ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕಿಲ್ಲ NBFC ಮಾನ್ಯತೆ; ಆರ್‌ಬಿಐ ಎಚ್ಚರಿಸಿದರೂ ನಿರ್ಲಕ್ಷ್ಯ

Prasthutha|

ಬೆಂಗಳೂರುಮತೀಯ ಅಲ್ಪಸಂಖ್ಯಾತರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಅಭಿವೃದ್ಧಿಗೊಳಿಸುವುದು ಮತ್ತು ಮುಂದುವರೆದ ಸಮುದಾಯದ ಜತೆ ಅಲ್ಪಸಂಖ್ಯಾತರನ್ನೂ ಸಮಾಜದ ಮುಖ್ಯವಾಹಿನಿಯಲ್ಲಿ ಕೊಂಡೊಯ್ಯುವ ಉದ್ದೇಶದಿಂದ ಸ್ಥಾಪನೆಯಾಗಿರುವ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಎನ್‌ಬಿಎಫ್‌ಸಿ (Non-Banking Financial Company ) ಸ್ಥಾನಮಾನ ಕಳೆದುಕೊಂಡಿರುವುದು ಇದೀಗ ಬಹಿರಂಗವಾಗಿದೆ.

- Advertisement -

ಎನ್‌ಪಿಎಫ್‌ಸಿ ಸ್ಥಾನಮಾನ ಕಳೆದುಕೊಳ್ಳಲು ನಿಗಮವು ತನ್ನ ಆಸ್ತಿ ಮತ್ತು ಆದಾಯದ ಅನುಪಾತಗಳು ಕನಿಷ್ಠ ನಿಗದಿತ ಅವಶ್ಯಕತೆಗಿಂತ ಕಡಿಮೆಯಾಗಿರುವುದೇ ಮೂಲ ಕಾರಣವಾಗಿದೆ. ಎನ್‌ಬಿಎಫ್‌ಸಿ ನೋಂದಣಿಯನ್ನು ಮರಳಿ ಪಡೆಯುವ ಸಂಬಂಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸರ್ಕಾರವು ನಿರ್ಲಕ್ಷ್ಯಿಸಿದೆ ಎಂದು ಗೊತ್ತಾಗಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಪ್ರಾದೇಶಿಕ ನಿರ್ದೇಶಕರು ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ 2021ರ ಅಕ್ಟೋಬರ್‌ 25ರಂದು ಅರೆ ಸರ್ಕಾರಿ ಪತ್ರ ಬರೆದಿದ್ದಾರೆ. ಈ ಪತ್ರವನ್ನಾಧರಿಸಿ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ ಎಸ್‌ ಎನ್‌ ಪ್ರಸಾದ್‌ ಅವರು ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕ್ಯಾಪ್ಟನ್‌ ಮಣಿವಣ್ಣನ್‌ ಅವರಿಗೆ ಪತ್ರ ಬರೆದಿದ್ದಾರೆ. ಆರ್‌ಬಿಐ ಮೂರ್ನಾಲ್ಕು ಬಾರಿ ಪತ್ರ ಬರೆದರೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಂಬಂಧ ಗಮನಹರಿಸಿಲ್ಲ ಎಂದು ಗೊತ್ತಾಗಿದೆ. ಆರ್‌ಬಿಐ ಬರೆದಿರುವ ಪತ್ರಕ್ಕೆ ಸಂಬಂಧಿಸಿದಂತೆ ಟಿಪ್ಪಣಿ ಹಾಳೆಯೊಂದು ‘ದಿ ಫೈಲ್‌’ಗೆ ಲಭ್ಯವಾಗಿದೆ.

- Advertisement -

ಎನ್‌ಬಿಎಫ್‌ಸಿ ಸ್ಥಾನಮಾನ ಮತ್ತು ನೋಂದಣಿಯನ್ನು ಮರಳಿ ಪಡೆಯಲು ನಿಗಮವು ಆಸಕ್ತಿ ವಹಿಸಿಲ್ಲ ಎಂಬುದು ಪತ್ರದಿಂದ ತಿಳಿದು ಬಂದಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಪ್ರಾದೇಶಿಕ ನಿರ್ದೇಶಕರು ಅಕ್ಟೋಬರ್‌ನಲ್ಲಿ ಪತ್ರ ಬರೆಯುವ ಮುನ್ನವೇ ಮಾರ್ಚ್‌ 2ರಂದೂ ಪತ್ರವನ್ನು ಬರೆದಿದ್ದರು. ಆದರೂ ನಿಗಮವು ಈ ವಿಚಾರದಲ್ಲಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿತ್ತು ಎಂಬುದು ಗೊತ್ತಾಗಿದೆ.

