ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಅವರು ನನ್ನ ನಾಯಕರು, ಅವರೇ ನನ್ನ ಅಧ್ಯಕ್ಷರು. ಖರ್ಗೆ ಅವರು ನನಗಿಂತ 20 ವರ್ಷಗಳ ಹಿರಿಯರು. ಅವರ ಹಿರಿತನ, ತ್ಯಾಗಕ್ಕೆ ನಾವು ಗೌರವ ನೀಡಬೇಕು. ಒಂದು ವೇಳೆ ಅವರು ಮುಖ್ಯಮಂತ್ರಿಯಾದರೆ ಅವರ ಜತೆ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಶನಿವಾರ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ‘ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ರಾಜ್ಯ ಹಾಗೂ ದೇಶಕ್ಕೆ ಆಸ್ತಿ. ಪಕ್ಷ ಯಾವ ತೀರ್ಮಾನ ಮಾಡುತ್ತದೆಯೋ ನಾನು ಅದಕ್ಕೆ ಬದ್ಧವಾಗಿರುತ್ತೇನೆ. ಅವರು ಪಕ್ಷಕ್ಕಾಗಿ ಅನೇಕ ತ್ಯಾಗ ಮಾಡಿದ್ದಾರೆ. ಮಧ್ಯರಾತ್ರಿ ತಮ್ಮ ಶಾಸಕಾಂಗ ಪಕ್ಷದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬ್ಲಾಕ್ ಅಧ್ಯಕ್ಷರು ಇಂದು ಎಐಸಿಸಿ ಅಧ್ಯಕ್ಷರಾಗಿದ್ದು ಇದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾಧ್ಯ. ಖರ್ಗೆ ಅವರು ಮುಖ್ಯಮಂತ್ರಿಯಾದರೆ ಅವರ ಜತೆ ಸಂತೋಷದಿಂದ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.
ಏ.16ರಂದು ಕೋಲಾರದಲ್ಲಿ ರಾಹುಲ್ ಗಾಂಧಿ ಅವರ ಜೈ ಭಾರತ ಸತ್ಯಾಗ್ರಹ ಯಾತ್ರೆ:
‘ರಾಹುಲ್ ಗಾಂಧಿ ಅವರು ಬೆಳಗಾವಿಗೆ ಬಂದು ನಮ್ಮ ಯುವನಿಧಿ ಯೋಜನೆ ಪ್ರಕಟಿಸಿ ಯುವ ಸಮುದಾಯಕ್ಕೆ ಸಂದೇಶ ರವಾನಿಸಿದ್ದರು. ರಾಹುಲ್ ಗಾಂಧಿ ಅವರಿಗೆ ಬಿಜೆಪಿಯವರು ಹೆದರಿ ಅವರ ಸಂಸತ್ತಿನ ಸದಸ್ಯತ್ವವನ್ನು ವಜಾಗೊಳಿಸಿದ್ದಾರೆ. ಒಂದು ಭಾಷಣದ ವಿಚಾರವಾಗಿ ಇದೇ ಮೊದಲ ಬಾರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ತೀರ್ಪು ಬಂದ 24 ಗಂಟೆಗಳಲ್ಲಿ ಅವರನ್ನು ಅನರ್ಹ ಮಾಡಲಾಗಿದೆ.
ಯಾವುದೇ ಅರ್ಜಿ ಹಾಕದೇ, ನೋಟೀಸ್ ನೀಡದೇ, ಲೋಕಸಭೆ ಸ್ಪೀಕರ್ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು 7 ಲಕ್ಷಗಳ ಮತಗಳ ಅಂತರದಲ್ಲಿ ಗೆದ್ದ ನಾಯಕನ ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಮಾನ. ರಾಜಕಾರಣ ನಿಂತ ನೀರಲ್ಲ. ಎಲ್ಲವೂ ಪುನರಾವರ್ತನೆಯಾಗಲಿದೆ.
