ಅತೀಕುರ್ರಹ್ಮಾನ್ ಜೀವ ಉಳಿಸಲು ಕೂಡಲೇ ಅವರನ್ನು ಬಿಡುಗಡೆ ಮಾಡಿ: ತುಷಾರ್ ಗಾಂಧಿ, ಎಲ್.ಹನುಮಂತಯ್ಯ, ಬಿ.ಕೆ.ಹರಿಪ್ರಸಾದ್ ಸೇರಿ ಸಂಸದರು, ಗಣ್ಯರಿಂದ ಆಗ್ರಹ

Prasthutha|

ನವದೆಹಲಿ: ಹತ್ರಾಸ್ ಪ್ರಕರಣದಲ್ಲಿ ಸುಳ್ಳು ಆರೋಪದಲ್ಲಿ ಬಂಧಿಸಲ್ಪಟ್ಟಿರುವ ವಿದ್ಯಾರ್ಥಿ ನಾಯಕ ಅತೀಕುರ್ರಹ್ಮಾನ್ ಅವರ ಜೀವಕ್ಕೆ ಅಪಾಯವಿದ್ದು, ಅವರನ್ನು ಶೀಘ್ರವೇ ಬಿಡುಗಡೆ ಮಾಡಿ, ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂದು ಸಂಸದರು, ಶಾಸಕರು, ವಿದ್ಯಾರ್ಥಿ ನಾಯಕರು ಸೇರಿ ವಿವಿಧ ಗಣ್ಯರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

- Advertisement -

ತೀವ್ರ ಎದೆ ನೋವಿನ ಕಾರಣಕ್ಕೆ ಅತಿಕುರ್ರಹ್ಮಾನ್ ಅವರನ್ನು ಆಗಸ್ಟ್ 29ರಂದು ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಂದಿನಿಂದಲೂ ಹೃದಯ ಸಂಬಂಧಿ ಖಾಯಿಲೆಗಳಿಂದ ಬಳಲುತ್ತಿದ್ದ ಅತೀಕ್ ಅವರು 2021ರ ಅಕ್ಟೋಬರ್ ನಲ್ಲಿ ಈ ಸಂಬಂಧ ಎಐಐಎಂಎಸ್ ನಲ್ಲಿ ಅಯೋರ್ಟಿಕ್ ರೆಗುರ್ಜಿಟೇಶನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2020ರ ಅಕ್ಟೋಬರ್ 5ರಿಂದ ಅತಿಕುರ್ರಹ್ಮಾನ್ ಜೈಲಿನಲ್ಲಿ ಇದ್ದಾರೆ. ಅವರನ್ನು ಹತ್ರಾಸ್ ಗೆ ತೆರಳುತ್ತಿದ್ದ ದಾರಿ ಮಧ್ಯೆ ಪತ್ರಕರ್ತ ಸಿದ್ದಿಕ್ ಕಾಪ್ಪನ್ ಅವರೊಂದಿಗೆ ಬಂಧಿಸಲಾಗಿದೆ. ಸದ್ಯ ಅವರಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ. ಆದ್ದರಿಂದ ತಕ್ಷಣ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಹತ್ರಾಸ್ ದಲಿತ ಯುವತಿಯ ಅತ್ಯಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶದ ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಬಿಜೆಪಿ ಸರಕಾರ ಕೂಡ ಪೊಲೀಸರ ಅನ್ಯಾಯದ ಪರವಾಗಿ ನಿಂತಿದೆ. ಇಡೀ ದೇಶವು ಹತ್ರಾಸ್ ಸಂತ್ರಸ್ತರ ಪರ ಧ್ವನಿ ಎತ್ತಿದೆ. ಆಗ ಸಹಜವಾಗಿಯೇ ಆ ಕುಟುಂಬದ ಭಾಗವಾಗಲು ಅತಿಕುರ್ರಹ್ಮಾನ್ ಬಯಸಿದ್ದರು. ಆದರೆ ಸಾರ್ವಜನಿಕರನ್ನು ಈ ವಿಷಯದಿಂದ ದೂರವಿಡಲು ಪೊಲೀಸರು ಅತೀಕ್ ಅವರನ್ನು ಉಗ್ರರೊಂದಿಗೆ ಸಂಬಂಧ, ಕೋಮು ಗಲಭೆಯ ಕಟ್ಟು ಕತೆ ಕಟ್ಟಿ ಯುಎಪಿಎ ಕಾಯ್ದೆಯಡಿ ಬಂಧಿಸಿದ್ದಾರೆ. ಅತೀಕ್ ಬಂಧನವು ಮಾಧ್ಯಮದಿಂದ ಸರಕಾರದ ಕೊಳಕು ಮುಖವನ್ನು ಮುಚ್ಚಿಡುವುದಾಗಿದೆ ಎಂದು ಅವರು ಪತ್ರದಲ್ಲಿ ಟೀಕಿಸಿದ್ದಾರೆ.

