ಭಾರತೀಯ ಪತ್ರಕರ್ತನ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ

Prasthutha|

ದುಬೈ: ಭಾನುವಾರ ಮುಕ್ತಾಯಗೊಂಡ ಏಷ್ಯಾ ಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ದ್ವೀಪರಾಷ್ಟ್ರ ಶ್ರೀಲಂಕಾ, ಆರನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಎದುರಾಳಿ ಪಾಕಿಸ್ತಾನವನ್ನು 23 ರನ್‌ಗಳ ಅಂತರದಲ್ಲಿ ಮಣಿಸುವಲ್ಲಿ ದಾಸುನ್‌ ಶನಕ ಪಡೆ ಯಶಸ್ವಿಯಾಗಿತ್ತು.

- Advertisement -

ಲಂಕಾ ಅಬ್ಬರದ ಎದುರು ಮಂಕಾದ ಪಾಕಿಸ್ತಾನ, ಎಷ್ಯಾ ಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟದಿಂದ ಮತ್ತೊಮ್ಮೆ ವಂಚಿತವಾಯಿತು. 2012ರಲ್ಲಿ ಕೊನೆಯದಾಗಿ ಪಾಕ್‌, ಏಷ್ಯಾ ಕಪ್‌ ಕಿರೀಟವನ್ನು ತನ್ನದಾಗಿಸಿಕೊಂಡಿತ್ತು. ಆ ಬಳಿಕ ವಿಶ್ವಕಪ್‌ ಗೆದ್ದರೂ ಸಹ ಏಷ್ಯಾ ಕಪ್‌ ಕನಸು ನನಸಾಗಿರಲಿಲ್ಲ.

ಪಂದ್ಯ ಮುಗಿದ ಬಳಿಕ ದುಬೈ ಅಂತಾರಾಷ್ಟ್ರೀಯ ಮೈದಾನದ ಹೊರಭಾಗದಲ್ಲಿ ಪ್ರತಿಕ್ರಿಯೆ ಕೇಳಿದ ಭಾರತೀಯ ಪತ್ರಕರ್ತನ ಮೇಲೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ದರ್ಪ ತೋರಿದ್ದಾರೆ.

- Advertisement -

ʻಪಾಕಿಸ್ತಾನದ ಅಭಿಮಾನಿಗಳು ಲಂಕಾ ವಿರುದ್ಧದ ಸೋಲಿನಿಂದ ಬೇಸರಗೊಂಡಿದ್ದಾರೆ. ಅವರಿಗೆ ಏನು ಹೇಳಲು ಬಯಸುತ್ತೀರಿʼ ಎಂದು ಪತ್ರಕರ್ತ ರೋಹಿತ್‌ ಜುಗ್ಲಾನ್‌ ಪ್ರಶ್ನಿಸಿದ್ದರು. ಇದರಿಂದ ಕೋಪಗೊಂಡ ರಾಜಾ, ‘ನೀವು ಭಾರತೀಯ ಪತ್ರಕರ್ತ ಎನಿಸುತ್ತದೆ. ನಿಮಗೆ ತುಂಬಾ ಖುಷಿಯಾಗಿರಬಹುದು ಈಗ’ ಎಂದು ಕಿಡಿ ಕಾರಿದರು. ಬಳಿಕ  ಮುಂದೆ ಸಾಗುವ ವೇಳೆಗೆ  ರೋಹಿತ್‌ ವಿಡಿಯೋ ಮಾಡುತ್ತಿದ್ದ  ಫೋನ್ ಅನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಬಳಿಕ ಅದನ್ನು ಆತನಿಗೆ ಹಿಂತಿರುಗಿಸಿ ಅಲ್ಲಿಂದ ತೆರಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ರೋಹಿತ್‌ ಜುಗ್ಲಾನ್‌,  ʻಕ್ರಿಕೆಟ್‌ ಬೋರ್ಡ್‌ ಅಧ್ಯಕ್ಷರಾಗಿ ಫೋನ್‌ ಕಿತ್ತುಕೊಳ್ಳಲು ಪ್ರಯತ್ನಿಸಿದದ್ದು ಸರಿಯಲ್ಲʼ ಎಂದಿದ್ದಾರೆ.

ಭಾನುವಾರ ನಡೆ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿ 6 ವಿಕೆಟ್‌ ನಷ್ಟದಲ್ಲಿ 170 ರನ್‌ಗಳಿಸಿದ್ದ ಲಂಕಾ, ಆ ಬಳಿಕ ಪಾಕಿಸ್ತಾನ ತಂಡವನ್ನು 147 ರನ್‌ಗಳಿಗೆ ನಿಯಂತ್ರಿಸುವ ಮೂಲಕ 23 ರನ್‌ಗಳ ಸ್ಮರಣೀಯ ಜಯವನ್ನು ತನ್ನದಾಗಿಸಿಕೊಂಡಿತ್ತು.



Join Whatsapp