ಅತ್ಯಾಚಾರ ಪ್ರಕರಣ: ಬಿಜೆಪಿಯ ಶಹನವಾಝ್ ವಿರುದ್ಧ ಎಫ್’ಐಆರ್ ದಾಖಲಿಸಲು ಸೂಚಿಸಿದ್ದ ಆದೇಶ ರದ್ದು ಮಾಡಿದ ದೆಹಲಿ ಹೈಕೋರ್ಟ್

Prasthutha|

ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ನಾಯಕ ಶಹನವಾಝ್ ಹುಸೇನ್ ಮತ್ತು ಅವರ ಸಹೋದರನ ವಿರುದ್ಧ ಎಫ್’ಐಆರ್ ದಾಖಲಿಸಲು ನಿರ್ದೇಶಿಸುವ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
ದೂರಿನಲ್ಲಿ ಕೃತ್ಯವನ್ನು ಬಹಿರಂಗಪಡಿಸಿದರೆ ಪೋಲಿಸ್ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸುವ ಅಗತ್ಯವಿಲ್ಲ ಎಂಬ ಆದೇಶವನ್ನು ನ್ಯಾಯಮೂರ್ತಿ ಅಮಿತ್ ಮಹಾಜನ್ ರದ್ದುಗೊಳಿಸಿದರು.
ಆರೋಪಿಗಳಿಗೆ ಯಾವುದೇ ನೋಟಿಸ್ ನೀಡಿಲ್ಲ ಮತ್ತು ವಿಚಾರಣೆಗೆ ಅವಕಾಶ ನೀಡಿದರೆ ಸೂಕ್ತ ರೀತಿಯಲ್ಲಿ ಕಾನೂನು ಮತ್ತು ವಾಸ್ತವಾಂಶಗಳನ್ನು ಮಂಡಿಸಲಾಗುವುದು ಎಂಬ ವಾದವನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಪರಿಗಣಿಸಿದರು.
“ಮರುಪರಿಶೀಲನಾ ನ್ಯಾಯಾಲಯದ ಅಧಿಕಾರ ಚಲಾಯಿಸುವಾಗ, ಆರೋಪಿಯ ವಿಚಾರಣೆಗೆ ಅವಕಾಶ ನೀಡದೆ ನ್ಯಾಯಾಲಯ ಆರೋಪಿ ಅಥವಾ ಇತರ ಯಾವುದೇ ವ್ಯಕ್ತಿಯ ಪೂರ್ವಾಗ್ರಹಕ್ಕೆ ಅವಕಾಶ ನೀಡುವಂತಹ ಯಾವುದೇ ಆದೇಶ ನೀಡುವಂತಿಲ್ಲ ಎಂಬುದು ಸ್ಪಷ್ಟ” ಎಂದು ಏಕಸದಸ್ಯ ಪೀಠ ತರ್ಕಿಸಿತು.
ಈ ಹಿನ್ನೆಲೆಯಲ್ಲಿ, ಅರ್ಜಿದಾರರ ವಿಚಾರಣೆಗೆ ಅವಕಾಶ ನೀಡಿ ಪ್ರಕರಣವನ್ನು ಹೊಸದಾಗಿ ಪರಿಗಣಿಸಲು ಸೆಷನ್ಸ್ ನ್ಯಾಯಾಲಯಕ್ಕೆ ಪ್ರಕರಣವನ್ನು ಹಿಂತಿರುಗಿಸಲಾಯಿತು.
ಎಫ್’ಐಆರ್ ದಾಖಲಿಸಲು ಪೊಲೀಸರಿಗೆ ಸೂಚಿಸಲು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನಿರಾಕರಿಸಿದ್ದರು. ಇದನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮರುಪರಿಶೀಲನಾ ಅರ್ಜಿಯಲ್ಲಿ ರದ್ದುಗೊಳಿಸಿತ್ತು. ಈ ರದ್ದತಿ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲಾಗಿತ್ತು.
ದೆಹಲಿಯ ಛತ್ತರ್ಪುರ ಪ್ರದೇಶದ ಫಾರ್ಮ್ ಹೌಸ್ ಒಂದರಲ್ಲಿ 2018ರಲ್ಲಿ ತಮ್ಮ ಮೇಲೆ ಶಹನವಾಝ್ ಹುಸೇನ್ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು. ವಂಚನೆ, ಅಪ್ರಾಮಾಣಿಕವಾಗಿಆಸ್ತಿ ಹಂಚಿಕೆ, ಅತ್ಯಾಚಾರ, ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು, ಮದುವೆಯಾಗಿರುವುದನ್ನು ಮುಚ್ಚಿಟ್ಟು ಸಹಜೀವನ ನಡೆಸಿದ್ದು, ಕಾನೂನುಬದ್ಧವಾಗಿ ವಿವಾಹವಾಗುವುದಾಗಿ ತಿಳಿಸಿ ಮೋಸ, ಮಹಿಳೆಯ ಘನತೆಗೆ ಧಕ್ಕೆ ಹಾಗೂ ಕ್ರಿಮಿನಲ್ ಸಂಚಿನ ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
(ಕೃಪೆ: ಬಾರ್ & ಬೆಂಚ್)

Join Whatsapp