‘ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ನಿಯಮಿತವು ಎನ್‌ಬಿಎಫ್‌ಸಿಗೆ ಸಂಬಂಧಿಸಿದ ಪ್ರಧಾನ ವ್ಯವಹಾರ ಮಾನದಂಡಗಳನ್ನು ಪಾಲಿಸುತ್ತಿಲ್ಲ ಮತ್ತು ಆಸ್ತಿ ಆದಾಯ ಅನುಪಾತಗಳು ಕನಿಷ್ಟ ನಿಗದಿತ ಅವಶ್ಯಕತೆಗಿಂತ ಕಡಿಮೆಯಾಗಿದ್ದರಿಂದ ಎನ್‌ಬಿಎಫ್‌ಸಿ ಸ್ಥಾನಮಾನ ಕಳೆದುಕೊಂಡಿದೆ,’ ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮವು 1986ರ ಫೆ.7ರಂದು ಸ್ಥಾಪನೆಯಾಗಿದೆ. ಇದೊಂದು ಸರ್ಕಾರಿ ಸ್ವಾಮ್ಯದ ಉದ್ದಿಮೆ. ಕೋಟಿ ರು.ಗಳ ಷೇರು ಬಂಡವಾಳ ಹೊಂದಿರುವ ಈ ನಿಗಮವು ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೇಲುಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಈ ನಿಗಮವು ಸ್ವಯಂ ಉದ್ಯೋಗ ಸಹಾಯಧನ ಯೋಜನೆ, ಅರಿವು, ಶ್ರಮಶಕ್ತಿ ಸಾಲ, ಸಣ್ಣ ಸಾಲ, ಗಂಗಾ ಕಲ್ಯಾಣ, ಕೃಷಿ ಭೂಮಿ ಖರೀದಿ, ಗೃಹ ನಿರ್ಮಾಣ ಸಾಲದ ಮೇಲಿನ ಮಾರ್ಜಿನ್‌ ಹಣ ಸಾಲ, ಕ್ರಿಶ್ಚಿಯನ್‌ ಸಮುದಾಯ ವಿಶೇಷ ಅಭಿವೃದ್ಧಿ, ಗೃಹ ನಿವೇಶನ ಖರೀದಿ, ಮನೆ ನಿರ್ಮಾಣ ಸಾಲದ ಮೇಲಿನ ಬಡ್ಡಿ ಸಹಾಯಧನ, ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಯೋಜನೆಗಳನ್ನು ರೂಪಿಸಿದೆ.

ಈ ನಿಗಮದಲ್ಲಿ 2015-16ರಲ್ಲಿ 1,068 ಕೋಟಿ ರು.ಗಳು ಬಿಡುಗಡೆಯಾಗಿತ್ತು. ಈ ಪೈಕಿ 976 ಕೋಟಿ ರು. ಖರ್ಚಾಗಿತ್ತು. 2016-17ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ 1,527 ಕೋಟಿ ರು.ನಲ್ಲಿ 1,424 ಕೋಟಿ ರು ವೆಚ್ಚವಾಗಿದೆ. 2017-18ನೇ ಸಾಲಿನಲ್ಲಿ 2,191 ಕೋಟಿ ರು.ನಲ್ಲಿ 2,116 ಕೋಟಿ ರು. ಖರ್ಚಾಗಿದೆ. ಅರಿವು ಯೋಜನೆಯಡಿ 2017-18ನೇ ಸಾಲಿನಲ್ಲಿ 330 ಕೋಟಿ ರು. ಬಿಡುಗಡೆಯಾಗಿದ್ದು ಈ ಪೈಕಿ 263.94 ಕೋಟಿ ರು. ಖರ್ಚಾಗಿದೆ ಎಂಬುದು ಕರ್ನಾಟಕ ವಿಧಾನಮಂಡಲದ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ಹದಿನೈದನೇ ವಿಧಾನಸಭೆಗೆ ಸಲ್ಲಿಸಿರುವ ಮಧ್ಯಂತರ ವರದಿಯಿಂದ ತಿಳಿದು ಬಂದಿದೆ.



Join Whatsapp