ಪ್ರಧಾನಿ ಮೋದಿಗೆ 15 ಪ್ರಶ್ನೆ ಕೇಳಿದ ರಾಮಲಿಂಗಾರೆಡ್ಡಿ; ಧಮ್ಮು, ತಾಕತ್ತು ಇದ್ದರೆ ಉತ್ತರಿಸಿ ಎಂದ ಮಾಜಿ ಸಚಿವ

Prasthutha|

ಬೆಂಗಳೂರು: ಕೆಪಿಸಿಸಿ ಪ್ರತಿನಿತ್ಯ ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡುವ ಧಮ್ಮು, ತಾಕತ್ತು ಬಿಜೆಪಿಯಲ್ಲಿರುವ ಯಾರಿಗೂ ಇಲ್ಲವಾಗಿದೆ. ಹೀಗಾಗಿ 56 ಇಂಚಿನ ಎದೆಯ ಪ್ರಧಾನಿ ಮೋದಿ ಅವರಿಗೆ ಉತ್ತರಿಸುವ ಧಮ್ಮು ತಾಕತ್ತು ಇದೆ ಎಂದು ಭಾವಿಸಿ ಈ 15 ಪ್ರಶ್ನೆಗಳನ್ನು ಕೇಳ ಬಯಸುತ್ತಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ  ತಿಳಿಸಿದ್ದಾರೆ.

- Advertisement -

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಅವರ ಪ್ರತಿಮೆ ಅನಾವರಣ ಮಾಡಲು ಆಗಮಿಸುತ್ತಿದ್ದಾರೆ. ಪ್ರತಿಮೆ ಅನಾವರಣ ಸಂತೋಷದ ವಿಚಾರ ನಾವು ಅದನ್ನು ಸ್ವಾಗತಿಸುತ್ತೇವೆ. ಆದರೆ, ಚುನಾವಣೆ ಸಮೀಪಿಸುತ್ತಿದ್ದಂತೆ ದೇಶದಲ್ಲಿ ಕರ್ನಾಟಕ ಎಂಬ ರಾಜ್ಯವಿದೆ ಎಂಬ ಜ್ಞಾನೋದಯ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಮೂರ್ನಾಲ್ಕು ತಿಂಗಳಿಂದ ರಾಜ್ಯದ ಪ್ರದಕ್ಷಣೆ ಆರಂಭಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯ ಬಿಜೆಪಿ ಸರ್ಕಾರ ನುಡಿದಂತೆ ನಡೆದಿಲ್ಲ, ಅವರು ಚುನಾವಣೆಗೂ ಮುನ್ನ ಕೊಟ್ಟ 600 ಭರವಸೆಗಳಲ್ಲಿ ಯಾವುದನ್ನು ಈಡೇರಿಸಿಲ್ಲ. ಆದರೂ ಮುಖ್ಯಮಂತ್ರಿಗಳು ದಿನ ನಿತ್ಯ ಧಮ್ಮು ತಾಕತ್ತಿನ ಬಗ್ಗೆ ಮಾತನಾಡುತ್ತಾರೆ. ಕೆಪಿಸಿಸಿ ವತಿಯಿಂದ ಅವರ ಭರವಸೆಗಳ ಬಗ್ಗೆ ದಿನನಿತ್ಯ ಪ್ರಶ್ನೆ ಕೇಳುತ್ತಲೇ ಇದ್ದೇವೆ. ಆದರೆ ಅದಕ್ಕೆ ಉತ್ತರ ನೀಡುವ ಧಮ್ಮು, ತಾಕತ್ತು ಯಾರಿಗೂ ಇಲ್ಲವಾಗಿದೆ. ಹೀಗಾಗಿ 56 ಇಂಚಿನ ಎದೆಯ ಪ್ರಧಾನಿ ಮೋದಿ ಅವರಿಗೆ ಉತ್ತರಿಸುವ ಧಮ್ಮು ತಾಕತ್ತು ಇದೆ ಎಂದು ಭಾವಿಸಿ ಈ 15 ಪ್ರಶ್ನೆಗಳನ್ನು ಕೇಳ ಬಯಸುತ್ತಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ  ಹೇಳಿದರು.

