ಡಿಜಿಟಲ್ ರೂಪಾಯಿಯ ಮೊದಲ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಿದ ಆರ್ ಬಿಐ

Prasthutha|

ಮುಂಬೈ:  ದೇಶದ ಮೊದಲ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಳಕೆಯು ಮಂಗಳವಾರದಿಂದ ಆರಂಭವಾಗಲಿದೆ.

- Advertisement -

ಈ ವರ್ಷದ ಫೆಬ್ರುವರಿ 1ರಂದು ಮಂಡಿಸಿದ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಚಲಾವಣೆಗೆ ತರುವ ಯೋಜನೆಯನ್ನು ಘೋಷಣೆ ಮಾಡಿತ್ತು.

ಈ ಸಂಬಂಧ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ರಿಟೇಲ್ ವಹಿವಾಟು ದೇಶದ ಕೆಲವು ಆಯ್ದ ಪ್ರದೇಶಗಳಲ್ಲಿ, ಕೆಲವು ಗ್ರಾಹಕರು ಮತ್ತು ವ್ಯಾಪಾರಿಗಳ ನಡುವೆ ನವೆಂಬರ್ 1 ರಿಂದ ಪ್ರಾರಂಭವಾಗಲಿದೆ ಎಂದು ಆರ್ ಬಿಐ ತಿಳಿಸಿದೆ.

- Advertisement -

ಆರಂಭಿಕ ಹಂತದಲ್ಲಿ ಸರ್ಕಾರಿ ಟ್ರೆಷರಿ ಬಿಲ್, ಬಾಂಡ್ ವಹಿವಾಟುಗಳಲ್ಲಿ ಈ ವರ್ಚುವಲ್ ಕರೆನ್ಸಿ ಬಳಕೆ ಮಾಡಲು ಅವಕಾಶ ಇರಲಿದ್ದು, ಎಸ್ ಬಿಐ, ಬ್ಯಾಂಕ್ ಆಫ್ ಬರೋಡ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್ ಎಸ್ ಬಿಸಿ ಡಿಜಿಟಲ್ ರೂಪಾಯಿ ನೀಡಲಿವೆ.

ಪ್ರಾಯೋಗಿಕ ಬಳಕೆಯಲ್ಲಿ ಸಿಗುವ ಅನುಭವ ಆಧರಿಸಿ ಇತರ ಸಗಟು ವಹಿವಾಟುಗಳಲ್ಲಿ ಹಾಗೂ ಬೇರೆ ಬೇರೆ ದೇಶಗಳಲ್ಲಿ ಇರುವವರ ನಡುವಿನ ಪಾವತಿಗಳಲ್ಲಿ ಇದನ್ನು ಬಳಸಲು ಆದ್ಯತೆ ನೀಡಲಾಗುತ್ತದೆ.

ಈಚೆಗೆ ಸಿದ್ಧಪಡಿಸಿರುವ ಪರಿಕಲ್ಪನಾ ಟಿಪ್ಪಣಿಯಲ್ಲಿ ಆರ್ ಬಿಐ, ಕೇಂದ್ರೀಯ ಬ್ಯಾಂಕ್ ನ ಡಿಜಿಟಲ್ ಕರೆನ್ಸಿಯನ್ನು (ಸಿಬಿಡಿಸಿ) ಸೃಷ್ಟಿಸುವುದು ಚಾಲ್ತಿಯಲ್ಲಿ ಇರುವ ಕರೆನ್ಸಿಗೆ ಪೂರಕವೇ ವಿನಾ, ಪರ್ಯಾಯ ಅಲ್ಲ ಎಂದು ಹೇಳಿದೆ. ಬಳಕೆದಾರರಿಗೆ ಹೆಚ್ಚುವರಿ ಪಾವತಿ ವ್ಯವಸ್ಥೆಯೊಂದನ್ನು ಇದು ಕಲ್ಪಿಸುತ್ತದೆ. ಈಗ ಇರುವ ಪಾವತಿ ವ್ಯವಸ್ಥೆಗಳನ್ನು ತೆಗೆದುಹಾಕುವುದಿಲ್ಲ ಎಂದು ಕೂಡ ಹೇಳಿದೆ.

Join Whatsapp