ರಮಝಾನ್: ಪಾವಿತ್ರ್ಯ ಮತ್ತು ತಾಕತ್ತಿನ ತಿಂಗಳು

Prasthutha|

ವಿಶ್ವಾಸದೊಂದಿಗೆ ವ್ರತ ಆಚರಿಸುವವರಿಗೆ ಪಾಪ ವಿಮೋಚನೆ ಇದೆ ಎಂದು ಪ್ರವಾದಿವರ್ಯರು ವಾಗ್ದಾನ ನೀಡಿದ್ದಾರೆ. ವಿಶ್ವಾಸ ಇಲ್ಲದೆಯೂ ವ್ರತಾಚರಣೆ ಮಾಡುವವರು  ಇದ್ದಾರೆ ಎಂಬುವುದು ಇದರ ಇನ್ನೊಂದು ಮಗ್ಗುಲು. ವೈಜ್ಞಾನಿಕವಾಗಿ ಉಪವಾಸವು ಅತ್ಯಂತ ಉತ್ತಮ ಚಿಕಿತ್ಸಾ ವಿಧಾನವಾಗಿದೆ. ಚಿಕಿತ್ಸೆ ಎಂಬಂತೆ ಉಪವಾಸ ಆಚರಿಸಲು ಈಮಾನ್ ಬೇಕೆಂದಿಲ್ಲ. ಉಪವಾಸವನ್ನು ಹೋರಾಟ ಎಂಬ ರೀತಿಯಲ್ಲಿ ಅನುಸರಿಸುವ ಸಾಮಾಜಿಕ ಸಂಘಟನೆಗಳು ನಮ್ಮ ದೇಶದಲ್ಲಿ ಇವೆ. ಒಂದು ಹೋರಾಟ ವಿಧಾನ ಎಂಬಂತೆ ಉಪವಾಸ ಸತ್ಯಾಗ್ರಹವು ಈಮಾನಿನ ಪ್ರೇರಣೆ ಆಗಲಾರದು.

- Advertisement -

ಅಲ್ಲಾಹನು ನಮ್ಮ ಪಾಪಗಳನ್ನು ಕ್ಷಮಿಸಿ ಬಿಡಲು ಮುಂದಿಟ್ಟ ಷರತ್ತುಗಳಲ್ಲೊಂದಾದ ವ್ರತಾಚರಣೆಯು ವಿಶ್ವಾಸದೊಂದಿಗೆ ಆಗಿರಬೇಕು. ಅಲ್ಲಾಹನ ಏಕತ್ವದ ಕುರಿತಾದ ಅರಿವು ಮತ್ತು ಅದರೊಂದಿಗೆ ಬೆಸೆದುಕೊಂಡ ಬದುಕಿನ ಧೋರಣೆಯೇ ಈಮಾನ್.

ಈಮಾನಿನ ಜೀವನಾವಿಷ್ಕಾರವೇ ಉಪವಾಸ. ಹಗಲು ಉಪವಾಸವಿದ್ದು, ರಾತ್ರಿ ಆಹಾರವನ್ನು ಸೇವಿಸುವುದು. ಸೂರ್ಯಾಸ್ತದ ನಂತರವೂ ಓರ್ವ ಇಫ್ತಾರ್ ಮಾಡುವುದಿಲ್ಲ ಎಂದರೆ ಆತನ ಉಪವಾಸವು ತುಂಬಾ ಗಟ್ಟಿಯಾಗಿದೆ ಎಂದರ್ಥವಲ್ಲ. ಬದಲಾಗಿ ಆ ಉಪವಾಸವನ್ನು ಅಪೂರ್ಣವೆಂದು ಪರಿಗಣಿಸಬೇಕಾಗುತ್ತದೆ. ಅಲ್ಲಾಹನು ಸಮ್ಮತಾರ್ಹಗೊಳಿಸಿದ್ದನ್ನು ಸ್ವೀಕರಿಸಿ ನಿಷೇಧಿಸಿದ್ದನ್ನು ತೊರೆಯುವ ನಮ್ಮ ಸನ್ನದ್ಧತೆಯೇ ನಿಜವಾದ ಉಪವಾಸ. ಅದುವೇ ವಿಶ್ವಾಸದಿಂದ ಕೂಡಿದ ಉಪವಾಸ. 