- Advertisement -

 1. ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ನಿರಂತರವಾಗಿ ಪ್ರವಾಹಕ್ಕೆ ಸಿಲುಕಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಕಡೆ ತಲೆ ಹಾಕದ ನಿಮಗೆ ಈಗ ಚುನಾವಣೆ ಬಂದ ತಕ್ಷಣ ರಾಜ್ಯ ನೆನಪಾಯಿತೆ? ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ನೆರೆಯಿಂದಾಗಿ

2.62 ಲಕ್ಷ ಮನೆಗಳು

1.5 ಲಕ್ಷ ಕಿ.ಮೀ ರಸ್ತೆಗಳು

30 ಸಾವಿರ ಸೇತುವೆಗಳು

54.32 ಲಕ್ಷ ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕಾ ಬೆಳೆ ನಾಶವಾಗಿದೆ.

ಒಟ್ಟು 93,648 ಕೋಟಿಯಷ್ಟು ನಷ್ಟವಾಗಿದ್ದು, ರಾಜ್ಯಕ್ಕೆ ಕೇಂದ್ರದಿಂದ ಬಂದಿರುವ ಪರಿಹಾರ ಎಷ್ಟು?

2. ಡಬಲ್ ಇಂಜಿನ್ ಸರ್ಕಾರ ಬಂದರೆ ರಾಜ್ಯವನ್ನು ಅಭಿವೃದ್ಧಿಯಲ್ಲಿ ತೇಲಿಸುತ್ತೇವೆ ಎಂದಿದ್ದಿರಿ ನೆನಪಿದೆಯೇ? ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ

– ಸ್ಮಾರ್ಟ್ ಸಿಟಿ

– ಜಲ್ ಜೀವನ ಮಿಷನ್

– 2 ಕೋಟಿ ಉದ್ಯೋಗ

– ರೈತರ ಆದಾಯ ಡಬಲ್ (2022 ಒಳಗೆ)

– ಎಲ್ಲರಿಗೂ ಸ್ವಂತ ಸೂರು (2022 ಒಳಗೆ)

ಯಾವ ಒಂದು ಯೋಜನೆ ಸಂಪೂರ್ಣವಾಗಿದೆ ಹೇಳಿ?

3. ಕೇಂದ್ರ ಸರ್ಕಾರಕ್ಕೆ ಅತಿಹೆಚ್ಚು  ಜಿ ಎಸ್ ಟಿ ಕಟ್ಟುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ 2ನೇ ರಾಜ್ಯ ಎಂದು ನಿಮ್ಮದೇ ಸರ್ಕಾರ ಟ್ವೀಟ್ ಮಾಡಿತ್ತು. ಇದು ನಿಮ್ಮ ಸಾಧನೆ ಅಲ್ಲ, ಅದು ಈ ರಾಜ್ಯದ ಜನರ ಬೆವರಿನ ಪರಿಶ್ರಮ. ಆದರೆ ನೀವು ಕಲೆಹಾಕಿದ ಜಿಎಸ್ ಟಿ ಹಣದಲ್ಲಿ ರಾಜ್ಯಗಳಿಗೆ ಹಂಚಿಕೆ ಆಗುವ ಅನುದಾನದ ಪಟ್ಟಿಯಲ್ಲಿ ರಾಜ್ಯಕ್ಕೆ ಎಷ್ಟನೇ ಸ್ಥಾನ ಇದೆ ಎಂದು ಹೇಳುತ್ತೀರಾ? ಆಮೂಲಕ ನಿಮ್ಮ ಸಾಧನೆ ಏನು ಎಂದು ಹೇಳುತ್ತೀರಾ?

4. ಇನ್ನು ಮೊನ್ನೆಯಷ್ಟೇ ರಾಜ್ಯ ಪ್ರವಾಸ ಮಾಡಿ ಕಾಂಗ್ರೆಸ್ ಸರ್ಕಾರ ಮಾಡಿದ್ದ ಯೋಜನೆಗಳನ್ನು ಅನಾವರಣ ಮಾಡಿ ಕ್ಯಾಮೆರಾಗೆ ಪೋಸ್ ಕೊಟ್ಟು ಹೋದಿರಿ. ಈ ಸಂದರ್ಭದಲ್ಲಿ ಸಬ್ ಅರ್ಬನ್ ರೈಲಿಗೆ 40 ತಿಂಗಳು ಗಡವು ನೀಡಿದ್ದೀರಿ. ಈ ಯೋಜನೆಗೆ ಕೇಂದ್ರ ಬಿಡುಗಡೆ ಮಾಡಬೇಕಾಗಿದ್ದ ಹಣ ಎಷ್ಟು? ಈವರೆಗೂ ಎಷ್ಟು ಬಿಡುಗಡೆ ಮಾಡಿದ್ದೀರಿ? ಎಂದು ಬೆಂಗಳೂರಿನ ಜನತೆಗೆ ಹೇಳಬೇಕು.

