ಬಿಜೆಪಿ ಇದನ್ನು ಇಲ್ಲಿಗೆ ನಿಲ್ಲಿಸಲ್ಲ, ಇನ್ನೂ ಅನೇಕ ಭಾವನಾತ್ಮಕ ವಿಚಾರಗಳನ್ನು ಹುಡುಕಿ ಚರ್ಚೆಗೆ ತರುತ್ತದೆ: ರಾಮಲಿಂಗಾ ರೆಡ್ಡಿ

Prasthutha|

►► ವೈಫಲ್ಯ ಮರೆಮಾಚಲು ಮಸೀದಿಗಳ ಧ್ವನಿವರ್ಧಕ ವಿಚಾರವನ್ನು ಎತ್ತಿದ್ದಾರೆ

- Advertisement -

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸೃಷ್ಟಿಸಿರುವ ಹಿಜಾಬ್ ಗೊಂದಲ, ಮಸೀದಿಗಳ ಧ್ವನಿವರ್ದಕ ಕುರಿತಾದ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಬಿಜೆಪಿ ಹಾಗೂ ಅವರ ದೊಡ್ಡ ಪರಿವಾರ ಅನೇಕ ಭಾವನಾತ್ಮಕ ವಿಚಾರಗಳನ್ನು ಎತ್ತುತ್ತಿದೆ. ಇದನ್ನು ಇವರು ಇಲ್ಲಿಗೆ ನಿಲ್ಲಿಸುವುದಿಲ್ಲ. ಇನ್ನು ಅನೇಕ ಭಾವನಾತ್ಮಕ ವಿಚಾರಗಳನ್ನು ಹುಡುಕಿ ಚರ್ಚೆಗೆ ತರುತ್ತಾರೆ. ಇವರ ವೈಫಲ್ಯಗಳನ್ನು ಮುಚ್ಚಿಹಾಕಲು ಇಂತಹ ಪ್ರಯತ್ನಗಳು ಮುಂದುವರಿಯುತ್ತದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹೆಚ್ಚಾಗುತ್ತಿದೆ. ಪಂಚ ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಸುಮ್ಮನಿದ್ದ ಬಿಜೆಪಿ ನಂತರ ಬೆಲೆ ಏರಿಕೆ ಮಾಡುತ್ತಿದೆ. ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದ್ದು, ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ಗುತ್ತಿಗೆದಾರರ ಸಂಘ ಹೋರಾಟ ಮಾಡುತ್ತಿದೆ. ಇದೆಲ್ಲವನ್ನು ಮರೆ ಮಾಚಲು, ಹಿಜಾಬ್, ಜಾತ್ರೆಯಲ್ಲಿ ಮುಸಲ್ಮಾನ ವ್ಯಾಪಿಗಳಿಗೆ ನಿಷೇಧ, ಹಲಾಲ್ ಕಟ್ ವಿಚಾರ ತೆಗೆದಿದ್ದು, ಈಗ ಮಸೀದಿಗಳ ಮೇಲಿನ ಧ್ವನಿವರ್ಧಕ ವಿಚಾರವನ್ನು ಎತ್ತಿದ್ದಾರೆ ಎಂದು ಆರೋಪಿಸಿದರು.

- Advertisement -

ಮಸೀದಿ ಧ್ವನಿವರ್ದಕಗಳ ಕುರಿತಾದ ಚರ್ಚೆಯ ಬಗ್ಗೆ ಮಾತನಾಡಿದ ರಾಮಲಿಂಗ ರೆಡ್ಡಿ, ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು, ಸುಪ್ರೀಂ ಕೋರ್ಟ ತೀರ್ಪು ಕೊಟ್ಟ ನಂತರ ಮಾಲಿನ್ಯ ನಿಯಂತ್ರಣ ಮಂಡಳಿಯು ಧ್ವನಿವರ್ಧಕಗಳ ಶಬ್ಧದ ಪ್ರಮಾಣಕ್ಕೆ ಮಿತಿ ಹೇರಿ ಆದೇಶ ಹೊರಡಿಸಿದೆ. ಅದರ ಪ್ರಕಾರ ಕೈಗಾರಿಕಾ ಪ್ರದೇಶಗಳಲ್ಲಿ ಮಸೀದಿ ಇದ್ದರೆ ಹಗಲು ವೇಳೆ 75 ಡಿಸೆಬಲ್ ವರೆಗೂ ರಾತ್ರಿ ವೇಳೆ 70ರಷ್ಟು ಇಡಬಹುದು. ವಾಣಿಜ್ಯ ಪ್ರದೇಶಗಳಲ್ಲಿ ಹಗಲು ವೇಳೆ 65 ಹಾಗೂ ರಾತ್ರಿ 55ರ ಪ್ರಮಾಣದಲ್ಲಿ ಇಡಬಹುದು. ವಸತಿ ಪ್ರದೇಶಗಳಲ್ಲಿ ಹಗಲು ವೇಳೆ 55 ಹಾಗೂ ರಾತ್ರಿ ವೇಳೆ 45ರಷ್ಟು, ಆಸ್ಪತ್ರೆಗಳಿರುವ ನಿಶ್ಯಬ್ಧ ಪ್ರದೇಶಗಳಲ್ಲಿ ಬೆಳಗ್ಗೆ ವೇಳೆ 50 ಹಾಗೂ ರಾತ್ರಿ ವೇಳೆ 40ರಷ್ಟು ಡಿಸೆಬಲ್ ನಷ್ಟು ಧ್ವನಿವರ್ಧಕ ಹಾಕಬಹುದು ಎಂದು ನಮ್ಮ ಸರ್ಕಾರವೇ ಆದೇಶ ಹೊರಡಿಸಿತ್ತು ಎಂದರು.