- Advertisement -

ಈಗ ಅತಿಕುರ್ರಹ್ಮಾನ್ ಆರೋಗ್ಯವು ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಶಸ್ತ್ರಚಿಕಿತ್ಸೆಯ ಬಳಿಕ ಅವರು ಎರಡು ಬಾರಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಜೈಲಿನಲ್ಲಿ ಸರಿಯಾದ ಆಹಾರ ನೀಡದೆ, ಅನಾರೋಗ್ಯ ವಾತಾವರಣದಲ್ಲಿ ಇಟ್ಟಿದ್ದೇ ಅವರ ಆರೋಗ್ಯ ಹದಗೆಡಲು ಕಾರಣವಾಗಿದೆ. ಇದರ ವಿರುದ್ಧ ಕಾನೂನು ಸಮರ ನಡೆದಿದೆ.

ಈಗ ಈ ವಿದ್ಯಾರ್ಥಿ ನಾಯಕ ಅತೀಕ್ ಅವರ ತನ್ನ ಎಡ ಕೈ ಅಲುಗಾಡಿಸಲಾಗದ ಸ್ಥಿತಿಯಲ್ಲಿದ್ದು, ದೇಹವು ಸ್ಪರ್ಶ ಜ್ಞಾನ ಕಳೆದುಕೊಂಡಿದೆ. ಶಸ್ತ್ರಚಿಕಿತ್ಸೆಯ ಬಳಿಕ ಅವರು ತೀವ್ರ ಅನಾರೋಗ್ಯ ಪೀಡಿತನಾಗಿರುವುದು ಇದು ಎರಡನೆಯ ಬಾರಿಯಾಗಿದೆ. ಅದ್ದರಿಂದ ಕಾನೂನು ಸಂಬಂಧಿತರು ಅತೀಕ್ ರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಪೋಷಣೆ ಒದಗಿಸಬೇಕು ಎಂದು ಗಣ್ಯರು ಆಗ್ರಹಿಸಿದ್ದಾರೆ.

ಮೋದಿ ಸರ್ಕಾರದ ದ್ವೇಷ ರಾಜಕೀಯ ಇದು. ಸುಳ್ಳು ಮೊಕದ್ದಮೆಯಲ್ಲಿ ಸಿಕ್ಕಿಸಿರುವುದು ಅನ್ಯಾಯ. ಅತೀಕುರ್ರಹ್ಮಾನ್ ಪರ ನ್ಯಾಯಾಂಗ ತನ್ನ ಜವಾಬ್ದಾರಿ ನಿರ್ವಹಿಸಬೇಕು. ಭಾರತವು ಜೈಲು ಕಂಬಿಗಳ ಹಿಂದೆ ದುರಂತ ಮರಣ ಕಂಡ ಇನ್ನೊಬ್ಬ ಸ್ಟಾನ್ ಸ್ವಾಮಿಯನ್ನು ನೋಡಲು ನಾವು ತಯಾರಿಲ್ಲ. ಅತೀಕುರ್ರಹ್ಮಾನ್ ಜೀವ ಅಪಾಯದಲ್ಲಿದೆ; ನಾವೆಲ್ಲ ಆತನ ಪರ ಸ್ವರ ಎತ್ತಬೇಕಾಗಿದೆ ಎಂದು ಗಣ್ಯರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಅತೀಕ್ ಹಾಗೂ ಇತರ ಮುಗ್ಧರನ್ನು 2020ರ ಅಕ್ಟೋಬರ್ 5ರಂದು ನಡೆಯದ ಅಪರಾಧವೊಂದಕ್ಕೆ ಬಂಧಿಸಲಾಗಿದೆ. ಉತ್ತರ ಪ್ರದೇಶದ ಜೈಲಿನಲ್ಲಿ ಎರಡು ವರ್ಷಗಳಿಂದ ಸರಿಯಾದ ವಿಚಾರಣೆಯೇ ಇಲ್ಲದೆ ಅವರು ಇದ್ದಾರೆ. ಆತನ ಜೀವ ಉಳಿಸುವ ಚಿಕಿತ್ಸೆ ಸಿಗುವಂತೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಗಣ್ಯರು ಆಗ್ರಹಿಸಿದ್ದಾರೆ.

