ಕರ್ನಾಟಕದಲ್ಲಿ ಆರ್ ಎಂಡ್ ಡಿ ನೀತಿಗೆ ಅನುಮೋದನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Prasthutha|

ಬೆಂಗಳೂರು: ಕರ್ನಾಟಕದಲ್ಲಿ ಆರ್ ಎಂಡ್ ಡಿ ನೀತಿಗೆ ಸಚಿವ ಸಂಪುಟದ ಅನುಮೋದನೆ ದೊರೆತಿದ್ದು, ಗ್ಯಾರೇಜ್ ಸಂಶೋಧನೆಗಳಿಂದ ಹಿಡಿದು ಸಾಂಸ್ಥಿಕ ಸಂಶೋಧನೆಗಳವರೆಗೆ ಪ್ರೋತ್ಸಾಹ, ಸಹಕಾರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

- Advertisement -

ಅವರು ಇಂದು ಸಂಕಲ್ಪದಿಂದ ಸಿದ್ಧಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ ಶಾ ಅವರೊಂದಿಗೆ ಭಾಗವಹಿಸಿ ಮಾತನಾಡಿದರು.

ಬೆಂಗಳೂರಿನಲ್ಲಿ ಜೆನೋಮ್ಯಾಟಿಕ್ಸ್ ನಿಂದ ಏರೋಸ್ಪೇಸ್ ವರೆಗೆ 400 ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರಗಳಿವೆ. ಬೆಂಗಳೂರು ನಗರದಲ್ಲಿ ಹೊರತುಪಡಿಸಿದರೆ, ಪ್ರಪಂಚದ ಯಾವುದೇ ನಗರಗಳಲ್ಲಿ ಈ ಸಂಖ್ಯೆಯ ಆರ್ ಎಂಡ್ ಡಿ ಕೇಂದ್ರಗಳನ್ನು ಕಾಣಲು ಸಾಧ್ಯವಿಲ್ಲ ಎಂದರು.

- Advertisement -

ಕರ್ನಾಟಕದ ಅಭಿವೃದ್ಧಿಯಲ್ಲಿ ಕೈಗಾರಿಕೆಗಳ ಕೊಡುಗೆ:

ರಾಜ್ಯದಲ್ಲಿ ಉದ್ಯೋಗ ನೀತಿಯನ್ನು ರೂಪಿಸಲಾಗಿದ್ದು, ಉದ್ಯೋಗದಾತ ಉದ್ಯಮಿಗಳಿಗೆ ಪ್ರೋತ್ಸಾಹಕಗಳನ್ನು ನೀಡಲಾಗುವುದು. ಸೆಮಿಕಂಡಕ್ಟರ್ ನೀತಿ, ವಿದ್ಯುತ್ ಚಾಲಿತ ವಾಹನ ನೀತಿ, ನವೀಕರಿಸಬಹುದ ಇಂಧನ ನೀತಿಗಳನ್ನು ರೂಪಿಸಲಾಗಿದೆ. ಈ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯಕ್ಕೆ 110 ಲಕ್ಷ ಕೋಟಿ ರೂ.ಗಳ ವಿದೇಶಿ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೈಡ್ರೋಜನ್ ಇಂಧನ, ಸಮುದ್ರನೀರಿನಿಂದ ಅಮೋನಿಯಾ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ. ಕರ್ನಾಟಕದ ಅಭಿವೃದ್ಧಿಯಲ್ಲಿ ಕೈಗಾರಿಕೆಗಳ ಕೊಡುಗೆಗೆ ಮನ್ನಣೆ ನೀಡಲಾಗುತ್ತಿದೆ. ಭಾರತದಲ್ಲಿ ಅಮೃತ ಕಾಲವನ್ನು ಸ್ಥಾಪಿಸುವ ಕೆಲಸನವನ್ನು ಎಲ್ಲರೂ ಒಗ್ಗಟ್ಟಾಗಿ ಮಾಡಬೇಕಿದೆ ಎಂದರು.

ದೇಶದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ರಾಜ್ಯದ ಕೊಡುಗೆ :

ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜಮಹಾರಾಜರ ಕಾಲದಿಂದಲೂ ಪ್ರಗತಿಪರ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ವಾಣಿಜ್ಯ, ತಂತ್ರಜ್ಞಾನದ ಬೆಳವಣಿಗೆಗೆ ಒತ್ತು ನೀಡಲಾಗಿದೆ. ರಾಜ್ಯದಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.ಕರ್ನಾಟಕ ಐಟಿಬಿಟಿ, ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಹಿಂದಿಕ್ಕುತ್ತಿದೆ. ದೇಶದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಕರ್ನಾಟಕ 1 ಟ್ರಿಲಿಯನ್ ಡಾಲರ್ನಷ್ಟು ಕೊಡುಗೆ ನೀಡಬೇಕೆನ್ನುವ ಗುರಿ ಇದೆ. ಇದಕ್ಕಾಗಿ ವಲಯವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ಕೃಷಿಯಿಂದ ಆಹಾರ ಭದ್ರತೆಯ ಜೊತೆಗೆ ಆರ್ಥಿಕ ಭದ್ರತೆ :

