ಕುರ್ ಆನ್ ಅವತೀರ್ಣದ ರಮಝಾನ್

Prasthutha|

ಪವಿತ್ರ ರಮಝಾನ್ ತಿಂಗಳ ಪುಣ್ಯಗಳ ಸಂಗ್ರಹದಲ್ಲಿ ಸತ್ಯವಿಶ್ವಾಸಿಗಳು ನಿರತರಾಗಿದ್ದಾರೆ. ಕುರ್‌ ಆನ್ ಪಾರಾಯಣ ಮತ್ತು ಅದರ ಕಲಿಕೆ ರಮಝಾನ್‌ ನ ಪುಣ್ಯಕರ್ಮಗಳಲ್ಲಿ ಮುಖ್ಯವಾದುದು. ಈ ಪವಿತ್ರ ದಿನಗಳಲ್ಲಿ ಕುರ್‌ ಆನಿನ ಕುರಿತು ನಾವು ಸ್ವಲ್ಪ ಚಿಂತನೆ ನಡೆಸೋಣ. ಪವಿತ್ರ ಕುರ್‌ ಆನ್ ಅವತೀರ್ಣಗೊಂಡ ತಿಂಗಳು ಎಂಬುದು ರಮಝಾನ್‌ ನ ವೈಶಿಷ್ಟ್ಯತೆಯಾಗಿದೆ.

- Advertisement -

ಅನಕ್ಷರರಾದ ಮಕ್ಕಾ ಜನತೆಯ ಮುಂದೆ ಪ್ರವಾದಿ(ಸ) ತನ್ನ ದೌತ್ಯ ನಿರ್ವಹಣೆಯನ್ನು ಪ್ರಾರಂಭಿಸಿದ್ದರು. ಆ ಜನತೆ ಅನಕ್ಷರರಾಗಿದ್ದರೂ ಪ್ರತಿವರ್ಷ ಅವರು ಕವಿಗೋಷ್ಠಿಯನ್ನು ನಡೆಸುತ್ತಿದ್ದರು. ಆಯ್ದ ಕವಿತೆಗಳನ್ನು ಸಂಗ್ರಹಿಸಿ ಅದನ್ನು ಕಅಬಾಲಯದಲ್ಲಿ ತೂಗು ಹಾಕುವ ಸಂಪ್ರದಾಯ ಅಂದು ಚಾಲ್ತಿಯಲ್ಲಿತ್ತು. ಅದು ಅಂದಿನ  ಉತ್ತಮ ಕವಿಗಳಿಗೆ ಲಭಿಸುವ ದೊಡ್ಡ ಪುರಸ್ಕಾರವಾಗಿತ್ತು. ಅಂತಹ ಒಂದು ಜನಾಂಗಕ್ಕೆ ಅಲ್ಲಾಹನು ಅನಕ್ಷರನಾಗಿದ್ದ ಮುಹಮ್ಮದರನ್ನು(ಸ) ಪ್ರವಾದಿಯಾಗಿ ನಿಯೋಜಿಸುತ್ತಾನೆ.  ಜೊತೆಗೆ ಇತರ ಪ್ರವಾದಿಗಳಿಗಿಂತ ಭಿನ್ನವಾಗಿ ಮುಹಮ್ಮದ್(ಸ)ರಿಗೆ ಪವಿತ್ರ ಕುರ್‌ಆನ್ ಎಂಬ ಗ್ರಂಥವನ್ನೂ ನೀಡುತ್ತಾನೆ. ಕುರ್‌ ಆನಿನ ಶೈಲಿಯು ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ ಜನರ ಚಿಂತನೆಯಲ್ಲಿ ಕ್ರಾಂತಿ ಉಂಟು ಮಾಡುವಂತಿತ್ತು.