ಸಂಸದರಾದ ಅಬ್ದುಲ್ ಖಾಲಿಕ್, ಎಲ್.ಹನುಮಂತಯ್ಯ, ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಮಹಾತ್ಮಗಾಂಧಿಯವರ ಮೊಮ್ಮಗ ತುಷಾರ್ ಗಾಂಧಿ, ಪ್ರೊ.ಮನೀಶ್ ಸೇಥಿ, ಜೆಎನ್ ಯು ಪ್ರೊಫೆಸರ್ ನಿವೇದಿತಾ ಮೆಮನ್, ದೆಹಲಿ ವಿಶ್ವವಿದ್ಯಾಲಯದ ಪ್ರೊ.ಅಪೂರ್ವಾನಂದ, ಪ್ರೊ.ಪಿ.ಕೆ.ವಿಜಯನ್, ಪ್ರೊ.ನಂದಿತಾ ನಾರಾಯಣ್, ನಾಗರಿಕ ಹಕ್ಕುಗಳ ಕಾರ್ಯಕರ್ತೆ ಕವಿತಾ ಕೃಷ್ಣನ್, ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಪತ್ನಿ ಶ್ವೇತಾ ಭಟ್, ವೆಲ್ಫೇರ್ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷ ಎಸ್ ಕ್ಯೂ ಆರ್ ಇಲ್ಯಾಸ್, ವಿದ್ಯಾರ್ಥಿ ನಾಯಕ ಸಫೂರಾ ಝರ್ಗರ್, ಎಐಎಸ್ ಎ ಪ್ರಧಾನ ಕಾರ್ಯದರ್ಶಿ ಪ್ರಸಂಜೀತ್ ಕುಮಾರ್, ಚಿತ್ರ ನಿರ್ದೇಶಕ ಫಾಹಿಮ್ ಇರ್ಷಾದ್, ವಿದ್ಯಾರ್ಥಿ ನಾಯಕ ಶಾರ್ಜೀಲ್ ಉಸ್ಮಾನಿ, ಕ್ಯಾಂಪಸ್ ಫ್ರಂಟ್ ಅಧ್ಯಕ್ಷ ಎಂ.ಎಸ್. ಸಾಜಿದ್, ವಿದ್ಯಾರ್ಥಿ ನಾಯಕಿ ಅಫ್ರೀನ್ ಫಾತಿಮಾ, ಎಸ್ ಐಒ ಅಧ್ಯಕ್ಷ ಮುಹಮ್ಮದ್ ಸಲ್ಮಾನ್, ಅಡ್ವೋಕೇಟ್ ಕವಲ್ ಪ್ರೀತ್ ಕೌರ್, ಫೆಟರ್ನಿಟಿ ಮೂವ್ ಮೆಂಟ್ ಅಧ್ಯಕ್ಷ ಶಂಶೀರ್ ಇಬ್ರಾಹೀಂ, ಪಿಎಫ್ ಐ ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಸಾಕಿಬ್, ಎಸ್ ಡಿಪಿಐ ಪ್ರಧಾನ ಕಾರ್ಯದರ್ಶಿ ಯಾಸ್ಮೀನ್ ಫಾರೂಕಿ ಮತ್ತಿತರ ಗಣ್ಯರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.



Join Whatsapp