- Advertisement -

ರಮಝಾನ್ ಮತ್ತು ಕುರ್‌ ಆನ್

ಉಪವಾಸಕ್ಕಾಗಿ ಅಲ್ಲಾಹನು ರಮಝಾನ್ ತಿಂಗಳನ್ನು ಆರಿಸಿದನು. ಪವಿತ್ರ ಕುರ್‌ ಆನ್ ಗ್ರಂಥವನ್ನು ಮಾನವ ಜನತೆಗೆ ತಲುಪಿಸಲು ಅಲ್ಲಾಹನು ರಮಝಾನ್ ಆರಿಸಿದನು. ರಮಝಾನ್ ಮತ್ತು ಕುರ್‌ಆನ್ ಮಧ್ಯೆ ಇರುವ ಸಂಬಂಧವನ್ನು ಮರೆತುಬಿಟ್ಟರೆ ಉಪವಾಸದ ಗುರಿಯು ತಪ್ಪಿ ಹೋಗಬಹುದು. ಕುರ್‌ ಆನ್‌ ನಿನ ಕಲ್ಪನೆಯಲ್ಲಿರುವ ಮನುಷ್ಯನನ್ನು ರೂಪಿಸಲು ಅಲ್ಲಾಹನು ಸಜ್ಜುಗೊಳಿಸಿದ ಪಾಠ ಶಾಲೆ ಮತ್ತು ತರಬೇತಿಯ ಗರಡಿಯಾಗಿದೆ ರಮಝಾನಿನ ಉಪವಾಸ. ಕುರ್‌ ಆನ್ ಪಾರಾಯಣದ ಮೂಲಕ ರಮಝಾನಿನ ನೈಜ ಮಾಧುರ್ಯವನ್ನು ಸವಿಯಲು ನಮಗೆ ಸಾಧ್ಯವಾಗಬೇಕು.

ಕುರ್‌ ಆನ್ ಪಾರಾಯಣಗೈಯಲು, ಗ್ರಹಿಸಲು, ಆಸ್ವಾದಿಸಲು ನಮಗೆ ಸಾಧ್ಯವಾಗದಿದ್ದರೆ ನಮ್ಮ ಉಪವಾಸದಲ್ಲಿ ಈಮಾನ್ ಇರುವುದಾದರೂ ಹೇಗೆ? ಕುರ್‌ ಆನ್ ಪಾರಾಯಣವು ಕೇವಲ ಅಕ್ಷರ ಮತ್ತು ಸಾಲುಗಳಿಗೆ ಸೀಮಿತಗೊಳ್ಳದೆ ಅರ್ಥ ವ್ಯಾಖ್ಯಾನಗಳೊಂದಿಗೆ ಸಂಚರಿಸುವಾಗಲಷ್ಟೆ ತಿಲಾವತ್ ಅಥವಾ ಪಾರಾಯಣವು ಫಲಕಾರಿಯಾದೀತು. ಪ್ರವಾದಿವರ್ಯರ ಕುರ್‌ ಆನ್ ಪಾರಾಯಣ ಶೈಲಿಯನ್ನು ಅರಿತುಕೊಂಡು ಅನುಸರಿಸಬೇಕಾದ ಅಗತ್ಯವಿದೆ. ದೇವ ಕರುಣೆಯ ಪರಾಮರ್ಶೆ ಇರುವ ಸೂಕ್ತವನ್ನು ಪಾರಾಯಣಗೈದಾಗ ಪ್ರವಾದಿರ್ಯರು ಅಲ್ಲಾಹನ ಕರುಣೆಯನ್ನು ಯಾಚಿಸುತ್ತಿದ್ದರು. ಅಲ್ಲಾಹನ ಶಿಕ್ಷೆಯನ್ನು ವಿವರಿಸುವ ಸೂಕ್ತವನ್ನು ಪಾರಾಯಣಗೈದಾಗ   ಪ್ರವಾದಿವರ್ಯರು ಅಲ್ಲಾಹನೊಂದಿಗೆ ಸಂರಕ್ಷಣೆಯನ್ನು ಬೇಡುತ್ತಿದ್ದರು. ಅಲ್ಲಾಹನ ಮಹಾನತೆಯನ್ನು ವಿವರಿಸುವ ಸೂಕ್ತವನ್ನು ಪಾರಾಯಣಗೈದಾಗ ಪ್ರವಾದಿವರ್ಯರು ಸುಬುಹಾನಲ್ಲಾ ಎಂದು ಹೇಳುತ್ತಿದ್ದರು. ತುಟಿ, ನಾಲಗೆ, ಹೃದಯ, ಮೆದುಳು ಇವೆಲ್ಲವೂ ಜೊತೆಗೂಡುವ ಕುರ್‌ ಆನ್ ಪಾರಾಯಣವು ಅನನ್ಯ ಅನುಭವವಾಗಿದೆ. 

