ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಗರಿಷ್ಠ ತಾಪಮಾನ ದಾಖಲಾಗಿದ್ದು, ಪಾದರಸ ಮಟ್ಟ 49 ಡಿಗ್ರಿಯನ್ನು ದಾಟಿದೆ. ಇದು 1966ರ ಬಳಿಕ ದಾಖಲಾದ ಗರಿಷ್ಠ ತಾಪಮಾನವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ .
ಹರ್ಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕೂಡಾ ಉಷ್ಣಾಂಶ ಏರುತ್ತಲೇ ಇದ್ದು, ಮಳೆ ಕೊರತೆಯು ವ್ಯಾಪಕ ಬಿಸಿ ಗಾಳಿಗೆ ಕಾರಣ ಎನ್ನಲಾಗಿದೆ.
“ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪಾಶ್ಚಿಮಾತ್ಯ ಪ್ರಕ್ಷುಬ್ಧತೆ ಕಂಡುಬಂದಿದೆಯಾದರೂ ಈ ಪೈಕಿ ಬಹುತೇಕ ಮಾರುತಗಳು ದಟ್ಟ ಮೋಡ ಅಥವಾ ಪ್ರಬಲ ಗಾಳಿಗೆ ಮಾತ್ರ ಕಾರಣವಾಗಿದ್ದು, ಸಾಕಷ್ಟು ಮಳೆ ತರುವಲ್ಲಿ ವಿಫಲವಾಗಿದೆ. ಇದು ತಾಪಮಾನ ಕನಿಷ್ಠ ಎರಡು ಡಿಗ್ರಿ ಹೆಚ್ಚಲು ಕಾರಣವಾಗಿದೆಯೇ ವಿನಃ ಬಿಸಿಲ ಬೇಗೆಗೆ ಪರಿಹಾರ ನೀಡಿಲ್ಲ” ಎಂದು ಭಾರತೀಯ ಹವಾಮಾನ ಇಲಾಖೆಯ ಮುಖ್ಯ ವಿಜ್ಞಾನಿ ಆರ್.ಕೆ.ಜೇನಮನಿ ಹೇಳುತ್ತಾರೆ.
ಭಾನುವಾರ ರಾಷ್ಟ್ರ ರಾಜಧಾನಿ ಇಡೀ ವರ್ಷದಲ್ಲೇ ಗರಿಷ್ಠ ತಾಪಮಾನ ದಾಖಲಿಸಿದ್ದು, ಕಳೆದ ಕೆಲ ವಾರದಲ್ಲಿ ಕೇವಲ ಎರಡು ದಿನ ಮಾತ್ರ ಅಲ್ಪಸ್ವಲ್ಪ ಮಳೆಯಾಗಿದೆ. ದ್ದು, ಕಳೆದ ಎಪ್ರಿಲ್ ತಿಂಗಳು ಏಳು ದಶಕದಲ್ಲೇ ಎರಡನೇ ಗರಿಷ್ಠ ತಾಪಮಾನ ದಾಖಲಿಸಿದ ತಿಂಗಳಾಗಿತ್ತು.
ದೆಹಲಿ ಮಾತ್ರವಲ್ಲದೇ ದೇಶದ ಇತರ ಭಾಗಗಳು ಕೂಡಾ ಬಿಸಿಲ ಬೇಗೆಗೆ ಕಂಗೆಟ್ಟಿದ್ದು, ರಾಜಸ್ಥಾನದಲ್ಲಿ ಬಿಸಿ ಗಾಳಿಯ ಸಾಧ್ಯತೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಮತ್ತು ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ಪೂರ್ವ ಮಧ್ಯಪ್ರದೇಶ ಹಾಗೂ ದೆಹಲಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಐಎಂಡಿ ಹಿರಿಯ ವಿಜ್ಞಾನಿ ನರೇಶ್ ಕುಮಾರ್ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.