ಚಿಕ್ಕಮಗಳೂರು : ಕ್ರಷರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ 15 ವರ್ಷದ ಅಪ್ರಾಪ್ತ ವಯಸ್ಕ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣವೊಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಬಾಲಕಿಯ ಚಿಕ್ಕಮ್ಮ ಸೇರಿ, ಸಂಘಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರೆನ್ನಲಾದ 17 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈಗಾಗಲೇ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವ್ ಮೂಲದ 15 ವರ್ಷದ ಬಾಲಕಿ ತನ್ನ ತಾಯಿಯ ತಂಗಿಯೊಂದಿಗೆ ಇತ್ತೀಚೆಗೆ ಶೃಂಗೇರಿ ತಾಲೂಕಿನ ಕುಂಚೇಬೈಲು ಸಮೀಪದಲ್ಲಿರುವ ಗೋಚುವಳ್ಳಿ ಗ್ರಾಮದ ಕ್ರಷರೊಂದಕ್ಕೆ ಕೆಲಸಕ್ಕೆ ಬಂದಿದ್ದು, ಈ ವೇಳೆ ಅಲ್ಲಿನ ಕೆಲಸಗಾರನೊಬ್ಬ ಬಾಲಕಿಯನ್ನು ಪುಸಲಾಯಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆತನ ಸ್ನೇಹಿತರೂ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.
ದೌರ್ಜನ್ಯಕ್ಕೊಳಗಾದ ಬಾಲಕಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ರಕ್ಷಿಸಿದ್ದು, ಈ ಸಂಬಂಧ ಶೃಂಗೇರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕ್ರಷರ್ ನಲ್ಲಿ ಬಾಲಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳುತ್ತಿರುವ ಬಗ್ಗೆ ದೂರಿನ ಪರಿಶೀಲನೆಗೆ ಹೋದಾಗ, ಬಾಲಕಿಗೆ ಅಲ್ಲಿನವರು ಲೈಂಗಿಕ ಕಿರುಕುಳ ನೀಡಿರುವುದೂ ಬೆಳಕಿಗೆ ಬಂದಿದೆ. ಈ ಸಂಬಂಧ ಬಾಲಕಿ ಹೇಳಿಕೆ ನೀಡಿದ್ದಾರೆ. ದೌರ್ಜನ್ಯ ಎಸಗಿದ 15 ಮಂದಿಯ ಹೆಸರನ್ನು ಆಕೆ ತಿಳಿಸಿದ್ದಾಳೆ. ಈ ಕಿಡಿಗೇಡಿಗಳಿಗೆ ಆಕೆಯ ಚಿಕ್ಕಮ್ಮನೂ ಸಹಕಾರ ನೀಡಿದ್ದಳೆಂದು ಬಾಲಕಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾಳೆ.
ಶೃಂಗೇರಿ ತಾಲೂಕಿನ ಕಿಕ್ರೆ ಗ್ರಾಮದ ಅಭಿ, ಆನೆಗುಂದ ಗ್ರಾಮದ ರಾಜೇಶ್, ಅಮಿತ್, ಗಿರೀಶ್, ಹೊಳೆಕೊಪ್ಪ ಗ್ರಾಮದ ಮಣಿಕಂಠ, ವಿಕಾಸ್, ನೆಮ್ಮಾರ್ ಸಂಪತ್, ಶೃಂಗೇರಿಯ ನಾರಾಯಣ ಗೌಡ, ಅಶ್ವಥಗೌಡ, ಅಭಿಗೌಡ, ಕುರುಬಗೆರೆ ಸಂತೋಷ್, ಹೆಗ್ಗದ್ದೆಯ ದೀಕ್ಷಿತ್, ಹೇರೂರಿನ ಸಂತೋಷ್, ಕಿಗ್ಗಾದ ನಿರಂಜನ್, ಬಸ್ ಚಾಲಕ ಖಾಂಡ್ಯ ಯೋಗೀಶ್ ಎಂಬ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಬಾಲಕಾರ್ಮಿಕಳನ್ನು ಕ್ರಷರ್ ಕೆಲಸಕ್ಕೆ ತೊಡಗಿಸಿಕೊಂಡಿದ್ದುದಕ್ಕೆ ಕ್ರಷರ್ ಮಾಲಕನ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇದಕ್ಕೆಲ್ಲಾ ಸಹಕಾರ ನೀಡಿದ ಬಾಲಕಿಯ ಚಿಕ್ಕಮ್ಮನ ವಿರುದ್ಧವೂ ದೂರು ದಾಖಲಾಗಿದೆ.
ಆರೋಪಿಗಳಲ್ಲಿ ಹಲವು ಮಂದಿ ಸಂಘಪರಿವಾರಗಳಲ್ಲಿ ಗುರುತಿಸಿಕೊಂಡವರು. ಪ್ರಕರಣದ ಪ್ರಮುಖ ಆರೋಪಿ ಅಭಿ ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದು, ಮಣಿಕಂಠ ಎಂಬಾತ ಶೃಂಗೇರಿ ತಾಲೂಕು ಬಿಜೆಪಿ ಯುವಮೋರ್ಚಾದ ಸದಸ್ಯನಾಗಿದ್ದಾನೆ. ವಿಕಾಸ್ ಎಂಬಾತ ಬಿಜೆಪಿ ಜಿ.ಪಂ. ಸದಸ್ಯರೊಬ್ಬರ ಸಂಬಂಧಿ ಎನ್ನಲಾಗುತ್ತಿದೆ. ಸಂಪತ್ ಎಂಬಾತ ಸನಾತನ ಸಂಸ್ಥೆಯ ಸದಸ್ಯ ನ್ನಲಾಗಿದೆ. ಆರೋಪಿಗಳು ಸಂಘಪರಿವಾರದ ಮುಖಂಡರ ಜೊತೆ, ಕಾರ್ಯಕ್ರಮಗಳಲ್ಲಿ ಭಾಗಿಯಾದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.