ಮಂಗಳೂರು: ಉಡುಪಿ ಸೇರಿದಂತೆ ರಾಜ್ಯದ ಹಲವು ಸರ್ಕಾರಿ ಕಾಲೇಜುಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಸ್ಕಾರ್ಫ್ ಹಾಕಲು ಅವಕಾಶ ನಿರಾಕರಿಸಿ ಅವರ ಮೂಲಭೂತ ಹಕ್ಕುಗಳನ್ನು ದಮನ ಮಾಡಿರುವುದಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವ್ಯಕ್ತಿಗಳು ಖಂಡನೆ ವ್ಯಕ್ತಪಡಿಸಿದ್ದಾರೆ.
ಉಡುಪಿ ಸರಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಕಾಲೇಜಿನ ಹೊರಗಡೆ ಕುಳಿತು ಅಧ್ಯಯನ ನಡೆಸುತ್ತಿರುವ ವೀಡಿಯೋ ಮತ್ತು ಚಿತ್ರಗಳು ಎಲ್ಲೆಡೆ ವೈರಲ್ ಆಗಿದ್ದು, ವಿದ್ಯಾರ್ಥಿನಿಯರನ್ನು ಶಾಲೆಯಿಂದ ಹೊರಗೆ ಹಾಕಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಅಂತಾರಾಷ್ಟ್ರೀಯ ಲೇಖಕ ಖಾಲಿದ್ ಬೇದೂನ್ ಈ ಬಗ್ಗೆ ಟ್ವೀಟ್ ಮಾಡಿ, ಭಾರತದ ಉಡುಪಿ ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ಬರುವುದನ್ನು ‘ಸಮವಸ್ತ್ರ ನಿಯಮಗಳ’ ಹೆಸರಿನಲ್ಲಿ ನಿಷೇಧಿಸಲಾಗಿದೆ. ಇದು ನನಗೆ ಫ್ರಾನ್ಸ್ ನಲ್ಲಿ ಮಾಡಿದಂತೆಯೇ ಅನಿಸುತ್ತಿದೆ” ಎಂದು ಕಿಡಿಕಾರಿದ್ದಾರೆ.
ಉಪ್ಸಲಾ ಯುನಿವರ್ಸಿಟಿಯ ಶಾಂತಿ ಮತ್ತು ಸಂಘರ್ಷ ಸಂಶೋಧನೆಯ ಪ್ರಾಧ್ಯಾಪಕ ಅಶೋಕ್ ಸ್ವೇನ್ ಟ್ವೀಟ್ ಮಾಡಿ, ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿಕೊಂಡು ಬರುವುದಕ್ಕೆ ಮೂರು ವಾರಗಳಿಂದ ಕರ್ನಾಟಕದ ಸರ್ಕಾರಿ ಕಾಲೇಜಿನಲ್ಲಿ ಅನುಮತಿ ನೀಡಿಲ್ಲ. ಭಾರತ ಈಗಲೂ ಜಾತ್ಯತೀತವಾಗಿಯೇ ಉಳಿದಿದೆಯೇ?” ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ಸಫೂರಾ ಝರ್ಗಾರ್ ಟ್ವೀಟ್ ಮಾಡಿ, ಹಿಂದೂ ಧರ್ಮದ ವಿದ್ಯಾರ್ಥಿನಿಯರು ಬಳೆ ಮತ್ತು ಬಿಂದಿ ತೊಡುತ್ತಾರೆ. ದೀಪಾವಳಿ ಮತ್ತು ಇನ್ನಿತರ ಹಬ್ಬಗಳನ್ನೂ ನಮ್ಮ ಶಾಲೆಗಳಲ್ಲಿ ಆಚರಿಸಲಾಗುತ್ತದೆ. ಆದರೆ ನಾವು ಹಿಜಾಬ್ ಏಕೆ ಧರಿಸಬಾರದು? ಈ ವಿದ್ಯಾರ್ಥಿನಿಯರು ಪ್ರತಿಕೂಲ ಪರಿಸ್ಥಿತಿಯಲ್ಲಿ ತಮ್ಮ ಧ್ವನಿಯೆತ್ತಿದ್ದಾರೆ. ಅವರೊಂದಿಗೆ ಧ್ವನಿಗೂಡಿಸಿ ಎಂದು ಮಾಡಿದ್ದಾರೆ.
ಪಿಎಫ್ಐ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಟ್ವೀಟ್ ಮಾಡಿ, ಇಂತಹ ಅನ್ಯಾಯದ ವಿರುದ್ಧ ನಿಲ್ಲಲು ಸಾಕಷ್ಟು ಧೈರ್ಯ ಬೇಕು. ಮುಸ್ಲಿಂ ವಿದ್ಯಾರ್ಥಿನಿಯರು ರಾಜಿಯಾಗದ ಮನೋಭಾವ ಹೊಂದಿ, ಫ್ಯಾಶಿಸ್ಟ್ ಕಾರ್ಯಸೂಚಿಗೆ ವಿರೋಧ ತೋರಿಸುವುದನ್ನು ನೋಡಿದಾಗ ಸಂಘಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಈ ಹೋರಾಟವನ್ನು ಮುನ್ನಡೆಸುತ್ತಿರುವ ನಮ್ಮ ವಿದ್ಯಾರ್ಥಿನಿಯರೊಂದಿಗೆ ಸಮುದಾಯ ಜೊತೆಯಾಗಿ ನಿಲ್ಲಬೇಕು ಎಂದು ಕರೆ ನೀಡಿದ್ದಾರೆ.