ಗುವಾಹಟಿ: ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಕಳೆದ ವರ್ಷ ಮಾಡಿದ ಭಾಷಣವೊಂದರಲ್ಲಿ ಮುಸ್ಲಿಮರ ವಿರುದ್ಧ ಪೊಲೀಸರ ಮೂಲಕ ಸೇಡು ತೀರಿಸಲಾಗಿದೆ ಎಂಬ ಪ್ರಚೋದನಕಾರಿ ಹೇಳಿಕೆಗೆ FIR ದಾಖಲಿಸುವಂತೆ ಗುವಾಹಟಿ ನ್ಯಾಯಾಲಯ ಶನಿವಾರ ಪೊಲೀಸರಿಗೆ ಆದೇಶಿಸಿದೆ.
ಕಳೆದ ವರ್ಷ ಅಸ್ಸಾಮ್ ಮುಸ್ಲಿಮರನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಸರ್ಕಾರದ ನಡೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಅಸ್ಸಾಮ್ ಪೊಲೀಸರು ಅಪ್ರಾಪ್ತ ಸೇರಿದಂತೆ ಇಬ್ಬರನ್ನು ಎನ್ಕೌಂಟರ್ ನಲ್ಲಿ ಹತ್ಯೆ ನಡೆಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಹಿಮಂತ್ ಬಿಸ್ವಾ, ಮುಸ್ಲಿಮರ ಹಿಂಸಾಚಾರಕ್ಕೆ ಪೊಲೀಸರ ಮೂಲಕ ಸೇಡು ತೀರಿಸಲಾಗಿದೆ ಎಂಬ ಹೇಳಿಕೆ ನೀಡಿದ್ದರು.
ಮುಖ್ಯಮಂತ್ರಿ ಹುದ್ದೆಯಲ್ಲಿದ್ದುಕೊಂಡು ಪ್ರಚೋದನಕಾರಿ ಹೇಳಿಕೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸದಿರುವುದು ಅವರ ಕರ್ತವ್ಯಲೋಪವನ್ನು ಪ್ರದರ್ಶಿಸುತ್ತದೆ ಎಂದು ಕಮ್ರೂಪ್ ಮೆಟ್ರೋ ಜಿಲ್ಲಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ವಿರುದ್ಧ ಐಪಿಸಿ ಸೆಕ್ಷನ್ 153, 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸುವಂತೆ ಕೋರಿ ಸಂಸದ ಅಬ್ದುಲ್ ಖಲೀಕ್ ಕೋರ್ಟ್ ಮೆಟ್ಟಿಲೇರಿದ್ದರು.
ಈ ನಿಟ್ಟಿನಲ್ಲಿ ಘಟನೆಯ ಕುರಿತು FIR ದಾಖಲಿಸಿ, ಅಂತಿಮ ವರದಿ ಸಲ್ಲಿಸುವಂತೆ ದಿಸ್ಬುರ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.
ಹಿಮಂತ್ ಬಿಸ್ವಾ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ 31 ಮಂದಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ. ಗುರುತಿಸಲಾದ 30 ಮಂದಿಯಲ್ಲಿ 14 ಮಂದಿ ಮುಸ್ಲಿಮರು ಎಂಬುದು ಗಮನಾರ್ಹ.