 ಪ್ರವಾದಿ(ಸ)ಯನ್ನು ವಿರೋಧಿಸುವ ಜನರು ಕೂಡ ಗುಪ್ತವಾಗಿ  ಕುರ್‌ ಆನ್ ಆಲಿಸಿ ಮನಪರಿವರ್ತನೆ ಮಾಡಿಕೊಂಡ ಹಲವಾರು ಉದಾಹರಣೆಗಳು ಇತಿಹಾಸದಲ್ಲಿ ಕಾಣಲು ಸಾಧ್ಯ. ಇಂದೂ ಪವಿತ್ರ ಕುರ್‌ಆನ್ ಒಂದು ಅದ್ಭುತ ಗ್ರಂಥವಾಗಿ ಜಗತ್ತಿನಲ್ಲಿ ನಿರಂತರ ಚರ್ಚಾ ವಿಷಯವಾಗಿ ಯಥಾ ಸ್ಥಿತಿಯಲ್ಲಿ ಉಳಿದುಕೊಂಡಿದೆ.

- Advertisement -

‘‘ಇದೊಂದು ಪ್ರಮಾಣ ಗ್ರಂಥವಾಗಿದೆ. ಇದರ ವಚನಗಳು ಬಹಳ ಪಕ್ವವಾಗಿದೆ ಹಾಗೂ ಸವಿಸ್ತಾರವಾಗಿವೆ – ಇದು ಪರಮ ಯುಕ್ತಿವಂತನ ಹಾಗೂ ಎಲ್ಲವುಗಳ ಅರಿವು ಉಳ್ಳವನ ಕಡೆಯಿಂದ ಬಂದಿದೆ’’ (ಪವಿತ್ರ ಕುರ್‌ ಆನ್-11:1) ಎಂದು ಕುರ್‌ ಆನನ್ನು ಅಲ್ಲಾಹನು ವರ್ಣಿಸಿದ್ದಾನೆ.

ಸಂಪೂರ್ಣ ಮಾನವ ಜನಾಂಗವನ್ನು ಎಲ್ಲಾ ವಿಧದ ಕಾರಿರುಳುಗಳಿಂದ ಸತ್ಯ ಧರ್ಮದ ಪ್ರಕಾಶದೆಡೆಗೆ ಕುರ್‌ಆನ್ ಆಹ್ವಾನಿಸುತ್ತಿದೆ.  ಈ ಪ್ರಕಾಶವನ್ನು ತನ್ನದಾಗಿಸಲು ಮೊದಲ ಆದ್ಯತೆಯಾಗಿ ಪವಿತ್ರ ಕುರ್‌ಆನ್ ಓದುವಿಕೆಯನ್ನು ಬೆಂಬಲಿಸಿದೆ. ಕುರ್‌ಆನ್ ಅವತೀರ್ಣಗೊಳ್ಳುವ ಕಾಲದಲ್ಲಿ ಮಕ್ಕಾದಲ್ಲಿದ್ದ ನಿರಕ್ಷರರಾಗಿದ್ದ ಜನಾಂಗಕ್ಕೆ ಗುರಿಯ ಪ್ರಜ್ಞೆ ಇರಲಿಲ್ಲ. ಆ ಜನತೆಯ ಸಂಸ್ಕರಣೆಗೆ ಮೂಲಭೂತವಾಗಿ ಓದುವಿಕೆ ಬೇಕಾಗಿದೆ ಎಂಬುದನ್ನು ಕುರ್‌ ಆನ್ ತಿಳಿಸುತ್ತದೆ. ಅರ ಜೊತೆಗೆ ಕುರ್‌ ಆನ್ ಓದುವಿಕೆಗೆ ಒಂದು ಸೀಮೆಯನ್ನೂ ನಿರ್ಣಯಿಸಿತು. 