5. ನೀವು ಬಂದಾಗ ನಿಮ್ಮನ್ನು ಮೆಚ್ಚಿಸಲು ಬೆಂಗಳೂರು ನಗರಕ್ಕೆ ಸಿಂಗಾರ ಮಾಡಲು ರಾಜ್ಯ ಸರ್ಕಾರ 23 ಕೋಟಿ ವೆಚ್ಚದಲ್ಲಿ ರಸ್ತೆ ಹಾಕಿದರು. ನೀವು ರಾಜ್ಯ ಬಿಡುತ್ತಿದ್ದಂತೆ ರಸ್ತೆಯ ಡಾಂಬರು ಕೂಡ ಕಿತ್ತು ಬಂದವು. ಡಬಲ್ ಇಂಜಿನ್ ಸರ್ಕಾರದ ಈ ಮಹಾನ್ ಸಾಧನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು?

6.ಭ್ರಷ್ಟಾಚಾರದ ವಿರುದ್ಧ ಉದ್ದುದ್ದ ಭಾಷಣ ಬಿಗಿದು ನಾ ಖಾವೂಂಗಾ ನಾ ಖಾನೆದೂಂಗಾ ಎಂದ ನೀವು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ 40% ಕಮಿಷನ್ ಕುರಿತ ದೂರು, RUPSA ಸಂಸ್ಥೆ ನೀಡಿರುವ ದೂರು, ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ,  ಹುಬ್ಬಳ್ಳಿ ಗುತ್ತಿಗೆದಾರ ಬಸವರಾಜ್ ಅವರ ದಯಾಮರಣ ಅರ್ಜಿ ಬಗ್ಗೆ ಬಾಯಿಗೆ ಬೀಗ ಜಡಿದು ಕೊಂಡಿರುವುದು ಏಕೆ?

7. ವರ್ಷಕ್ಕೆ 2 ಕೋಟಿ ಉದ್ಯೋಗ ಎಂದಿದ್ದರು. ಆ ಮೂಲಕ ಇಷ್ಟು ಹೊತ್ತಿಗೆ 16 ಕೋಟಿ ಉದ್ಯೋಗ ನೀಡಬೇಕಿತ್ತು. ಆದರೆ ಈಗ 70 ಸಾವಿರ ನೇಮಕಾತಿಯನ್ನು ದೊಡ್ಡ ಸಾಧನೆಯಾಗಿ ಪ್ರಚಾರ ಪಡೆಯುತ್ತಿದ್ದೀರಿ. ನಿಮ್ಮ ಸರ್ಕಾರ ಪಿಎಸ್ಐ, ಶಿಕ್ಷಕರು, ಅರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮ ತಾಂಡವವಾಡುತ್ತಿದೆ. ಆದರೂ ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆಗಳಿಂದ ತನಿಖೆ ಯಾಕಿಲ್ಲ? ಭ್ರಷ್ಟಾಚಾರ ವಿರುದ್ಧದ ಹೋರಾಟ ಎಂದರೆ, ಕಾಂಗ್ರೆಸ್ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದು ಮಾತ್ರವೇ?

8.ನಿಮ್ಮಲ್ಲಿ ಮುಖ್ಯಮಂತ್ರಿ ಕುರ್ಚಿಯನ್ನು 2500 ಕೋಟಿಗೆ, ಮಂತ್ರಿಸ್ಥಾನವನ್ನು 100 ಕೋಟಿಗೆ ಮಾರಾಟ ಮಾಡಲಾಗಿದೆ ಎಂದು ನಿಮ್ಮದೇ ಶಾಸಕರು ಹೇಳಿದ್ದಾರೆ. ನಿಮ್ಮ ಈ ಅಮೋಘ ಸಾಧನೆ ಬಗ್ಗೆ ಏನು ಹೇಳುತ್ತೀರಿ?

9. ಸಿಲಿಕಾನ್ ಸಿಟಿ, ಐಟಿ ರಾಜಧಾನಿ, ಹೆಲ್ತ್ ಹಬ್, ಗಾರ್ಡನ್ ಸಿಟಿ ಎಂದು ಮನ್ನಣೆ ಗಳಿಸಿದ್ದ ಬೆಂಗಳೂರು ನಗರ ನಿಮ್ಮ ಡಬಲ್ ಇಂಜಿನ್ ಆಡಳಿತದಲ್ಲಿ Sinking City, ಗಾರ್ಬೇಜ್ ಸಿಟಿ ಆಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?

