ವಚನಗಳ ಓದಿನಿಂದ ಬಿಪಿ, ಶುಗರ್ ಗಳಿಂದ ದೂರವಿರಬಹುದು ಎಂದ ಶಾಸಕ ಬಂಡೆಪ್ಪ ಖಾಶೆಂಪುರ್

Prasthutha|

ಬೀದರ್: ದಿನಕ್ಕೆ ಐದು ವಚನಗಳಂತೆ ಪ್ರತಿನಿತ್ಯ ಮಹಾತ್ಮರ ವಚನಗಳನ್ನು ಓದುವ ಮೂಲಕ ಬಿಪಿ, ಶುಗರ್ ಗಳಿಂದ ದೂರವಿರಬಹುದಾಗಿದೆ ಎಂದು ಮಾಜಿ ಸಚಿವ, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಖಾಶೆಂಪುರ್  ಹೇಳಿದ್ದಾರೆ.

- Advertisement -

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕರಕನಳ್ಳಿ ಗ್ರಾಮದಲ್ಲಿ ಟೋಕರೆ ಕೋಳಿ ಸಮಾಜ ಸಂಘದ ಗ್ರಾಮ ಘಟಕ ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆ ಗ್ರಾಮ ಘಟಕಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯರವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಾತ್ಮರ ವಚನಗಳನ್ನು ನಿರಂತರವಾಗಿ ಅಧ್ಯಯನ ಮಾಡಬೇಕಾಗಿದೆ ಎಂದರು.

ಮಹಾತ್ಮರ ವಚನಗಳು ಅರ್ಥಪೂರ್ಣವಾಗಿರುತ್ತವೆ. ಪ್ರತಿಯೊಂದು ವಚನದಲ್ಲಿಯೂ ಬಹಳಷ್ಟು ಶಕ್ತಿ ಇರುತ್ತದೆ. ದಿನಕ್ಕೆ ಐದು ವಚನಗಳನ್ನು ಓದಿದರೆ ಬಿಪಿ, ಸುಗರ್ ಏನು ಇರುವುದಿಲ್ಲ. ಅಂತಹ ದೊಡ್ಡ ಶಕ್ತಿ ವಚನಗಳಲ್ಲಿ ಇದೆ. ಬುದ್ಧ, ಬಸವ, ಕನಕ, ಅಂಬೇಡ್ಕರ್, ನಿಜಶರಣ ಅಂಬಿಗರ ಚೌಡಯ್ಯ, ಮಹರ್ಷಿ ವಾಲ್ಮೀಕಿ ಸೇರಿದಂತೆ ಪ್ರತಿಯೊಬ್ಬ ಮಹಾತ್ಮರಿಗೆ ತಮ್ಮದೇಯಾದ ಇತಿಹಾಸವಿದೆ.

- Advertisement -

ಮಹರ್ಷಿ ವಾಲ್ಮೀಕಿರವರು ಜಗತ್ತಿಗೆ ರಾಮಾಯಣವನ್ನು ಪರಿಚಯಿಸಿಕೊಟ್ಟಿದ್ದಾರೆ. ಮಹಾತ್ಮರನ್ನು ನೆನಪಿಸಿಕೊಂಡು ಅವರ ಮಾರ್ಗದಲ್ಲಿ ಸಾಗುವ ನಿಟ್ಟಿನಲ್ಲಿ ಜಯಂತಿಗಳನ್ನು ಆಚರಿಸಲಾಗುತ್ತದೆ. ನಮ್ಮ ರಾಷ್ಟ್ರಕ್ಕೆ ಬಾಬಾ ಸಾಹೇಬರು ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಅವರು ಕಷ್ಟಪಟ್ಟು ಓದಿ, ಬರೆದು ನಮಗೆ ಈ ಸಂವಿಧಾನ ಕಲ್ಪಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬರಲ್ಲಿಯೂ ಕಲಿಯುವ ಛಲ ಇರಬೇಕಾಗುತ್ತದೆ. ಮಹಾತ್ಮರ ತತ್ವಾದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಾಗಬೇಕಾಗಿದೆ.

ಅಂಬಿಗರ ಸಮಾಜ ನಂಬಿಕಸ್ಥ ಸಮಾಜವಾಗಿದೆ. ದೋಣಿಯಲ್ಲಿ ಕುಳಿತವರನ್ನು ದಡಕ್ಕೆ ಸೇರಿಸುವ ಸಮಾಜ ಇದಾಗಿದೆ. ಮನ್ನಾಎಖೇಳ್ಳಿಯಲ್ಲಿ ಒಂದು ಸಮುದಾಯ ಭವನ ಮತ್ತು ಕರಕನಳ್ಳಿಯಲ್ಲಿ ಒಂದು ಸಮುದಾಯ ಭವನ ನಿರ್ಮಾಣಕ್ಕಾಗಿ ಸಮಾಜದವರು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವುಗಳನ್ನು ನಿರ್ಮಿಸಿಕೊಡುವ ಕೆಲಸ ಮಾಡುತ್ತೇನೆ. ಕರಕನಳ್ಳಿಯಲ್ಲಿ ಕಂಪೌಂಡ್ ನಿರ್ಮಾಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅದನ್ನು ಆದಷ್ಟು ಬೇಗ ಮಾಡಿಕೊಡುವ ಪ್ರಯತ್ನ ಮಾಡುತ್ತೇನೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಲಿಂಗೋಳ್ (ವಿಠಲಪೂರ) ದ ಮಾತಾ ಮಾಣಿಕೇಶ್ವರಿ ಆಶ್ರಮದ ಪರಮಪೂಜ್ಯರಾದ ಶ್ರೀ ಶಾಂತಿಬಾಬಾರು, ಹಳ್ಳಿಖೇಡ್ ಕೆ ವಾಡಿಯ ಮಹರ್ಷಿ ವಾಲ್ಮೀಕಿ ಆಶ್ರಮದ ಪೂಜ್ಯ ಶ್ರೀ ದತ್ತಾತ್ರೇಯ ಗುರುಜಿ, ಕರಕನಳ್ಳಿಯ ಶ್ರೀ ರಾಜಪ್ಪ ಮುತ್ಯರು, ರೇಕುಳಗಿ ಗುರುಗಳು ವಹಿಸಿದ್ದರು. ಪ್ರಮುಖರಾದ ನಸೀಮ್ ಪಟೇಲ್, ಚಂದ್ರಾಸಿಂಗ್, ಜಗನ್ನಾಥ ಜಮಾದಾರ್, ಪಾರ್ವತಿ ಸೋನಾರೆ, ಸುನೀಲ್ ಬಾವಿಕಟ್ಟಿ, ಷಣ್ಮುಖಪ್ಪ ಶೇಕಾಪೂರ್, ಸಂತೋಷ ಚೌಕಿ, ರಾಜಕುಮಾರ ನೆಲವಾಳ, ಭೀಮಶಾ ಭೈರನಳ್ಳಿ, ರವಿ ಘಾರಿಯಲ್, ಮಾರುತಿ ಮಾಸ್ಟರ್, ಅಶೋಕ್ ಪಾಟೀಲ್, ರಾಜಕುಮಾರ ಬೋರಾಳ್, ಶರಣಪ್ಪ ಖಾಶೆಂಪುರ್, ಚಂದ್ರು, ಅಶೋಕ್ ಕಾಗೆ, ವಿಜಯಕುಮಾರ್, ರವಿ, ಪುಂಡಲೀಕ ನಿಂಗನಬಾಡ ಸೇರಿದಂತೆ ಅನೇಕರಿದ್ದರು.

Join Whatsapp