‘‘ಓದಿರಿ,(ವಿಶ್ವವನ್ನು) ಸೃಷ್ಟಿಸಿದ ನಿಮ್ಮೊಡೆಯನ ಹೆಸರಿಂದ. ಅವನು, ಮನುಷ್ಯನನ್ನು ಹೆಪ್ಪುಗಟ್ಟಿದ ರಕ್ತದಿಂದ ಸೃಷ್ಟಿಸಿರುವನು. ಓದಿರಿ ಮಹಾ ಉದಾರಿಯಾದ ನಿಮ್ಮೊಡೆಯನ ಹೆಸರಿಂದ. ಅವನು ಲೇಖನಿಯ ಮೂಲಕ  ಕಲಿಸಿದನು. ಮತ್ತು ಮಾನವನಿಗೆ ತಿಳಿದಿಲ್ಲದ್ದನ್ನು ಕಲಿಸಿದನು’’ (ಪವಿತ್ರ ಕುರ್‌ ಆನ್- 96: 1-5)

ಸತ್ಯವಿಶ್ವಾಸಿಯೊಬ್ಬನಿಗೆ ಅಲ್ಲಾಹನು ನಿರ್ಣಯಿಸಿದ ಸೀಮೆಯೊಳಗೆ ಯಾವುದೇ ರೀತಿಯ ಓದು ಹೆಚ್ಚು ಪ್ರತಿಫಲ ಖಂಡಿತ ನೀಡಬಹುದು. ಅದರಲ್ಲೂ ವಿಶೇಷವಾಗಿ ರಮಳಾನ್ ತಿಂಗಳಲ್ಲಿ ಓದು ಖಂಡಿತವಾಗಿಯೂ ಪ್ರತಿಫಲಾರ್ಹವಾದ ಕರ್ಮವಾಗಿದೆ. ಪವಿತ್ರ ಕುರ್‌ ಆನ್ ಸತ್ಯವಿಶ್ವಾಸ ಲಭ್ಯವಾಗದೆ ಇರುಳಲ್ಲ್‌ದ್ದ ಜನರಿಗೆ ಪ್ರಕಾಶವನ್ನು ನೀಡುವ ಜ್ಯೋತಿಯಾಗಿದೆ.

‘‘ನಿಜಕ್ಕೂ ನಿಮ್ಮ ಬಳಿಗೆ ಅಲ್ಲಾಹನ ವತಿಯಿಂದ ಒಂದು ಪ್ರಕಾಶ ಮತ್ತು ಬಹಳ ಸ್ಪಷ್ಟವಾದ ಒಂದು ಗ್ರಂಥವು ಬಂದಿದೆ. ಈ ಮೂಲಕ ಅಲ್ಲಾಹನು, ಅವನ ಮೆಚ್ಚುಗೆಯನ್ನು ಬಯಸುವವರಿಗೆ ಶಾಂತಿಯ ಮಾರ್ಗಗಳನ್ನು ತೋರಿಸುತ್ತಾನೆ ಮತ್ತು ತನ್ನ ಆದೇಶದ ಮೂಲಕ ಅವರನ್ನು ಕತ್ತಲಿನಿಂದ ಹೊರತೆಗೆದು ಬೆಳಕಿನೆಡೆಗೆ ನಡೆಸುತ್ತಾನೆ ಮತ್ತು ಅವರಿಗೆ ನೇರ ಮಾರ್ಗವನ್ನು ತೋರಿಸಿಕೊಡುತ್ತಾನೆ.’’ (ಪವಿತ್ರ ಕುರ್‌ ಆನ್-5: 15,16)

 ಪ್ರಕೃತಿಯ ಮೂಲಕ ಅದರ ಸೃಷ್ಟಿಕರ್ತನನ್ನು ತಿಳಿದುಕೊಳ್ಳುವಂತೆ ಅವನ ಮಹತ್ವವನ್ನು ಸ್ತುತಿಸುವಂತೆ ಮತ್ತು ಅವನ ಅನುಗ್ರಹಗಳಿಗೆ ಕೃತಜ್ಞತೆಯಾಗಿ ಆರಾಧನೆಗಳನ್ನು ನಿರ್ವಹಿಸುವಂತೆ ಪವಿತ್ರ ಕುರ್‌ಆನ್ ಜನರಿಗೆ ತಿಳಿಸುತ್ತದೆ. ಸತ್ಯವಿಶ್ವಾಸವನ್ನು ಪೂರ್ಣ ರೂಪದಲ್ಲಿ ಪಾಲಿಸುವವರು ತಾವು ಅಲ್ಲಾಹನ ರಕ್ಷಣೆಯಲ್ಲಿದ್ದೇವೆ ಎಂಬ ಪ್ರಜ್ಞೆಯನ್ನು ಹೊಂದುತ್ತಾರೆ. ಅಂತಹ ಪ್ರಜ್ಞೆಯನ್ನು ಪಡೆದವರು ಅವರು ಸೃಷ್ಟಿಗಳಲ್ಲಿ ಯಾವುದನ್ನೂ ಭಯಪಡದಂತಹ ಮಾನಸಿಕ ಸ್ಥಿತಿಯನ್ನು ತಲುಪುತ್ತಾರೆ.

