ಬೆಂಗಳೂರು: ಸಂವಿಧಾನ ಶಿಲ್ಪಿ, ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಕರ್ನಾಟಕದ ಮಸೀದಿ-ಮದರಸಗಳಲ್ಲಿ ಸಂವಿಧಾನ ಕುರಿತು ಭಾಷಣ ಮತ್ತು ಸಂವಿಧಾನದ ಪೂರ್ವಪೀಠಿಕೆಯನ್ನು ಓದುವ ಕಾರ್ಯಕ್ರಮಗಳ ಮೂಲಕ ಮುಸ್ಲಿಮ್ ಸಮುದಾಯದ ನಡುವೆ ಜನ ಜಾಗೃತಿ ಆಂದೋಲನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನದ ರಾಜ್ಯ ಸಂಚಾಲಕ ಖಾಸಿಂ ಸಾಬ್ ಎ. ತಿಳಿಸಿದ್ದಾರೆ.
ಭಾರತೀಯರಾದ ನಮಗೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಕಳೆದಿವೆ. ಇಂದು ನಾವು ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಅಸಮಾನತೆಗಳ ಸಂಘರ್ಷದ ವಿಷಮ ಕಾಲಘಟ್ಟದಲ್ಲಿದ್ದೇವೆ. ಧರ್ಮ – ಧರ್ಮಗಳ ನಡುವೆ ವಿಷದಗಾಳಿ ಹಬ್ಬಿಸುತ್ತಿರುವ ಕೋಮುವಾದವು ನಮ್ಮ ಇಡೀ ಸೌಹಾರ್ದದ ನಾಡನ್ನು ಆವರಿಸಿಕೊಂಡು ಹಿಂದೆಂದೂ ಕಂಡರಿಯದ ಹಿಂಸೆ ದೌರ್ಜನ್ಯಗಳನ್ನು ಸೃಷ್ಟಿಸುತ್ತಿದೆ. ಈ ಮೂಲಕ ಹಿಂದುತ್ವದ ರಾಜಕಾರಣದ ಮೂಲಕ ಒಂದು ಜಾತಿ ಒಂದು ಧರ್ಮ ಒಂದು ಸಂಸ್ಕೃತಿಗೆ ಸರ್ವಾಧಿಕಾರ ನೀಡಲು ಬಯಸುತ್ತಿದೆ. ನಮ್ಮ ಪ್ರಜಾಪ್ರಭುತ್ವದ ಸರ್ಕಾರಿ ಅಧೀನದ ಸಂಸ್ಥೆಗಳೆ ‘ ಆರ್ಟಿಕಲ್ 15 – ದಿ ಕಾನ್ಸ್ ಸ್ಟಿಟ್ಯೂಷನ್ ಆಫ್ ಇಂಡಿಯಾದ ‘ ಧರ್ಮ, ಮೂಲವಂಶ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ನಿಷೇದ : (1) ರಾಜ್ಯವು ಯಾರೇ ನಾಗರೀಕನ ಧರ್ಮ, ಮೂಲವಂಶ, ಜಾತಿ, ಲಿಂಗ, ಜನ್ಮಸ್ಥಳದ ಅಥವಾ ಅವುಗಳಲ್ಲಿ ಯೋವುದೇ ಒಂದರ ಆಧಾರದ ಮೇಲೆ ಮಾತ್ರವೇ ಯಾವುದೇ ಒಂದು ತಾರತಮ್ಯವನ್ನು ಮಾಡತಕ್ಕದಲ್ಲ.’ ಎಂಬ ಸಂವಿಧಾನದ ಮೂಲ ಆಶಯಗಳನ್ನೇ ಗಾಳಿಗೆತೂರುತ್ತಿವೆ.