10. ಬೆಂಗಳೂರಿನಲ್ಲಿ ಕಳೆದ ಎರಡು ವರ್ಷಗಳಿಂದ ರಸ್ತೆ ಗುಂಡಿಗೆ 20ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಇದರ ಜವಾಬ್ದಾರಿಯನ್ನು ನಿಮ್ಮ ಡಬಲ್ ಇಂಜಿನ್ ಸರ್ಕಾರ ಹೊರಬೇಕಲ್ಲವೆ? ನಾನು ಬೆಂಗಳೂರಿನಲ್ಲಿ 6-7 ಬಾರಿ ಶಆಸಕನಾಗಿದ್ದೇನೆ. ಆದರೆ ಎಂದಿಗೂ ರಸ್ತೆ ಗುಂಡಿಗೆ ಸಾವು ಸಂಭವಿಸಿದ್ದು ಕೇಳಿರಲಿಲ್ಲ. ಹೈಕೋರ್ಟ್ ಕೂಡ ಕಳೆದ ಎರಡು ವರ್ಷಗಳಿಂದ ಟೀಕೆ ಮಾಡುತ್ತಿದೆ. ಈ ರೀತಿ ಎಂದಿಗೂ ಆಗಿರಲಿಲ್ಲ.

11. ನಾವು ಮೇಕೆದಾಟು ಯೋಜನೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದೇವೆ. ಅದಕ್ಕೆ ಹೆದರಿದ ನಿಮ್ಮ ಸರ್ಕಾರ ಬಜೆಟ್ ನಲ್ಲಿ ಯೋಜನೆಗೆ 1 ಸಾವಿರ ಕೋಟಿ ಎಂದು ಘೋಷಣೆ ಮಾಡಿತು. ಮೇಕೆದಾಟು ಯೋಜನೆ ಜಾರಿ ವಿಚಾರ ಎಲ್ಲಿಯವರೆಗೂ ಬಂದಿತು?

12. ಅದೇ ರೀತಿ ಮಹದಾಯಿ ವಿಚಾರದಲ್ಲೂ ರಾಜ್ಯ ಸರ್ಕಾರ 1 ಸಾವಿರ ಅನುದಾನ ಘೋಷಣೆ ಮಾಡಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಕೇಂದ್ರದಲ್ಲಿ ಒಟ್ಟು ನಾಲ್ಕು ಇಂಜಿನ್ ಸರ್ಕಾರ ನಿಮ್ಮದೇ ಇದೆ. ಮಹದಾಯಿ ಯೋಜನೆ ಜಾರಿ ಯಾವಾಗ?

13. ಕೋವಿಡ್ ನಿಂದ ಸತ್ತವರಲ್ಲಿ ಎಷ್ಟು ಕುಟುಂಬಕ್ಕೆ ಪರಿಹಾರ ನೀಡಿದ್ದೀರಿ?

14. ನಿಮ್ಮ ಈ ರಾಜ್ಯ ಪ್ರವಾಸದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡದೇ, ನಿಮ್ಮ ಡಬಲ್ ಇಂಜಿನ್ ಸರ್ಕಾರದ ಯಾವುದಾದರೂ ಐದು ಕೊಡುಗೆಗಳನ್ನು ಹೇಳಿ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಸಾಧ್ಯವೇ?

15. ನಾಡಪ್ರಭು ಕೆಂಪೇಗೌಡರು ಈ ನಗರ ಕಟ್ಟುವಾಗ ಎಲ್ಲಾ ಸಮುದಾಯದವರಿಗೂ ಅನುಕೂಲ ಆಗಲೆಂದು 52 ಸಮುದಾಯಗಳ ಪೇಟೆಗಳನ್ನು ನಿರ್ಮಿಸಿದ್ದರು. ಅದು ನಿಜವಾದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್. ಆದರೆ ನಿಮ್ಮ ಡಬಲ್ ಇಂಜಿನ್ ಸರ್ಕಾರ ಜಾತಿ, ಧರ್ಮಗಳ ಹೆಸರಲ್ಲಿ ದ್ವೇಷ ಬಿತ್ತಿ ಸಮಾಜ ಓದೆಯುತ್ತಿದ್ದು, ಯಾವ ನೈತಿಕತೆ ಇಟ್ಟುಕೊಂಡು ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡುತ್ತೀರಿ?