ಕರುಣಾಳುವಾದ ಅಲ್ಲಾಹನು ಯಾವುದೇ ಮಧ್ಯವರ್ತಿಯ ಅಥವಾ ದುಭಾಷಿಗನ ನೆರವಿಲ್ಲದೆ ತನ್ನ ದಾಸರೆಲ್ಲರ ಪ್ರಾರ್ಥನೆಗಳನ್ನು ಆಲಿಸುತ್ತಾನೆ ಮತ್ತು ಸಂಕಷ್ಟಗಳನ್ನು ಪರಿಹರಿಸುತ್ತಾನೆ ಎಂಬ ಆತ್ಮವಿಶ್ವಾಸ ಸತ್ಯವಿಶ್ವಾಸಿಗಳಲ್ಲಿರಬೇಕು.

‘‘ಓ(ದೂತರೇ,) ನನ್ನ (ಅಲ್ಲಾಹನ) ದಾಸರು ನನ್ನ ಕುರಿತು ನಿಮ್ಮನ್ನು ವಿಚಾರಿಸಿದಾಗ ನಾನು ಅವರ ಹತ್ತಿರವೇ ಇದ್ದೇನೆ ಮತ್ತು ಪ್ರಾರ್ಥಿಸುವವನು ನನ್ನನ್ನು ಪ್ರಾರ್ಥಿಸಿದಾಗ ಅವನ ಪ್ರಾರ್ಥನೆಯನ್ನು ನಾನು ಆಲಿಸುತ್ತೇನೆ. ಅವರಿನ್ನು ನನ್ನ ಕರೆಗೆ ಉತ್ತರ ನೀಡಲಿ ಮತ್ತು ನನ್ನಲ್ಲಿ ನಂಬಿಕೆ ಇಡಲಿ – ಅವರು ಸರಿದಾರಿಯನ್ನು ಪಡೆದವರಾಗಬಹುದು.)’’ (ಪವಿತ್ರ ಕುರ್‌ ಆನ್-2: 186) ಎಂದು ಕುರ್‌ ಆನ್ ತಿಳಿಸಿದೆ.

ಮಾನವನ ಚಿಂತನೆಯನ್ನು ಬಡಿದೆಬ್ಬಿಸುವ ಹಲವಾರು ಪ್ರಶ್ನೆಗಳನ್ನು ಪವಿತ್ರ ಕುರ್‌ ಆನ್ ನಮ್ಮ ಮುಂದಿಟ್ಟಿದೆ.  ಮಾನವನ ವಿಜ್ಞಾನ ಅಷ್ಟೊಂದು ವಿಕಾಸ ಹೊಂದಿರದ ಆ ಕಾಲದಲ್ಲಿ, ಮಾನವನ ಭ್ರೂಣದ ಬೆಳವಣಿಗೆ, ಪ್ರಪಂಚದ ಸೃಷ್ಟಿ – ವಿಕಾಸ, ಗೋಲಗಳ ಪಥಸಂಚಲನ, ಸಸ್ಯಗಳ ಸೃಷ್ಟಿ ಬೆಳವಣಿಗೆ, ನೀರಿನ ಸಮತೊಲನ, ಸಮುದ್ರಗಳ ವೈಶಿಷ್ಟ್ಯತೆ ಮೊದಲಾದ ಮಾನವನಿಗೆ ಸುಲಭದಲ್ಲಿ ನಿಲುಕದ ಆಶ್ಚರ್ಯಕರ ವಸ್ತುಗಳ ವಾಸ್ತವಿಕತೆಯತ್ತ ಕುರ್‌ ಆನ್ ಬೆಳಕನ್ನು ನೀಡಿದೆ.