ಕರ್ನಾಟಕ ಕೃಷಿ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಕಂಡಿದೆ. 10 ಕೃಷಿ ಹವಾಮಾನ ವಲಯಗಳು ರಾಜ್ಯದಲ್ಲಿದ್ದು, ವರ್ಷಪೂರ್ತಿ ಕೃಷಿ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಕೃಷಿ ವಲಯದ ಶೇ.1 ಅಭಿವೃದ್ಧಿ, ಉತ್ಪಾದನಾ ಕ್ಷೇತ್ರದಲ್ಲಿ ಶೇ. 4 ಹಾಗೂ ಸೇವಾ ವಲಯದಲ್ಲಿ ಶೇ. 10 ರಷ್ಟು ಅಭಿವೃದ್ಧಿಗೆ ಕಾರಣವಾಗುತ್ತದೆ. ಆಹಾರ ಕ್ಷೇತ್ರ ಆಹಾರ ಭದ್ರತೆಯ ಜೊತೆಗೆ ಆರ್ಥಿಕ ಭದ್ರತೆಯನ್ನೂ ಕೊಡುವುದರಿಂದ ಉದ್ಯಮಿಗಳು ಆಹಾರ ಕ್ಷೇತ್ರದತ್ತ ಗಮನಹರಿಸಬೇಕು. ಆಹಾರ ಮತ್ತು ಸೇವಾ ವಲಯದ ಸಂಪರ್ಕ ಗಟ್ಟಿಗೊಳ್ಳಬೇಕು. ಇದಕ್ಕೆ ಪೂರಕವಾದ ನೀತಿಗಳನ್ನೂ ರೂಪಿಸಲಾಗಿದೆ. ಪ್ರಧಾನಿಗಳ ಆಶಯವಾದ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಕಾರವಾದಾಗ, ರೈತರ ಆದಾಯವೂ ದುಪ್ಪಟ್ಟಾಗುತ್ತದೆ. ಆಗ ಶೇ. 60 ಪ್ರತಿಶತ ಕೃಷಿಯನ್ನೇ ನಂಬಿರುವ ಜನರ ಜೀವನ ಸುಧಾರಣೆ ಸಾಧ್ಯ. ತಳಮಟ್ಟದ ಶ್ರಮಿಕರೇ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ. ಮುಂದಿನ 25 ವರ್ಷಗಳ ಅಮೃತಕಾಲದಲ್ಲಿ ಶ್ರಮಿಕ ವರ್ಗದ ಅಭಿವೃದ್ಧಿಯನ್ನು ಗುರಿಯಾಗಿಸಿಕೊಳ್ಳಬೇಕಿದೆ ಎಂದರು.

ಭಾರತೀಯರಲ್ಲಿ ಆತ್ಮವಿಶ್ವಾಸ ತುಂಬಿಸಿದ ಆತ್ಮನಿರ್ಭರ ಭಾರತ :

ಒಂದು ದೇಶ 75 ವರ್ಷಗಳಲ್ಲಿ ಅಗಾಧ ಅನುಭವವನ್ನು ಹೊಂದಿರುತ್ತದೆ. ಅನೇಕ ಏಳುಬೀಳುಗಳನ್ನು ಕಂಡಿದೆ. ಪ್ರಜಾಪ್ರಭುತ್ವಕ್ಕೆ ಹಾಕಲಾಗಿದ್ದ ಸವಾಲುಗಳನ್ನು ದೇಶದ ಜನರ ನೈತಿಕ ಶಕ್ತಿಯಿಂದ ಎದುರಿಸಲಾಯಿತು. ಮೇಕ್ ಇನ್ ಇಂಡಿಯಾ ನೀತಿ ಭಾರತವನ್ನು ಸದೃಢವಾಗಿಸಿತು. ಆತ್ಮನಿರ್ಭರ ಮಂತ್ರದಿಂದ ದೇಶದ ಜನರ ಆತ್ಮವಿಶ್ವಾಸ ಹೆಚ್ಚಿತು. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪ್ರತಿಯೊಬ್ಬ ನಾಗರಿಕರಲ್ಲಿ  ಆತ್ಮವಿಶ್ವಾಸವನ್ನು ತುಂಬಿದರು. ದೇಶದ ಕಟ್ಟಕಡೆಯ ವ್ಯಕ್ತಿಯ ಆಶಾಭಾವವೇ ಈ ದೇಶದ ಶಕ್ತಿ. ಕಟ್ಟಕಡೆಯ ವ್ಯಕ್ತಿ ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗುವ ಮೂಲಕ ದೇಶದ ಭವಿಷ್ಯವಾಗುತ್ತಾನೆ. ಈ ನೀತಿಯನ್ನೇ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಬಿಂಬಿಸುತ್ತದೆ. ದೂರದೃಷ್ಟಿಯ , ಶಕ್ತಿಯುತ ನಾಯಕ ಬೇಕಾಗುತ್ತದೆ. ಈ ಗುಣಗಳನ್ನು ನಾವು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಷಾ ಅವರಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಕೇಂದ್ರ ಸಂಸ್ಕೃತಿ ಸಚಿವ ಕಿಶನ ರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಸಚಿವ ಮುರುಗೇಶ ನಿರಾಣಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು ಉಪಸ್ಥಿತರಿದ್ದರು.



Join Whatsapp