ಬೆಂಗಳೂರು: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ 20ಕ್ಕೂ ಹೆಚ್ಚು ಉಪ ನೋಂದಾವಣಿ ಕಚೇರಿಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 9,72,294 ರೂಪಾಯಿಗಳನ್ನು ನಗದು ರೂಪದಲ್ಲಿ ವಶಪಡಿಸಿಕೊಂಡಿದ್ದಾರೆ.
ಸುಮಾರು 150 ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಬೆಂಗಳೂರು ನಗರದ 15, ಬೆಂಗಳೂರು ಗ್ರಾಮಾಂತರದ ನಾಲ್ಕು ಮತ್ತು ರಾಮನಗರದ ಎರಡು ಸ್ಥಳಗಳಲ್ಲಿ ಶೋಧ ಆರಂಭಿಸಿದ್ದು, ದಾಳಿ ಮುಂದುವರಿದಿದೆ.
ದಿಢೀರ್ ಭೇಟಿ ವೇಳೆ ಉಪ ನೋಂದಾವಣಿ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಹಾಜರಾತಿ ಕಡತ, ನೋಂದಣಿಯಾಗಿರುವ ದಾಖಲೆಗಳು, ನೋಂದಣಿಗೆ ಬಾಕಿ ಇದ್ದ ದಾಖಲೆಗಳು, ವಿತರಣೆಯಾದ ದಾಖಲೆಗಳ ವಿವರ, ಚಲನ್‌ಗಳು, ನಗದು ಘೋಷಣಾ ರಿಜಿಸ್ಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ವರ್ತೂರು ಉಪ ನೋಂದಣಿ ಕಚೇರಿಯಲ್ಲಿ ರೂ.3.17 ಲಕ್ಷ, ಬನಶಂಕರಿ ಕಚೇರಿಯಲ್ಲಿ ರೂ.1.18 ಲಕ್ಷ, ಹೊಸಕೋಟೆ ಕಚೇರಿಯಲ್ಲಿ ರೂ.1.04 ಲಕ್ಷ, ಆನೇಕಲ್ ಕಚೇರಿಯಲ್ಲಿ ರೂ. 95,630, ಬೇಗೂರು ಕಚೇರಿಯಲ್ಲಿ ರೂ.93,406, ಕೆಂಗೇರಿಯಲ್ಲಿ ರೂ.42,000 ನಗದು ಮಧ್ಯವರ್ತಿಗಳ ಬಳಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಬಿ.ಎಸ್. ಪಾಟೀಲ ತಿಳಿಸಿದ್ದಾರೆ.
ಒಂದು ವೇಳೆ ನಗದು ಲೆಕ್ಕಕ್ಕೆ ಸಿಗದಿದ್ದರೆ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.