ಪವಿತ್ರ ಕುರ್‌ ಆನ್ ಅವತೀರ್ಣಗೊಂಡ ಕಾಲದಲ್ಲಿ ಇದನ್ನು ಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಅವೆಲ್ಲವೂ ವೈಜ್ಞಾನಿಕ ಸತ್ಯವಾಗಿ ನಮ್ಮ ಮುಂದೆ ಅನಾವರಣಗೊಂಡಿವೆ. ಮಾನವನ ಬುದ್ಧಿಯನ್ನು ಎಚ್ಚರಿಸಲು ಜೀವಿಗಳ ಕುರಿತಾದ ಕೆಲವು ಉದಾಹರಣೆಗಳನ್ನು ನೀಡಿರುವುದನ್ನು ಕುರ್‌ ಆನಿನಲ್ಲಿ ಕಾಣಬಹುದು. ಒಂಟೆ, ಜೇನುನೊಣ, ಪಕ್ಷಿಗಳು, ಇರುವೆ, ಜೇಡರಹುಳು ಮೊದಲಾದ ಜೀವಿಗಳ ದೇಹ ಪ್ರಕೃತಿ, ಜೀವನ ರೀತಿಯನ್ನು ವಿವಿಧ ಪಾಠಗಳನ್ನಾಗಿಸಿ ಕುರ್‌ ಆನ್ ಮಾನವರಿಗೆ ವಿವರಿಸಿದೆ.

 ಪ್ರಕೃತಿ ಸಂರಕ್ಷಣೆಯ ಪ್ರಾಮುಖ್ಯತೆಯ ಕುರಿತು ಬಹಳಷ್ಟ್ಚು ಚರ್ಚೆ ನಡೆಯುವ ಈ ಕಾಲದಲ್ಲಿ ಪ್ರಕೃತಿಯೊಡನೆ ಮಾನವನ ಸಂಬಂಧ ಹೇಗಿರಬೇಕು ಎಂಬ ಕುರ್‌ ಆನಿನ ಪಾಠ ಮಹತ್ವಪೂರ್ಣವಾಗಿದೆ. ಭೂಮಿ ಮತ್ತು ಅದರಲ್ಲಿರುವುದೆಲ್ಲವೂ ಮಾನವರಿಗಾಗಿ ಎಂದು ಘೋಷಿಸುವುದರೊಂದಿಗೆ ಅದರ ಮಾಲೀಕ ಅಲ್ಲಾಹನು ಎಂಬ ಪ್ರಜ್ಞೆಯನ್ನು ಹೊಂದುವಂತೆ ಮಾಡುತ್ತದೆ. ಭೂಮಿಯಲ್ಲಿರುವ ಸಂಪನ್ಮೂಲಗಳನ್ನು ಎಚ್ಚರಿಕೆಯಿಂದ ಬಳಸುವಂತೆ ಕುರ್‌ ಆನ್ ಜನರಿಗೆ ಎಚ್ಚರಿಕೆ ನೀಡಿದೆ.