ರಾಹುಲ್ ಗಾಂಧಿ ಅವರು ಎಲ್ಲಿ ಭಾಷಣ ಮಾಡಿದ್ದರೋ ಅಲ್ಲಿಯೇ ಭಾಷಣ ಮಾಡಬೇಕು ಎಂದು ಹೇಳಿದಾಗ ನಾವು ಕೋಲಾರದಲ್ಲಿ ಜೈ ಭಾರತ ಸತ್ಯಾಗ್ರಹ ಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಒಂದು ವಾರಗಳ ಕಾಲ ಮುಂದೂಡುವಂತೆ ಮನವಿ ಮಾಡಿಕೊಂಡಿದ್ದು, ಅದಕ್ಕೆ ರಾಹುಲ್ ಗಾಂಧಿ ಅವರು ಸಮ್ಮತಿ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಜೈ ಭಾರತ ಸತ್ಯಾಗ್ರಹ ಯಾತ್ರೆಯನ್ನು ಏ.16ರಂದು ಆಯೋಜಿಸಲು ತೀರ್ಮಾನಿಸಿದ್ದೇವೆ. ಅದೇ ದಿನ ಕೆಪಿಸಿಸಿ ನೂತನ ಕಟ್ಟಡ ಉದ್ಘಾಟನೆ ಮಾಡಲಾಗುವುದು ಎಂದು ಡಿಕೆಶಿ ತಿಳಿಸಿದರು.
ಪಕ್ಷದಲ್ಲಿ ಟಿಕೆಟ್ ಅಸಮಾಧಾನದ ಬಗ್ಗೆ ಕೇಳಿದಾಗ, ‘ನಾವು ಎಲ್ಲರ ಜತೆ ಮಾತನಾಡುತ್ತಿದ್ದೇವೆ. ರಾಜಕಾರಣದಲ್ಲಿ ಆಸೆ ಸಹಜ. ಈ ಸಂದರ್ಭದಲ್ಲಿ ನಾವು ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಿಲ್ಲ. ರಾಜಕೀಯ ಎಂದರೆ ಅಧಿಕಾರ ಹಂಚಿ ಸಹಕಾರ ನೀಡುವುದಾಗಿದೆ. ಹೀಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರವನ್ನು ಹಂಚಲಾಗುವುದು. ಈ ಕಾರಣಕ್ಕಾಗಿ ಎಲ್ಲರೂ ಸಮಾಧಾನವಾಗಿ ಇರಬೇಕು ಎಂದು ಕೇಳುತ್ತಿದ್ದೇವೆ. ತಮ್ಮ ಆಕ್ರೋಶ, ಅಭಿಮಾತಪ್ಪೇನಿಲ್ಲ. ಐದಾರೂ ವರ್ಷಗಳಿಂದ ದುಡಿದಿರುತ್ತಾರೆ. ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ಕೊಟ್ಟಾಗ ಅಸಮಾಧಾನ ಸಹಜ. ಬಿಜೆಪಿಯಲ್ಲಿ ಅಭ್ಯರ್ಥಿ ಪಟ್ಟಿ ಪ್ರಕಟವಾಗುವ ಮುನ್ನವೇ ಭಿನ್ನಮತವನ್ನು ನೀವು ಕಾಣುತ್ತಿದ್ದೀರಿ. ಬೆಳಗಾವಿ ಹಾಗೂ ಇತರೆ ಭಾಗಗಳಲ್ಲಿ ನೋಡುತ್ತಿದ್ದೀರಿ. ನಮ್ಮ ಪಕ್ಷದಲ್ಲಿ ಗೆಲುವಿನ ಸಾಮರ್ಥ್ಯ ಬಹಳ ಮುಖ್ಯ. ಆ ದೃಷ್ಟಿಯಿಂದ ನಾವು ಕೆಲವು ತೀರ್ಮಾನ ಕೈಗೊಂಡಿರುತ್ತೇವೆ. ಬಿಜೆಪಿಯಲ್ಲೂ ಹಾಲಿ ಶಾಸಕರುಗಳಿದ್ದರು. ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ವಿಶ್ವನಾಥ್ ಅವರು ಸೋಮವಾರ ಕಾಂಗ್ರೆಸ್ ಸೇರುತ್ತಿದ್ದಾರೆ. ವಿಶ್ವನಾಥ್ ಅವರು ಮೊನ್ನೆಯಷ್ಟೇ ಪಶ್ಚಾತಾಪ ಸತ್ಯಾಗ್ರಹ ಮಾಡಿದ್ದಾರೆ. ನಾವು ಕೆಲವರನ್ನು ಸಮಾಧಾನ ಪಡಿಸುತ್ತಿದ್ದೇವೆ’ ಎಂದರು.