ಇದು ಕೇವಲ ಮಸೀದಿಗಳಿಗೆ ಮಾತ್ರವಲ್ಲ ಸಭೆ, ಸಮಾರಂಭಗಳಲ್ಲಿ ಯಾರಿಗೂ ತೊಂದರೆ ಆಗಬಾರದು ಎಂದು ಕ್ರಮ. ಈ ಮಾನದಂಡದ ಅಢಿಯಲ್ಲಿ ಧ್ವನಿವರ್ಧಕ ಹಾಕಲು ಕಾನೂನಿನ ಅಢಿಯಲ್ಲಿ ಅವಕಾಶ ನೀಡಿದ್ದು, ಇದನ್ನು ಉಲ್ಲಂಘನೆ ಮಾಡಿದರೆ ಕಾನೂನು ಪ್ರಕಾರವಾಗಿ ಕ್ರಮ ಕೈಗೊಳ್ಳಲಿ. ಈ ಹಿಂದೆ ಅನೇಕರಿಗೆ ಇಂತಹ ವಿಚಾರವಾಗಿ ನೋಟೀಸ್ ನೀಡಲಾಗಿದೆ. ಈಗ ಬಹುತೇಕ ಕಡೆಗಳಲ್ಲಿ ಮೈಕ್ ಗಳಿಗೆ ಈ ಪ್ರಮಾಣದಲ್ಲಿ ಶಬ್ಧ ಹೆಚ್ಚಾಗಿ ಬಾರದಂತೆ ಮಾಡಲಾಗಿದೆ ಎಂದು ಹೇಳಿದರು.

ರಾಜಕಾರಣಕ್ಕಾಗಿ ಕೆಲವರು ಈ ರೀತಿ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯೇ ಮಾನದಂಡ ವಿಧಿಸಿ ಅನುಮತಿ ನೀಡಿದೆ. ಬಿಜೆಪಿಯವರು ಸಂವಿಧಾನಕ್ಕಿಂತ ದೊಡ್ಡವರಾಗಿದ್ದರೆ ಅವರು ಹೇಳಿದಂತೆ ಕೇಳಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.


ವಿರೋಧ ಪಕ್ಷವಾಗಿ ಕಾಂಗ್ರೆಸ್ ಪಕ್ಷ ಸರಿಯಾಗಿ ಧ್ವನಿ ಎತ್ತುತ್ತಿಲ್ಲ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗ, ‘ಮಾಧ್ಯಮಗಳು ನಾವು ಎತ್ತುವ ಧ್ವನಿಯನ್ನು ಸರಿಯಾಗಿ ಜನರಿಗೆ ತೋರಿಸಿದರೆ ಸಾಕು. ನಾವು, ನಮ್ಮ ನಾಯಕರು ಹೇಳುವುದಕ್ಕೆ ಒತ್ತು ನೀಡಿದರೆ, ನಮ್ಮ ಧ್ವನಿ ಗೊತ್ತಾಗಲಿದೆ. ನಾವು ಸರ್ಕಾರದ ಜನ ವಿರೋಧಿ ಕೆಲಸ ಗಳನ್ನು ಪ್ರಶ್ನಿಸುತ್ತಿದ್ದು, ಮಾಧ್ಯಮಗಳು ನಮಗೆ ಪ್ರಚಾರ ನೀಡಬೇಕು ಅಷ್ಟೇ. ಉದಾಹರಣೆಗೆ 2ಜಿ ಹಾಗೂ ಕಲ್ಲಿದ್ದಲು ವಿಚಾರದಲ್ಲಿ ಹಗರಣ ನಡೆಯದಿದ್ದರೂ ಹಗರಣ ನಡೆದಿದೆ ಎಂದು ಮಾಧ್ಯಮಗಳು ದೊಡ್ಡ ಪ್ರಮಾಣದ ಪ್ರಚಾರ ಕೊಟ್ಟವು. ಅದರ ಹೋರಾಟದಿಂದ ಕೇಜ್ರಿವಾಲ್ ಮುಖ್ಯಮಂತ್ರಿ ಆದರು, ಕಿರಣ್ ಬೇಡಿ ರಾಜ್ಯಪಾಲರಾಗಿದ್ದಾರೆ, ಅಣ್ಣಾ ಹಜಾರೆ ಅವರು ಪತ್ತೆ ಇಲ್ಲ, ಬಾಬಾ ರಾಮ್ ದೇವ್ ಅವರೆಲ್ಲ ಹೋರಾಟ ಮಾಡಿದ್ದರು. 2014ರಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ತನಿಖೆ ಮಾಡಿದಾಗ ಯಾರಿಗೂ ಶಿಕ್ಷೆ ಆಗಲಿಲ್ಲ. ಕಾರಣ ಯಾವುದೇ ಹಗರಣ ನಡೆದಿರಲಿಲ್ಲ’ ಎಂದು ಉತ್ತರಿಸಿದರು.



Join Whatsapp