ಅಸೂಯೆ, ದ್ವೇಷ, ಹಗೆ, ಪಕ್ಷಪಾತ, ಅತ್ಯಾಸೆ ಮೊದಲಾದ ಮನೋರೋಗಗಳಿಗೆ ಕುರ್‌ ಆನ್ ಚಿಕಿತ್ಸೆ ನೀಡುತ್ತದೆ. ಪರಸ್ಪರ ಪ್ರೀತಿಸುವಂತೆ, ಪರಿಗಣಿಸುವಂತೆ, ಗೌರವಿಸುವಂತೆ ಪವಿತ್ರ ಕುರ್‌ ಆನ್ ಮಾನವನಿಗೆ ಗಂಭೀರವಾದ ಎಚ್ಚರಿಕೆ ನೀಡುತ್ತದೆ. ಹಗೆ, ದ್ವೇಷವನ್ನು ತಲೆತಲಾಂತರ ಮುಂದುವರಿಸಿ ಯುದ್ಧಗಳನ್ನು ನಡೆಸಿಕೊಂಡಿದ್ದ ಒಂದು ಸಮಾಜಕ್ಕೆ ಪವಿತ್ರ ಕುರ್‌ ಆನ್ ಅವತೀರ್ಣಗೊಂಡಿತ್ತು. ಪವಿತ್ರ ಕುರ್‌ ಆನ್ ಕೊಲೆಪಾತಕಕ್ಕೆ ಕ್ಷಮೆ ನೀಡುವ  ಅಧಿಕಾರವನ್ನು ಆಡಳಿತಕ್ಕೆ ಅಥವಾ, ನ್ಯಾಯಾಧೀಶರಿಗೆ ನೀಡಲಿಲ್ಲ. ಕೊಲ್ಲಲ್ಪಟ್ಟ ವ್ಯಕ್ತಿಯ ನಿಕಟ ರಕ್ತಸಂಬಂಧಿಗೆ ಆ ಅಧಿಕಾರವನ್ನು ನೀಡಿದ ಕುರ್‌ ಆನ್ ಸಮಾಜದಲ್ಲಿ ಆಶ್ಚರ್ಯಕರವಾದ ಬದಲಾವಣೆಗೆ ಕಾರಣವಾಯಿತು. ಆಡಳಿತ ಮತ್ತು ನ್ಯಾಯಾಧೀಶ ಕ್ಷಮೆ ನೀಡುವಾಗ ಬಲಿಪಶುವಿನ ಬಂಧುಗಳಿಗೆ ನಿರಾಶೆ, ಪ್ರತೀಕಾರ ಮನೋಭಾವ ಉಂಟಾಗಬಹುದು. ಅದೇ ವೇಳೆ ಆ ಅಧಿಕಾರ ಹತ್ತಿರದ ಸಂಬಂಧಿಗಳಿಗಿರುವಾಗ ನಿರಾಶೆ, ಪ್ರತಿಕಾರ ಮನೋಭಾವ ಉಂಟಾಗುವ ಸಾಧ್ಯತೆಯಿಲ್ಲ. ಅದರ ಜೊತೆಗೆ ತಮ್ಮ ಪ್ರೀತಿಪಾತ್ರರ ಘಾತಕರಿಗೆ ಕ್ಷಮೆ ನೀಡುವ ಮೂಲಕ ಸಮಾಜದಲ್ಲಿ ಔನ್ನತ್ಯಗಳಿಸಿಕೊಳ್ಳಲೂ ಅವರಿಗೆ ಅವಕಾಶ ಒದಗಿಸುತ್ತದೆ.

ತಂದೆಯಾದವನು ತನ್ನಿಚ್ಛೆಯಂತೆ ತಮ್ಮ ಸಂಪತ್ತನ್ನು ವಸಿಯ್ಯತ್ ಮಾಡುವ ಮತ್ತು ತಮ್ಮ ಕೆಲ ಮಕ್ಕಳಿಗೆ ಮಾತ್ರ ಅದನ್ನು ಪಾಲು ಮಾಡಿಕೊಡುವ ಸಂಪ್ರದಾಯವಿದ್ದ ಒಂದು ಕಾಲ. ಅಂತಹ ಕಾಲದಲ್ಲಿ ರಕ್ತ ಸಂಬಂಧ ಎಂಬ ಬಲಿಷ್ಠವಾದ ತಳಪಾಯವನ್ನು ಹಾಕಿ ತಾರತಮ್ಯ ನೀತಿಗೆ ಅಸ್ಪದವೇ ಇಲ್ಲದಂತೆ ಮಾಡಿದ ಕುರ್‌ ಆನ್ ಮಕ್ಕಳ ನಡುವೆ ನ್ಯಾಯ ಪಾಲಿಸುವಂತೆ  ಆಜ್ಞಾಪಿಸುತ್ತದೆ.

