ಮಂಗಳೂರು: ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಗೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಕಠಿನ ಸಜೆ ವಿಧಿಸಿದೆ.
ಸಂತ್ರಸ್ತೆ ಪರಿಶಿಷ್ಟ ಪಂಗಡದ ಹುಡುಗಿಯಾಗಿದ್ದು, ಬಾಗಲಕೋಟೆ ಹಾರ್ದೊಳ್ಳಿಯ ಶ್ರೀಕಾಂತ್ ಹನುಮಂತ ಶಿಕ್ಷೆಗೊಳಗಾದ ಅಪರಾಧಿ. ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು ಈ ತೀರ್ಪು ನೀಡಿದ್ದಾರೆ.
ಬಾಲಕಿ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕರಂಬಾರು ಗ್ರಾಮದ ಬಾಕ್ಸ್ ಕಂಪೆನಿಯೊಂದರ ಶೆಡ್‌ನಲ್ಲಿ ತನ್ನ ಪಾಲಕರ ಜತೆ ವಾಸವಾಗಿದ್ದಳು. ಅಲ್ಲಿಯೇ ಪಕ್ಕದ ಶೆಡ್‌ನಲ್ಲಿದ್ದ ದುಷ್ಕರ್ಮಿ ಬಾಲಕಿಯ ಪಾಲಕರು ಮನೆಯಲ್ಲಿ ಇಲ್ಲದ ಸಂದರ್ಭ ಆಕೆಯ ಬಳಿ ಬಂದು ಪ್ರೀತಿಸುವುದಾಗಿ ನಂಬಿಸಿ 2019ರ ಎ. 12ರಿಂದ ಹಲವು ಬಾರಿ ಅತ್ಯಾಚಾರವೆಸಗಿದ್ದನು. ಅಲ್ಲದೆ ತನ್ನ ಮೊಬೈಲ್‌ನಲ್ಲಿ ಫೋಟೋಗಳನ್ನು ತೆಗೆದು ಅತ್ಯಾಚಾರದ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು.
ಶಾಲೆಗೆ ಹೋಗಿದ್ದ ಬಾಲಕಿ ಅನಾರೋಗ್ಯಕ್ಕೀಡಾದಾಗ ಪರೀಕ್ಷಿಸಿದ ವೇಳೆ ಆಕೆ ಗರ್ಭಿಣಿಯಾಗಿರುವುದು ತಿಳಿದು ಬಂದು ಬಳಿಕ ಆಕೆ ಮಗುವಿಗೆ ಜನ್ಮ ನೀಡಿದ್ದಳು.
ಎಸಿಪಿ ಶ್ರೀನಿವಾಸ ಗೌಡ ಆರ್. ಪ್ರಾಥಮಿಕ ತನಿಖೆ ನಡೆಸಿ, ಎಸಿಪಿ ಬೆಳ್ಳಿಯಪ್ಪ ಕೆ.ಯು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಬಾಲಕಿಗೆ 10.50 ಲಕ್ಷ ರೂ. ಪರಿಹಾರ ನೀಡಲು ಸರಕಾರಕ್ಕೆ ಆದೇಶ:
ವಿಚಾರಣೆ ನಡೆಸಿದ ನ್ಯಾಯಾಧೀಶರು ಅಪರಾಧಿಗೆ 10 ವರ್ಷ ಕಠಿನ ಸಜೆ ಮತ್ತು 10,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳು ಕಠಿನ ಸಜೆ, ಹಾಗೂ ಕಲಂ 376(3) ಅಡಿಯಲ್ಲಿ 20 ವರ್ಷ ಕಠಿನ ಸಜೆ ಮತ್ತು 10,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳ ಕಠಿನ ಸಜೆ, ಕಲಂ 506ರ ಅಡಿಯಲ್ಲಿ 1 ವರ್ಷ ಸಾದಾ ಸಜೆ ಮತ್ತು 5,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 1 ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ, ನೊಂದ ಬಾಲಕಿಗೆ ಸರಾಕಾರ 10.50 ಲ.ರೂ. ಪರಿಹಾರ ನೀಡುವಂತೆಯೂ ಆದೇಶ ನೀಡಿದ್ದಾರೆ.