸ್ವಾಗತಿಸುವುದನ್ನು ನೋಡಿದ್ದೇನೆ. ಇದೇನಿದು? ಇದುವೇನಾ ಅಮೃತ ಮಹೋತ್ಸವ ಎಂದು ಅವರು ಪ್ರಶ್ನಿಸಿದ್ದಾರೆ.

ಗಲಭೆಯ ವೇಳೆ ಬಿಲ್ಕೀಸ್ ಬಾನು‌ ಐದು ತಿಂಗಳ ಗರ್ಭಿಣಿಯಾಗಿದ್ದಳು. ಆಕೆಯ ಕಣ್ಣೆದುರಲ್ಲೇ 3 ವರ್ಷದ ಮಗಳು ಸಹಿತ 14 ಮಂದಿ ಕುಟುಂಬದ ಸದಸ್ಯರನ್ನು ಪೈಶಾಚಿವಾಗಿ ಹತ್ಯೆಗೈದಿದ್ದರು ಹಂತಕರು. ಘಟನೆಯಲ್ಲಿ ಬದುಕುಳಿದಿದ್ದ ಬಿಲ್ಕೀಸ್ ಬಾನು ಕಾನೂನು ಹೋರಾಟದ ಮೂಲಕ ಇವರಿಗೆ ಶಿಕ್ಷೆಯಾಗುವಂತೆ ಮಾಡಿದ್ದರು.

ಜೀವಾವಧಿ ಶಿಕ್ಷೆಗೊಳಪಟ್ಟವರು ಕನಿಷ್ಟ 14 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂಬುದು ಕಾನೂನು. ಇದನ್ನೇ ಮುಂದಿಟ್ಟ ಆರೋಪಿಗಳ ಪೈಕಿ ಓರ್ವ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಆದರೆ ಸುಪ್ರೀಂ ಕೋರ್ಟ್ ಈ ವಿಚಾರವನ್ನು ಸರಕಾರಕ್ಕೆ ಬಿಟ್ಟುಕೊಟ್ಟಿತ್ತು. ಗೋದ್ರಾದ ಜಿಲ್ಲಾಧಿಕಾರಿಯ ಅಧ್ಯಕ್ಷತೆಯ ಸಮಿತಿಯೊಂದನ್ನು ಗುಜರಾತ್ ಸರಕಾರ ರಚಿಸಿದ್ದು, ಈ ಸಮಿತಿಯ ಶಿಫಾರಸ್ಸು ಮೇರೆಗೆ ಅಪರಾಧಿಗಳಿಗೆ ಶಿಕ್ಷೆ ವಿನಾಯಿತಿ ನೀಡಲಾಗಿದೆ.

Join Whatsapp