‘‘ವಿಶ್ವಾಸಿಗಳೇ, ನೀವು ಕಟ್ಟುನಿಟ್ಟಾಗಿ ಸದಾ ನ್ಯಾಯವನ್ನು ಪಾಲಿಸುವವರಾಗಿರಿ ಹಾಗೂ ಅಲ್ಲಾಹನಿಗಾಗಿ (ಸತ್ಯದಪರ) ಸಾಕ್ಷ್ಯಹೇಳುವವರಾಗಿರಿ – ಅದು ಸ್ವತಃ ನಿಮ್ಮ ವಿರುದ್ಧ ಅಥವಾ ನಿಮ್ಮ ತಂದೆ-ತಾಯಿಯ ಅಥವಾ ನಿಕಟ ಬಂಧುಗಳ ವಿರುದ್ಧವಾಗಿದ್ದರೂ ಸರಿಯೇ. ಶ್ರೀಮಂತನಿರಲಿ, ಬಡವನಿರಲಿ, ಅವರಿಬ್ಬರ ಪಾಲಿಗೂ ಇತರೆಲ್ಲರಿಗಿಂತ ಹೆಚ್ಚಾಗಿ ಅಲ್ಲಾಹನೇ ಹಿತೈಷಿಯಾಗಿದ್ದಾನೆ. ನೀವೆಂದೂ ನಿಮ್ಮ ಚಿತ್ತಾಕಾಂಕ್ಷೆಗಳನ್ನು ಅನುಸರಿಸಿ ನ್ಯಾಯಪಾಲನೆಯಲ್ಲಿ ತಪ್ಪಬೇಡಿ. (ನ್ಯಾಯ ಪ್ರಕ್ರಿಯೆಯಲ್ಲಿ) ನೀವು ನಾಲಿಗೆ ತಿರುಚಿದರೆ (ಸಾಕ್ಷ್ಯವನ್ನು ಬದಲಿಸಿದರೆ) ಅಥವಾ ಜಾರಿಗೊಂಡರೆ, ಅಲ್ಲಾಹನು ನಿಮ್ಮೆಲ್ಲ ಕೃತ್ಯಗಳ ಕುರಿತು ಅರಿವು ಉಳ್ಳವನಾಗಿದ್ದಾನೆ (ಎಂಬುದನ್ನು ಮರೆಯಬೇಡಿ)’’ ( ಕುರ್‌ ಆನ್- 4:135)

ಮಾನವನ ಆರೋಗ್ಯ ಮತ್ತು ಪ್ರಕೃತಿಗೆ ಒಪ್ಪುವಂತಹ ಜೀವನ ಕ್ರಮವನ್ನು ಪವಿತ್ರ ಕುರ್‌ ಆನ್ ಹಾಗು ಪ್ರವಾದಿ ಜೀವನ ನೀಡಿದೆ. ಜೀವನದ ಪ್ರತಿಯೊಂದು ನಿಮಿಷವನ್ನು ಹೇಗೆ ವ್ಯಯಿಸಬೇಕು, ಅದನ್ನು ಯಾವ ರೀತಿ ಪ್ರತಿಫಲಾರ್ಹಗೊಳಿಸಬೇಕು ಎಂಬುದನ್ನು ಪವಿತ್ರ ಕುರ್‌ ಆನ್ ತಿಳಿಸಿಕೊಡುತ್ತದೆ. ಧಿಕ್ಕಾರಿಗಳಾದ ಪೂರ್ವಿಕರ ಪತನದ ಕಥೆಗಳನ್ನು ಕುರ್‌ಆನ್ ವಿವಿಧೆಡೆ ಪರಾಮರ್ಶೆ ನಡೆಸಿದೆ. ಜಗತ್ತಿನಲ್ಲಿ ಸಂಚರಿಸಿ ಆ ಜನಾಂಗದ ಕುರುಹುಗಳಿಂದ ಪಾಠಗಳನ್ನು ಕಲಿತು ತಮ್ಮ ಜೀವನ ಕ್ರಮವನ್ನು ಸರಿಪಡಿಸಿಕೊಳ್ಳುವಂತೆ ಸತ್ಯವಿಶ್ವಾಸಿಗಳಿಗೆ ಪವಿತ್ರ ಕುರ್‌ ಆನ್ ಆಹ್ವಾನ ನೀಡುತ್ತದೆ. ಕುರ್‌ ಆನಿನ ಜೀವನ ಕ್ರಮವನ್ನು  ಅಳವಡಿಸಿಕೊಳ್ಳದವರಿಗೆ ಈ ಕೆಳಗಿನ ಸೂಕ್ತ ತಾಕೀತಾಗಿದೆ.

