ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಕೋಮು ಆಧರಿತ ಹತ್ಯೆಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್ ಐಟಿ) ಸರ್ಕಾರ ರಚಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಮಾನಾಥ ರೈ ಒತ್ತಾಯಿಸಿದರು.
ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ನಡೆದ ವೆಂಕಟೇಶ ಬಾಳಿಗಾ, ಪ್ರವೀಣ್ ನೆಟ್ಟಾರು, ಮಸೂದ್, ಜಲೀಲ್, ಫಾಝಿಲ್, ದೀಪಕ್ ರಾವ್, ಶರತ್ ಮಡಿವಾಳ, ಹರೀಶ್ ಪೂಜಾರಿಯವರ ಹತ್ಯೆಗಳ ಹಿಂದಿರುವ ಶಕ್ತಿ ಯಾರು ಎಂಬುದನ್ನು ಪತ್ತೆ ಮಾಡಲು ಎಸ್ ಐಟಿಯ ಅಗತ್ಯ ಇದೆ. ಈ ಹತ್ಯೆಗಳ ಹಿಂದಿರುವವರಿಗೆ ಶಿಕ್ಷೆ ಆದರೆ ಮಾತ್ರ ಜಿಲ್ಲೆಯಲ್ಲಿ ಸಾಮಾಜಿಕ ಸಾಮರಸ್ಯ ನೆಲೆಸಲಿದೆ. ಈ ಬಗ್ಗೆ ಸರ್ಕಾರವನ್ನು ಒತ್ತಾಯಿಸಲು ಸಮಾನ ಮನಸ್ಕ ಸಂಘಟನೆಗಳು ಹಾಗೂ ಜಾತ್ಯತೀತ ಮನೋಭಾವದ ಪಕ್ಷಗಳ ಮುಖಂಡರು ಸೇರಿ ಸಭೆ ನಡೆಸಿದ್ದೇವೆ. ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿ ಈ ಕುರಿತು ಮನವಿ ಸಲ್ಲಿಸಲಿದ್ದೇವೆ’ ಎಂದರು.
‘ಇಂತಹ ಹತ್ಯೆಗಳ ಆರೋಪಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಯಾರೂ ಇಲ್ಲ. ಆದರೆ, ಬಿಜೆಪಿ ಕಾರ್ಯಕರ್ತರು ಸಾಕಷ್ಟು ಮಂದಿ ಇದ್ದಾರೆ. ಈ ರೀತಿಯ ಹತ್ಯೆ ಹಿಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕಿದೆ. ಹೆಣದ ಮೇಲಿನ ರಾಜಕಾರಣ ಬಿಜೆಪಿಯ ಚಾಳಿ. ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹತ್ಯೆ ರಾಜಕಾರಣವನ್ನು ಮತ್ತೆ ಶುರು ಮಾಡಬಹುದು. ಅದಕ್ಕಾಗಿ ಜನ ಜಾಗರೂಕತೆಯಿಂದ ಇರಬೇಕು’ ಎಂದರು.