ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ದರ ಸ್ಥಗಿತ; ದಾಖಲಾತಿ ಪ್ರಮಾಣ ಶೇ. 40.2ಕ್ಕೆ ಕುಸಿತ

Prasthutha|

ಬೆಂಗಳೂರು: ಸರ್ವ ಶಿಕ್ಷಣ ಅಭಿಯಾನ, ಮರಳಿ ಬಾ ಶಾಲೆಗೆ, ಬಾ ಬಾಲೆ ಶಾಲೆಗೆ, ಕೂಲಿಯಿಂದ ಶಾಲೆಗೆ, ಚಿಣ್ಣರ ಅಂಗಳ, ನಲಿಕಲಿ ಹೀಗೆ ಹತ್ತು ಹಲವು ಯೋಜನೆಗಳನ್ನು ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ರಾಜ್ಯ ಸರ್ಕಾರವು ಜಾರಿಗೊಳಿಸಿದ್ದರೂ ಕಳೆದ ಹತ್ತು ವರ್ಷಗಳಿಂದ ಪ್ರಾಥಮಿಕ ಶಾಲೆಗೆ ತರಗತಿಗೆ ಸೇರ್ಪಡೆಯಾಗುವ ಮಕ್ಕಳ ಸಂಖ್ಯೆ ದರ ಸ್ಥಗಿತಗೊಂಡಿದೆ ಎಂಬ ಅಂಶವನ್ನು ಕರ್ನಾಟಕ ಆರ್ಥಿಕ ಸಮೀಕ್ಷೆಯು ಹೊರಗೆಡವಿದೆ.

- Advertisement -

‘ಶಾಲೆಗೆ ದಾಖಲಾಗುವ ಮಕ್ಕಳ ಪ್ರಮಾಣವನ್ನು ಗಮನಿಸಿದಾಗ ಜನಸಂಖ್ಯೆ ಇಳಿಮುಖವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತವೆ. ಕಳೆದ 10 ವರ್ಷಗಳಿಂದ 1, 2 ಮತ್ತು 3ನೇ ತರಗತಿಗೆ ಸೇರ್ಪಡೆಯಾಗುವ ಮಕ್ಕಳ ಸಂಖ್ಯೆ ದರ ಸ್ಥಗಿತಗೊಂಡಿದೆ. 2011ರಲ್ಲಿ ಮೊದಲ ಮೂರು ತರಗತಿಗಳಿಗೆ ಸೇರ್ಪಡೆಯಾಗುವ ಮಕ್ಕಳ ಸಂಖ್ಯೆ 10.8 ಲಕ್ಷವಿದ್ದು 2016ರಲ್ಲಿ 11.6 ಲಕ್ಷಕ್ಕೆ ಏರಿಕೆಯಾಗಿದೆ. ಆದರೆ 2020ರಲ್ಲಿ ಇದರ ಪ್ರಮಾಣ 10.85 ಲಕ್ಷಗಳಿಗೆ ಇಳಿಕೆ ಕಂಡಿದೆ,’ ಎಂದು ಸಮೀಕ್ಷೆ ವರದಿಯಲ್ಲಿ ವಿವರಿಸಿದೆ.

2011ರಲ್ಲಿ ಒಂದನೇ ತರಗತಿಯನ್ನು ಪ್ರವೇಶಿಸಿದ ಮಕ್ಕಳು 2020ರಲ್ಲಿ ಹತ್ತನೇ ತರಗತಿ ಪ್ರವೇಶಿಸಿದ್ದಾರೆ. ಹತ್ತನೇ ತರಗತಿಯ ಸಂಖ್ಯೆಯನ್ನು ನೋಡಿದಾಗ ಶೇ. 78.6ರಷ್ಟು ಮಕ್ಕಳು ಕಲಿಕೆಯಲ್ಲಿ ಉಳಿದುಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಒಂದನೇ ತರಗತಿಗೆ ಸೇರಿದ ಎಲ್ಲಾ ಮಕ್ಕಳು 12ನೇ ತರಗತಿಯನ್ನು ಪೂರೈಸುವ ಹಾಗೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಸರ್ಕಾರದ್ದು ಎಂದು ಸಮೀಕ್ಷೆ ವರದಿಯಲ್ಲಿ ಹೇಳಲಾಗಿದೆ.