ವರುಣಾ ಹಾಗೂ ಶಿಕಾರಿಪುರದಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಕೇಳಿದಾಗ, ‘ಕುಮಾರಸ್ವಾಮಿ ಅವರಿಗೆ ನಮ್ಮ ಪಕ್ಷದ ಬಗ್ಗೆ ತಿಳಿದಿದೆಯಾ?’ ಎಂದು ತಿಳಿಸಿದರು.
ಸರ್ಕಾರಿ ಹುದ್ದೆ ನೇಮಕಾತಿ ಭರ್ತಿಯಾಗದೇ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸರ್ಕಾರದಲ್ಲಿ ಖಾಲಿ ಇರುವ ಹುದ್ದೆ ನೀಡಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಮ್ಮ ಸರ್ಕಾರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳುತ್ತೇವೆ. ಇನ್ನು ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಸಲು ಉದ್ಯೋಗ ವಿನಿಮಯಕ್ಕೆ ತೀರ್ಮಾನಿಸಿದ್ದೇವೆ. ಇದು ನಮ್ಮ ಪ್ರಣಾಳಿಕೆಯಲ್ಲಿ ತಿಳಿಸುತ್ತೇವೆ. ಇದೇ ಕಾರಣಕ್ಕೆ ನಾವು ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3 ಸಾವಿರ ನಿರುದ್ಯೋಗ ಭತ್ಯೆ ನೀಡಲು ತೀರ್ಮಾನಿಸಿದ್ದೇವೆ. ಎಲ್ಲ ಯುವಕರು ಆದಷ್ಟು ಬೇಗ ಆನ್ ಲೈನ್ ನೋಂದಣಿ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
ಅಮೂಲ್ ಹಾಗೂ ನಂದಿನಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಂದಿನಿ ನಮ್ಮ ಸಂಸ್ಥೆ. ರಾಜ್ಯದಲ್ಲಿ 78 ಲಕ್ಷ ರೈತರು ಹಾಲು ಉತ್ಪಾದನೆ ಅವಲಂಬಿಸಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ನೀರಿಗೂ ಹಾಲಿಗೂ ಒಂದೇ ಬೆಲೆ ಆಗಿದೆ. ರೈತರಿಗೆ ಕೇವಲ 28 ರೂ ನೀಡಲಾಗುತ್ತಿದೆ. ರೈತರಿಗೆ ಸರಿಯಾದ ಬೆಲೆ ಸಿಗಬೇಕು ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರ ಕಾಲದಲ್ಲಿ ರಾಮನಗರದಲ್ಲಿ 5 ರೂ. ಪ್ರೋತ್ಸಾಹ ಧನ ನೀಡಿತ್ತು. ’
ಕನ್ನಡಪರ ಸಂಘಟನೆಗಳು ನಂದಿನಿ ವಿಚಾರವಾಗಿ ಹೋರಾಟ ಮಾಡುತ್ತಿಲ್ಲ ಎಂದು ಕೇಳಿದಾಗ, ‘ನಂದಿನಿ ವಿಚಾರವಾಗಿಯೂ ಹೋರಾಟ ಮಾಡುತ್ತಿಲ್ಲ ಹಾಗೂ ಮಹಾರಾಷ್ಟ್ರ ರಾಜ್ಯದ 864 ಹಳ್ಳಿಗೆ ಆರೋಗ್ಯ ವಿಮೆ ಯೋಜನೆಗೆ ಹಣ ನೀಡುತ್ತಿರುವುದರ ಬಗ್ಗೆಯೂ ಮಾತನಾಡುತ್ತಿಲ್ಲ. ಮುಖ್ಯಮಂತ್ರಿಗಳು ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕಿತ್ತು. ಆದರೆ ಈ ವಿಚಾರವಾಗಿ ಚಲನಚಿತ್ರ ನಟರಾಗಲಿ, ಸಾಹಿತಿಗಳಾಗಲಿ, ಹೋರಾಟಗಾರರಾಗಲಿ ಯಾರೂ ಮಾತನಾಡುತ್ತಿಲ್ಲ’ ಎಂದು ತಿಳಿಸಿದರು.
