ಅಲಹಾಬಾದ್: ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆ ಅನುಭವಿಸಿದ ಆರೋಪಿಯೊಬ್ಬನನ್ನು ಅಂತಿಮವಾಗಿ ನ್ಯಾಯಾಲಯ ತಪ್ಪಿತಸ್ಥನಲ್ಲ ಎಂದು ತೀರ್ಪು ನೀಡಿದೆ. ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯ ವಿಷ್ಣು ತಿವಾರಿ (43) ತಮ್ಮ ಜೀವನದ ಅಮೂಲ್ಯವಾದ ಸಮಯವನ್ನೆಲ್ಲಾ ಜೈಲಿನಲ್ಲಿ ಕಳೆದು ನಂತರ ಖುಲಾಸೆಗೊಂಡಿದ್ದಾರೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಿವಾರಿಯನ್ನು 2000 ಸೆಪ್ಟೆಂಬರ್ 16 ರಂದು ಬಂಧಿಸಲಾಗಿತ್ತು. ಎಸ್‌ಸಿ / ಎಸ್‌ಟಿ ಕಾಯ್ದೆಯಡಿ ತಿವಾರಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿತ್ತು. ಮೂರು ವರ್ಷಗಳ ನಂತರ ಲಲಿತಪುರ ನ್ಯಾಯಾಲಯವು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 10 ವರ್ಷ ಜೈಲು ಶಿಕ್ಷೆ ವಿಧಿಸಿತು. ಇದರೊಂದಿಗೆ ಎಸ್‌ಸಿ / ಎಸ್‌ಟಿ ಕಾಯ್ದೆಯಡಿ ಅವರಿಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಲಾಯಿತು.
ವಿಷ್ಣು ತಿವಾರಿ ವಿರುದ್ಧ ಅವರ ಗ್ರಾಮದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಹೊರಿಸಲಾಗಿತ್ತು. ಆದರೆ ಇದೀಗ ಅತ್ಯಾಚಾರ ನಡೆದಿರುವ ಯಾವುದೇ ಲಕ್ಷಣಗಳು ದೈಹಿಕ ಪರೀಕ್ಷೆಯಲ್ಲಿ ಕಾಣಲಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಹೊಲಕ್ಕೆ ಕೆಲಸಕ್ಕೆ ಹೋಗುವಾಗ ಆರೋಪಿ ಮಹಿಳೆಯನ್ನು ಬಲವಂತವಾಗಿ ಬಾಯಿಯನ್ನು ಮುಚ್ಚಿ ನಂತರ ಅತ್ಯಾಚಾರ ಎಸಗಿದ್ದಾನೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.
ಮನೆ ಅಥವಾ ಉಳಿತಾಯವೇನೂ ಇಲ್ಲ. ಮದುವೆಯಾಗಲಿಲ್ಲ. ಜೀವನವು ಸಂಪೂರ್ಣವಾಗಿ ಮುರಿದು ಬಿದ್ದಿದೆ. ಮುಂದೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಜೈಲಿನಿಂದ ಬಿಡುಗಡೆಯಾದ ತಿವಾರಿ ಹೇಳಿದ್ದಾರೆ.