ಪ್ರತಿಮೆ ಉದ್ಘಾಟನೆ ಕಾರ್ಯಕ್ರಮಕ್ಕೆ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳನ್ನು ಕರೆತರುವ ಆದೇಶದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ಬಗ್ಗೆ ಅವರು ಆದೇಶ ಹೊರಡಿಸಿದ್ದು, ರಾತ್ರಿ ಈ ಆದೇಶ ಹಿಂಪಡೆದಿದ್ದಾರೆ. ನಾನು ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ಜೆಸಿಬಿ ಅವಘಡ ಸಂಭವಿಸಿತ್ತು. ಆನಂತರ ನಾನು ಮಕ್ಕಳನ್ನು ಯಾವುದೇ ಸರ್ಕಾರಿ ಕಾರ್ಯಕ್ರಮಕ್ಕೆ ಕರೆತರಬಾರದು ಎಂದು ನೀತಿ ಮಾಡಿದ್ದೆ. ಈಗ ಅವರು ಆದೇಶ ಹಿಂಪಡೆದಿರುವ ಹಿನ್ನೆಲೆಯಲ್ಲಿ ನಾನು ಆ ವಿಚಾರವಾಗಿ ಮಾತನಾಡಲಿಲ್ಲ’ ಎಂದರು.

ರಸ್ತೆಗಳ ಗುಣಮಟ್ಟದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ಸರ್ಕಾರ ಬಂದ ನಂತರ ಬೆಂಗಳೂರಿನ ರಸ್ತೆಗಳ ಸ್ಥಿತಿ ಹೀಗೆ ಹೀನಾಯವಾಗಿದೆ. 2013ರಲ್ಲಿ ಬಿಜೆಪಿ ಸರ್ಕಾರ ಹೋದ ನಂತರ ರಸ್ತೆಗಳ ಪರಿಸ್ಥಿತಿ ಹೀಗೆ ಹದಗೆಟ್ಟಿತ್ತು. ಆಗ ನಾನು ಮೂರ್ನಾಲ್ಕು ತಿಂಗಳಲ್ಲಿ ಎಲ್ಲ ರಸ್ತೆ ಪಡಿಸಿದೆ. ರಸ್ತೆ ಹಾಳಾಗಬಾರದು ಎಂಬ ಕಾರಣಕ್ಕೇ ಕಾಂಕ್ರೀಟ್ ರಸ್ತೆಗಳನ್ನು ಮಾಡಲು ಮುಂದಾದೆವು. ಆಗ ಇವರು ವಿರೋಧ ಪಕ್ಷದಲ್ಲಿದ್ದು, ಅದರ ಬಗ್ಗೆ ಟೀಕೆ ಮಾಡಿದ್ದರು. ರಾಜ್ಯದ ಪ್ರಮುಖ ರಸ್ತೆಗಳನ್ನು ಡಾಂಬರೀಕರಣ ಬದಲು ಕಾಂಕ್ರೀಟ್ ರಸ್ತೆ ಹಾಕಬೇಕು ಎಂದು ಸಲಹೆ ನೀಡುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಬಾರದು’ ಎಂದರು.

ಸತೀಶ್ ಜಾರಕಿಹೊಳಿ ಅವರ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ಬಗ್ಗೆ ಈಗಾಗಲೇ ಸುರ್ಜೆವಾಲ ಅವರು ಎಲ್ಲ ಸ್ಪಷ್ಟನೆ ನೀಡಿದ್ದಾರೆ. ಸತೀಶ್ ಜಾರಕಿಹೊಳಿ ಅವರು ನಿಜವಾದ ಹಿಂದೂ ಧರ್ಮ ಪಾಲಿಸಿದರೆ, ಬಿಜೆಪಿ ಚುನಾವಣೆಗಾಗಿ ಹಿಂದೂ ಧರ್ಮ ಎಂದು ಮಾತನಾಡುತ್ತಾರೆ. ನಮ್ಮದು ಸನಾತನ ಧರ್ಮ. ನನಗೆ ಅದರ ಬಗ್ಗೆ ಹೆಮ್ಮೆ ಇದೆ. ಸತೀಶ್ ಜಾರಕಿಹೊಳಿ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಅವರು ಹಿಂದೂ ಧರ್ಮದ ಬಗ್ಗೆ ಮಾತನಾಡಿಲ್ಲ. ಕೆಲವು ಪುಸ್ತಕದಲ್ಲಿ ಆ ಪದದ ಅರ್ಥ ಹೀಗಿದೆ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಕಟ್ಟಿದಷ್ಟು ದೇವಾಲಯ, ಅಭಿವೃದ್ಧಿ ಹಾಗೂ ಹಣ ಸಹಾಯ ಮಾಡಿದಷ್ಟರಲ್ಲಿ ಬಿಜೆಪಿ ಶೇ.10ರಷ್ಟು ಮಾಡಿಲ್ಲ’ ಎಂದರು.

Join Whatsapp