ಸಿ.ಟಿ ರವಿ ಅವರ ಟೀಕೆ ಬಗ್ಗೆ ಕೇಳಿದಾಗ, ‘ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರು ಸೋನಿಯಾ ಗಾಂಧಿಗೆ ಪ್ರಧಾನಮಂತ್ರಿಯಾಗುವಂತೆ ಆಹ್ವಾನ ನೀಡಿದಾಗ ಸೋನಿಯಾ ಗಾಂಧಿ ಅವರು ಅದನ್ನು ತ್ಯಾಗ ಮಾಡಿದರು. ಈ ದೇಶಕ್ಕೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಮಾಡಿರುವ ತ್ಯಾಗವನ್ನು ಸಿ.ಟಿ ರವಿ ಹಾಗೂ ಅವರ ಬಿಜೆಪಿ ನಾಯಕರು ಪಂಚಾಯ್ತಿ ಮಟ್ಟದಲ್ಲೂ ಮಾಡಲು ಸಾಧ್ಯವಿಲ್ಲ’ ಎಂದು ತಿರುಗೇಟು ನೀಡಿದರು.
ಪಕ್ಷದ ಟಿಕೆಟ್ ಅನ್ನು ಸಮೀಕ್ಷೆ ಆಧಾರದ ಮೇಲೆ ನೀಡಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ, ‘ನಮ್ಮಲ್ಲಿ 78 ಲಕ್ಷ ಸದಸ್ಯರಿದ್ದಾರೆ. ಪ್ರತಿ ಬ್ಲಾಕ್ ನಲ್ಲಿ ನಮ್ಮದೇ ಆದ 3-4 ಸಮೀಕ್ಷೆ ತಂಡಗಳಿವೆ. ಕೆಪಿಸಿಸಿ ಹಾಗೂ ಎಐಸಿಸಿ ಸಮೀಕ್ಷೆ ಇವೆ. ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಎಲ್ಲ ಕ್ಷೇತ್ರಗಳಿಗೆ ವೀಕ್ಷಕರು ಇದ್ದಾರೆ. ಚುನಾವಣಾ ಸಮಿತಿ ಸದಸ್ಯರನ್ನು ಅದೇ ಕ್ಷೇತ್ರಕ್ಕೆ ಕಳುಹಿಸಿ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳ ಜತೆ ಚರ್ಚೆ ಮಾಡಿದ್ದಾರೆ. ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸಂಗ್ರಹಿಸಿದ್ದೇವೆ. ನಾವು ಬಿಜೆಪಿಯವರಂತೆ ಡಬ್ಬ ಇಟ್ಟು ಅಲ್ಲಿ ಮತದಾನ ಮಾಡಿಸಿಲ್ಲ. ನಮ್ಮ ಕಾರ್ಯಕರ್ತರ ಜತೆ ಮಾತನಾಡಿದ್ದೇವೆ. ಕೇವಲ ಸರ್ವೇ ಆಧಾರದ ಮೇಲೆ ಟಿಕೆಟ್ ನೀಡಿಲ್ಲ. ಕೆಲವು ಕಡೆ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಟಿಕೆಟ್ ನೀಡಲಾಗಿದೆ. ನಾನು ಅಧ್ಯಕ್ಷನಾದ ನಂತರ 4 ವಿಧಾನ ಪರಿಷತ್ ಸದಸ್ಯ ಸ್ಥಾನ ಬಂದಾಗ 2 ಮುಸಲ್ಮಾನರಿಗೆ, 2 ಹಿಂದುಳಿದ ವರ್ಗಗಳಿಗೆ ನೀಡಿದ್ದೇವೆ. ಹೀಗೆ ಸಾಮಾಜಿಕ ನ್ಯಾಯ ಗಮನದಲ್ಲಿಟ್ಟು ಕೊಂಡು ಟಿಕೆಟ್ ಹಂಚಿಕೆ ಮಾಡಿದ್ದೇವೆ. ಈ ಬಾರಿ ಲಿಂಗಾಯತರಿಗೆ ಅಥಿ ಹೆಚ್ಚು ಟಿಕೆಟ್ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ನಾವು ಎಲ್ಲ ಕ್ಷೇತ್ರಗಳ ಚರ್ಚೆ ಮುಗಿದಿದ್ದು, ಪಟ್ಟಿ ಪ್ರಕಟಿಸಬೇಕಿದೆ. ನಿಮ್ಮ ಆಸೆಯಂತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ’ ಎಂದರು.