ಬೆಂಗಳೂರು: 10 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಸಿದ್ದತೆ ಮಾಡಿದ್ದೇವೆ. ಆರ್ಥಿಕ ಇಲಾಖೆ ಒಪ್ಪಿಗೆ ಕೊಟ್ಟ ಕೂಡಲೇ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಶುರು ಮಾಡೋದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್ ಪಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ತಳವಾರ್ ಸಾಬಣ್ಣ ಪ್ರಶ್ನೆ ಕೇಳಿದ್ರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷರ ಕೊರತೆ ಇದೆ. ಶಿಕ್ಷಕರು ಇಲ್ಲದೆ ಪ್ರತಿ ಬಾರಿ ರಿಸಲ್ಟ್ ನಲ್ಲಿ ಕಲ್ಯಾಣ ಕರ್ನಾಟಕ ಹಿಂದೆ ಬೀಳುತ್ತಿದೆ. 19 ಸಾವಿರ ಶಿಕ್ಷಕರ ಕೊರತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದೆ. ಶಿಕ್ಷಕರ ಜೊತೆಗೆ ಕೊಠಡಿಗಳ ಸಮಸ್ಯೆ ಇದೆ. ಕೂಡಲೇ ಶಿಕ್ಷಕರ ನೇಮಕ ಮಾಡಬೇಕು ಅಂತ ಆಗ್ರಹಿಸಿದರು.
ಇದಕ್ಕೆ ಸಚಿವ ಮಧು ಬಂಗಾರಪ್ಪ ಉತ್ತರ ನೀಡಿ, ಶಿಕ್ಷಣ ಇಲಾಖೆಯಲ್ಲಿ 50 ಸಾವಿರ ಶಿಕ್ಷಕರ ಕೊರತೆ ಇದೆ. 10 ಸಾವಿರ ಶಿಕ್ಷಕರ ನೇಮಕಕ್ಕೆ ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ. ಆರ್ಥಿಕ ಇಲಾಖೆ ಅನುಮತಿ ಕೊಟ್ಟ ಬಳಿಕ 10 ಸಾವಿರ ಹುದ್ದೆ ನೇಮಕ ಪ್ರಕ್ರಿಯೆ ಶುರು ಮಾಡ್ತೀವಿ ಎಂದರು.