ಒಂದು ಕಡೆ ರಾಜ್ಯದ ಮುಸ್ಲಿಮ್ ಜನತೆ ಕೋಮುಗಲಭೆಗಳಿಂದ ನಲುಗುತ್ತಿದ್ದರೆ ಮತ್ತೊಂದು ಕಡೆ ಅನಕ್ಷರತೆ, ಬಡತನ, ನಿರುದ್ಯೋಗದ ಜ್ಯೋತೆಗೆ ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ. ಈ ನಗ್ನ ಸತ್ಯಗಳನ್ನು ಕೇಂದ್ರ ಸರ್ಕಾರದ 17 ನವೆಂಬರ್ 2006 ರಲ್ಲಿನ ಜಸ್ಟಿಸ್ ರಾಜೇಂದ್ರ ಸಾಚಾರ್ ಅವರ ವರದಿಯಿಂದ ಹಿಡಿದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾಗಿದ್ದ ಡಾ. ಸಿ.ಎಸ್. ದ್ವಾರಕಾನಾಥ್ ಅವರ ವರದಿಗಳ ವರೆವಿಗೂ ಹತ್ತಾರು ಸಮಿತಿ/ಆಯೋಗಗಳ ವರದಿಗಳು ಈ ಬಹಿರಂಗ ಸತ್ಯಗಳನ್ನು ಬಹಿರಂಗಪಡಿಸಿವೆ.
ಇಂತಹ ಭಾರತದ ವಿಶೇಷವಾಗಿ ಕರ್ನಾಟಕದ ಮುಸ್ಲಿಮರ ಶೋಚನೀಯ ಸ್ಥಿತಿ – ಗತಿಗಳಿಗೆ ಮೂಲಕಾರಣ ಮುಸ್ಲಿಮರಲ್ಲಿ ಸಂವಿಧಾನದ ಕುರಿತು ಅರಿವು ಮತ್ತು ಜಾಗೃತಿಯಿಲ್ಲದಿರುವುದು. ಅಂಬೇಡ್ಕರ್ ರವರು ಸಂವಿಧಾನಾತ್ಮಕವಾಗಿ ಅಲ್ಪಸಂಖ್ಯಾತ ಮುಸ್ಲಿಮರಿಗೆ ನೀಡಿರುವ ಹಕ್ಕು, ಕಾಯ್ದೆಗಳನ್ನು ನಾವು ಇಂದು ಓದಿ ಆರಿತುಕೊಳ್ಳಬೇಕಿದೆ. ನಮ್ಮ ದೇಶದ ಬುನಾದಿಯಾಗಿರುವ ಪ್ರಜಾಪ್ರಭುತ್ವ, ಜಾತ್ಯತೀತತೆ, ಸಾಮಾಜಿಕ ನ್ಯಾಯ ಮರು ಸ್ಥಾಪನೆಗೊಳ್ಳಬೇಕಿದೆ. ಆಡಳಿತ ವರ್ಗಗಳಿಂದ ದಮನಿತ, ದಲಿತ, ಹಿಂದುಳಿದ, ಶೋಷಿತ ವಿಶೇಷವಾಗಿ ಧಾರ್ಮಿಕ ಅಲ್ಪಸಂಖ್ಯಾತ ಮುಸ್ಲಿಮರ ಘನತೆ ಹಾಗು ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿದು ಕೊಳ್ಳಲಾಗುತ್ತಿದೆ. ಸ್ವಾತಂತ್ರ್ಯವು ಪ್ರತಿ ಭಾರತೀಯನ ಮೂಲಭೂತ ಹಕ್ಕು. ಭಾರತೀಯ ನಾಗರೀಕರಾದ ನಮಗೆ ಅದು ಸಂವಿಧಾನಾತ್ಮಕ ಹಕ್ಕು ಕೂಡ ಆಗಿಗೆ. ಈ ನಮ್ಮ ಬದುಕಿನ ಹಕ್ಕನ್ನು ನಮ್ಮದಾಗಿಸಿಕೊಳ್ಳಲು ನಮ್ಮ ಸಂವಿಧಾನವನ್ನು ಓದಬೇಕಿದೆ. ಈ ಹಿನ್ನೆಲೆಯಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಖಾಸಿಂ ಸಾಬ್.A., ರಾಜ್ಯ ಸಂಚಾಲಕರು, 99455 94342, T ಶಫಿವುಲ್ಲ, ಕೋ – ಆರ್ಡಿನೆಟರ್ 9844238069, – ಎಜುಸ್ ಪಾಷ, ಕೋ – ಆರ್ಡಿನೆಟರ್, 7892562864, – ರಬ್ಬಾನಿ ಮಳ್ಳಿ, ಸಾಮಾಜಿಕ ಜಾಲತಾಣ, ಸಂಚಾಲಕರು:8970482171