ದೆಹಲಿಯಲ್ಲಿ ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸಿದ ರವಿ ಚನ್ನಣ್ಣನವರ್: ಕೇಸರಿ ಪಡೆ ಸೇರುತ್ತಾರಾ ಪೊಲೀಸ್ ಅಧಿಕಾರಿ !

Prasthutha|

ನವದೆಹಲಿ: ಕರ್ನಾಟಕದ ಹಾಲಿ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಅವರು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ಹಾದಿ ಹಿಡಿಯುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.

- Advertisement -

 ಗದಗ ಮೂಲದ ರವಿ ಡಿ ಚನ್ನಣ್ಣನವರ್ ರಾಜಕೀಯ ಪ್ರವೇಶಿಸುತ್ತಾರೆ ಎಂಬ ಚರ್ಚೆ ದೆಹಲಿ ವಲಯದಲ್ಲಿ ಶುರುವಾಗಿದೆ. ಇಂತಹದ್ದೊಂದು ಚರ್ಚೆ ಶುರುವಾಗಲು ಕಾರಣ ಇತ್ತೀಚೆಗೆ ಚನ್ನಣ್ಣನವರ್ ದೆಹಲಿಯಲ್ಲಿ ಬಿಜೆಪಿ ವರಿಷ್ಠ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ರವಿ ಚನ್ನಣ್ಣನವರ್ ಮಂಗಳವಾರ ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ದೆಹಲಿಯ ಅಶೋಕ ರಸ್ತೆಯ ನಂಬರ್ 9 ನಿವಾಸದಲ್ಲಿ ಬಿ.ಎಲ್. ಸಂತೋಷ್ ಅವರನ್ನು ರವಿ ಚನ್ನಣ್ಣನವರ್ ಭೇಟಿಯಾಗಿ ಪಕ್ಷ ಸೇರುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

- Advertisement -

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದೆಹಲಿಯಲ್ಲಿ ಸಂಪುಟ ರಚನೆ ಕಸರತ್ತು ಮಾಡುತ್ತಿರುವಾಗಲೇ ರವಿ ಚನ್ನಣ್ಣನವರ್ ದೆಹಲಿಯಲ್ಲಿದ್ದರು. ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಬಿಜೆಪಿ ವರಿಷ್ಠರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದ ವೇಳೆಯೇ ರವಿ ಚನ್ನಣ್ಣನವರ್ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿರುವುದು ಮಹತ್ವ ಪಡೆದಿದೆ.

ರವಿ ಚನ್ನಣ್ಣನವರ್ ಕೆಲಸಕ್ಕಿಂತ, ಮಾತಿನಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದವರು. ಖಡಕ್ ಐಪಿಎಸ್ ಅಧಿಕಾರಿ ಎಂದು ಪ್ರಚಾರದಲ್ಲಿರುವ ಚನ್ನಣ್ಣನವರ್ ಮಠಗಳ ಭೇಟಿ ಜೊತೆಗೆ ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತಿರುವುದು ಕುತೂಹಲ ಕೆರಳಿಸಿದೆ.

ಇತ್ತೀಚೆಗೆ, ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದ ಕೆ. ಅಣ್ಣಾಮಲೈ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸೋತು ಈಗ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ.



Join Whatsapp