ಬೆಂಗಳೂರಿನಲ್ಲಿ ನಡೆಯಲಿದೆ ದಾಖಲೆಯ ಕಂಬಳ: ಮಾಹಿತಿ ನೀಡಿದ ಶಾಸಕ ರೈ

Prasthutha|

- Advertisement -

ಬೆಂಗಳೂರು: ನವೆಂಬರ್ 25 ಮತ್ತು 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೊದಲ ಕಂಬಳ ನಡೆಯಲಿದೆ. ಇದು ತುಳುನಾಡಿನ ಕಂಬಳದ ಇತಿಹಾಸದಲ್ಲಿಯೇ ಅತಿ ಉದ್ದದ ಟ್ರ್ಯಾಕ್ ಹೊಂದಲಿದೆ ಎಂದು ಪುತ್ತೂರು ಶಾಸಕ, ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಸಾಂಪ್ರದಾಯಿಕ ಟ್ರ್ಯಾಕ್ 145 ಮೀಟರ್ ಉದ್ದವಿರುತ್ತದೆ. 147 ಮೀಟರ್ ಉದ್ದದ ಟ್ರ್ಯಾಕ್ ಹೊಂದಿರುವ ಕಂಬಳವನ್ನೂ ಹಿಂದೆ ನಡೆಸಲಾಗಿತ್ತು. ಆದರೆ ಬೆಂಗಳೂರಿನಲ್ಲಿ 155 ಮೀಟರ್ ಉದ್ದದ ಕಂಬಳ ಟ್ರ್ಯಾಕ್ ಕಾಮಗಾರಿ ಆರಂಭವಾಗಿದೆ ಎಂದು ಶಾಸಕರು ವಿವರಿಸಿದರು.

- Advertisement -

ದಕ್ಷಿಣ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ‘ಪ್ರೆಸ್ ಕ್ಲಬ್ ಗೌರವ ಅತಿಥಿ’ ಕಾರ್ಯಕ್ರಮದಲ್ಲಿ ರೈ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತಾಡಿದರು.

ಬೆಂಗಳೂರಿನಲ್ಲಿ ನಡೆಯುವ ಕಂಬಳ ಕಾರ್ಯಕ್ರಮವು ಎಲ್ಲ ರೀತಿಯಲ್ಲೂ ವಿಶೇಷವಾಗಿರಬೇಕು. ಆದ್ದರಿಂದ ನಾವು ಹಲವಾರು ದಾಖಲೆಗಳನ್ನು ಮುರಿಯಲು ಉದ್ದೇಶಿಸಿದ್ದೇವೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ 1.50 ಲಕ್ಷ ರೂಪಾಯಿ ನಗದು ಮತ್ತು ಎರಡು ಪವನ್ ಚಿನ್ನ ಹಾಗೂ ಭಾಗವಹಿಸುವ ಜೋಡಿ ಕೋಣಗಳಿಗೆ ಗುರಾಣಿ ಮತ್ತು ವಿಜೇತರಿಗೆ ಶೀಲ್ಡ್ ನೀಡಲಾಗುತ್ತದೆ. ಕೋಣಗಳ ಸಾಗಣೆಗೆ ತಗಲುವ ವೆಚ್ಚಕ್ಕಾಗಿ ಕಂಬಳ ಮಾಲೀಕರಿಗೆ 50,000 ರೂ. ಕೊಡಲಾಗುತ್ತದೆ ಎಂದು ಶಾಸಕ ರೈ ಹೇಳಿದರು.

ಕಂಬಳಕ್ಕೆ ಏಳರಿಂದ ಎಂಟು ಲಕ್ಷ ಪ್ರೇಕ್ಷಕರು ಆಗಮಿಸುವ ಸಾಧ್ಯತೆಯಿದೆ. ಕಂಬಳ ಕೆರೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಲು ಜನರು ಕುತೂಹಲದಿಂದ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ. ಕಂಬಳ ಕರೆಯ ಹೆಸರನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ನಾವು ಸಾಮಾಜಿಕ ಮಾಧ್ಯಮದಲ್ಲಿ ಸಲಹೆಗಳನ್ನು ಆಹ್ವಾನಿಸಿದಾಗ ಸಾರ್ವಜನಿಕರಿಂದ 230 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ನಾವು ಸ್ವೀಕರಿಸಿದ್ದೇವೆ ಎಂದು ರೈ ಹೇಳಿದರು.

Join Whatsapp