- Advertisement -

ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಸಾಕಷ್ಟು ಪ್ರಮಾಣದಲ್ಲಿ ಹಣ ಖರ್ಚು ಮಾಡುವುದನ್ನು ಮುಂದುವರೆಸುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ದಾಖಲಾದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಸಮೀಕ್ಷೆ ವರದಿಯು ಹೇಳಿದೆ. ಹಾಗೆಯೇ 2011ರಿಂದ 2020ರವರೆಗೆ ಪ್ರತಿ ವರ್ಷವೂ ಸರ್ಕಾರಿ ಶಾಲೆಗಳ ತರಗತಿಯಲ್ಲಿ ಮಕ್ಕಳ ಪ್ರಮಾಣ ಕುಸಿತ ಕಂಡಿದೆ ಎಂಬ ಅಂಶವನ್ನೂ ಮುನ್ನೆಲೆಗೆ ತಂದಿದೆ.

ಒಂದನೇ ತರಗತಿ ದಾಖಲಾತಿ ಪ್ರಮಾಣ ಶೇ. 51.4ರಿಂದ ಶೇ.40.2ಕ್ಕೆ ಕುಸಿತ ಕಂಡಿದೆ. ಇದು ಶೇ. 10ರಷ್ಟು ಕಡಿಮೆಯಾಗಿದ್ದು ಇದು ಬೃಹತ್‌ ಪ್ರಮಾಣವಾಗಿದೆ. ಇದೇ ರೀತಿಯ ಇಳಿಕೆಗಳು 2ನೇ ತರಗತಿಯಲ್ಲಿ ಶೇ.57.ರಿಂದ 41.3ಕ್ಕೆ, 3ನೇ ತರಗತಿಯಲ್ಲಿ ಶೇ. 54.2ರಿಂದ ಶೇ.41.9ಕ್ಕೆ, 4ನೇ ತರಗತಿಯಲ್ಲಿ ಶೇ. 55.2ರಿಂದ ಶೇ.45.5ಕ್ಕೆ, 5ನೇ ತರಗತಿಯಲ್ಲಿ ಶೇ. 57.ರಿಂದ ಶೇ.47.3ಕ್ಕೆ, ಇಳಿಕೆ ಆಗಿದೆ ಎಂದು ವರದಿ ತಿಳಿಸಿದೆ.

7ನೇ ತರಗತಿಯಿಂದ 10ನೇ ತರಗತಿವರೆಗೆ ಇಳಿಕೆಯ ಪ್ರಮಾಣವು ತೀವ್ರವಾಗಿಲ್ಲವಾದರೂ ಇಳಿಕೆಯಾಗುತ್ತಿರುವುದಂತೂ ಖಚಿತವಾಗಿದೆ. 2013ರಲ್ಲಿ ಎಲ್ಲಾ ತರಗತಿಗಳ ಒಟ್ಟು ನೋಂದಣಿ 52.4 ಲಕ್ಷಗಳಿದ್ದರೆ 2020ರಲ್ಲಿ ಇದು 45.1 ಲಕ್ಷಕ್ಕೆ ಅಂದರೆ ಶೇ. 43.4ರಷ್ಟು ಇಳಿದಿದೆ ಎಂಬ ಅಂಶ ವರದಿಯಿಂದ ಗೊತ್ತಾಗಿದೆ.

2020ರಲ್ಲಿ ಕೇವಲ ಶೇ.40ರಷ್ಟು ಮಕ್ಕಳು ಮಾತ್ರ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದರು. ಕರ್ನಾಟಕದ ಅಂಕಿ ಸಂಖ್ಯೆಯನ್ನು ನೋಡಿದರೆ ಭಾರೀ ಪ್ರಮಾಣದಲ್ಲಿ ಶಿಕ್ಷಕರ ಸಂಬಳಕ್ಕೆ ವಿನಿಯೋಗಿಸುತ್ತಿದೆ. ಇದು ಪ್ರತಿ ವರ್ಷ ಹೆಚ್ಚುತ್ತಲೇ ಸಾಗಿದೆ. ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆಯಲ್ಲಿ ತೀವ್ರವಾದ ಇಳಿಕೆ ಕಾಣುತ್ತಿರುವಾಗ ಸರ್ಕಾರ ಶಿಕ್ಷಕರ ತರಬೇತಿಯೂ ಸೇರಿದಂತೆ ಉಳಿದ ಅನೇಕ ವಿಷಯಗಳ ಕುರಿತೂ ಮರು ಯೋಚನೆ ಮಾಡಬೇಕು ಎಂದು ವರದಿ ಹೇಳಿದೆ.

►(ಕೃಪೆ: ದಿ ಫೈಲ್)



Join Whatsapp