‘‘ತೌರಾತ್‌ ನ ಹೊಣೆ ವಹಿಸಿ ಕೊಡಲಾದವರು ಮತ್ತು ಆ ಹೊಣೆಯನ್ನು ನಿರ್ವಹಿಸದೆ ಇದ್ದವರ ಉದಾಹರಣೆಯು ಗ್ರಂಥಗಳ ಹೊರೆಹೊತ್ತ ಕತ್ತೆಯಂತಿದೆ. ಅಲ್ಲಾಹನ ವಚನಗಳನ್ನು ತಿರಸ್ಕರಿಸಿದವರ ಸ್ಥಿತಿಯು ನಿಜಕ್ಕೂ ಕೆಟ್ಟದಾಗಿದೆ. ಅಲ್ಲಾಹನು ಅಕ್ರಮಿಗಳಿಗೆ ಸರಿದಾರಿಯನ್ನು ತೋರುವುದಿಲ್ಲ’’ (ಪವಿತ್ರ ಕುರ್‌ ಆನ್-62: 5)

ದೇವನ ದೃಷ್ಟಾಂತಗಳನ್ನು ಕಾಣಲಿರುವ ಕಣ್ಣು, ಚಿಂತನೆ ನಡೆಸಲಿರುವ ಹೃದಯ, ಅದನ್ನು ಆಲಿಸಲಿರುವ ಕಿವಿಗಳು ಇದ್ದೂ ಅದನ್ನು ಬೇಕಾದ ರೀತಿಯಲ್ಲಿ ಉಪಯೋಗಿಸದವರು ಪ್ರಾಣಿಗಳಿಗಿಂತಲೂ ಕೀಳು ಎಂದು ಕುರ್‌ ಆನ್ ತಿಳಿಸುತ್ತದೆ.

‘‘ನಾವು ಜಿನ್ನ್ ಮತ್ತು ಮಾನವರ ಪೈಕಿ ಅನೇಕರನ್ನು ನರಕಕ್ಕಾಗಿಯೇ ಸೃಷ್ಟಿಸಿದ್ದೇವೆ. ಅವರಿಗೆ ಮನಸ್ಸುಗಳಿವೆ, ಆದರೆ ಆ ಮೂಲಕ ಅವರು ಚಿಂತನೆ ನಡೆಸುವುದಿಲ್ಲ. ಅವರಿಗೆ ಕಣ್ಣುಗಳಿವೆ, ಆದರೆ ಆ ಮೂಲಕ ಅವರು ನೋಡುವುದಿಲ್ಲ. ಹಾಗೆಯೇ, ಅವರಿಗೆ ಕಿವಿಗಳಿವೆ, ಆದರೆ ಆ ಮೂಲಕ ಅವರು ಕೇಳುವುದಿಲ್ಲ. ಅವರ ಪ್ರಾಣಿಗಳಂತಿದ್ದಾರೆ, ಮಾತ್ರವಲ್ಲ, ಇನ್ನೂ ಹೆಚ್ಚು  ದಾರಿಗೆಟ್ಟಿದ್ದಾರೆ. ಅವರಿಗೆ ಅರಿವಿಲ್ಲ’’ (ಕುರ್‌ ಆನ್- 7:179)



Join Whatsapp