ರಮಝಾನ್ ರಾತ್ರಿಯ ನಮಾಝ್

ರಮಝಾನ್ ರಾತ್ರಿಯ ನಮಾಝ್ ಅನನ್ಯ ಅನುಭವವೂ, ಅನುಭೂತಿಯೂ ಆಗಿದೆ. ಪ್ರವಾದಿ(ಸ) ಹೇಳಿದರು: ಯಾರಾದರೂ ರಮಝಾನ್ ತಿಂಗಳಲ್ಲಿ ಪ್ರತಿಫಲಾಪೇಕ್ಷೆಯಿಂದ ಮತ್ತು ವಿಶ್ವಾಸದಿಂದ ನಿಂತು ನಮಾಝ್ ಮಾಡಿದರೆ ಅವನ ಗತಪಾಪಗಳನ್ನು ಅಲ್ಲಾಹನು ಕ್ಷಮಿಸಿ ಬಿಡುವನು. ದೀರ್ಘವಾಗಿ ನಿಂತು ಕುರ್‌ ಆನ್ ಪಾರಾಯಣಗೈಯ್ಯುವುದು ಸುದೀರ್ಘ ರುಕೂಅ್ ಮಾಡುವುದು ರಾತ್ರಿ ನಮಾಝಿನ ವೈಶಿಷ್ಟ್ಯವಾಗಿದೆ. ಅಲ್ಲಾಹ್ ಮತ್ತು ದಾಸನ ಮಧ್ಯೆ ಇರುವ ಮುಲಾಖಾತ್ ಮತ್ತು ಮುನಾಜಾತ್ ಅದರೊಂದಿಗೆ ಪೂರ್ತಿಗೊಳ್ಳುತ್ತದೆ. ಸುಜೂದಿನ ಮೂಲಕ ದಾಸನು ಯಜಮಾನನ ಬಳಿ ಇನ್ನಷ್ಟು ಹತ್ತಿರ ತಲುಪುತ್ತಾನೆ ಎಂದು ಪ್ರವಾದಿಯವರು ಕಲಿಸಿರುತ್ತಾರೆ. ದೀರ್ಘ ಸುಜೂದ್ ನಿರ್ವಹಿಸುವ ಮೂಲಕ ರಾತ್ರಿ ಪಾಪಗಳನ್ನು ತೊಳೆದು ಶುದ್ಧೀಕರಿಸಲು ಸಾಧ್ಯವಾಗುವುದು.

ರಮಝಾನ್ ಮತ್ತು ದಾನ ಧರ್ಮಗಳು

ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದು ಸತ್ಯವಿಶ್ವಾಸಿಯ ಮುಖ್ಯ ಲಕ್ಷಣದಲ್ಲೊಂದು. ಧನಿಕರಿಗೆ ಖರ್ಚು ಮಾಡುವುದು ಕಡ್ಡಾಯವಾಗಿರುತ್ತದೆ. ಸಂಪತ್ತಿನ ನಿಜವಾದ ಒಡೆಯ ಅಲ್ಲಾಹನಾಗಿರುತ್ತಾನೆ. ಆದ್ದರಿಂದಲೇ ಪವಿತ್ರ ಕುರ್‌ ಆನ್ ‘‘ನಾವು ನಿಮಗೆ ನೀಡಿದ ಸಂಪತ್ತಿನಿಂದ ಖರ್ಚು ಮಾಡಿ’’ ಎಂದು ಆದೇಶಿಸುತ್ತದೆ. ಉಪವಾಸದ ವೇಳೆ ಸತ್ಯವಿಶ್ವಾಸಿಗಳೆಲ್ಲರೂ ದಿನವಿಡೀ ಹಸಿವಿನಿಂದ ಇರುತ್ತಾರೆ. ಆ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಹರಡಲಾಗುತ್ತದೆ. ಆದರೆ ಇಫ್ತಾರ್ ವೇಳೆ ಎಲ್ಲರೂ ಉಪವಾಸವನ್ನು ತೊರೆದು ಹೊಟ್ಟೆಯನ್ನು ತಣಿಸಬೇಕಾಗಿದೆ. ಆ ವೇಳೆ ತಿನ್ನಲು, ಕುಡಿಯಲು ಇಲ್ಲದೆ ಯಾರೂ ವಂಚಿತರಾಗಬಾರದು. ಆದ್ದರಿಂದಲೇ ವಿಶೇಷವಾಗಿ ರಮಝಾನಿನಲ್ಲಿ ಧನಿಕರು ಬಡಬಗ್ಗರಿಗೆ ದಾನ-ಧರ್ಮವನ್ನು ನೀಡಬೇಕೆಂದು ಇಸ್ಲಾಮ್ ನಿರ್ದೇಶಿಸುತ್ತದೆ. ಈ ಮೂಲಕ ಹಸಿವಿನಲ್ಲೂ, ಹೊಟ್ಟೆ ತುಂಬಿಸುವುದರಲ್ಲೂ ಸಮಾಜದಲ್ಲಿ ಸಮಾನತೆಯನ್ನು ತರುವ ಚಿತ್ರಣವನ್ನು ರಮಝಾನಿನಲ್ಲಿ ನೋಡಲು ಸಾಧ್ಯವಾಗುತ್ತದೆ.

ಪಶ್ಚಾತ್ತಾಪದ ಮಾಸ

ತಪ್ಪುಗಳನ್ನೇ ಮಾಡದೆ ಬದುಕುವ ಖಾತರಿಯನ್ನು ಮನುಷ್ಯನಿಗೆ ನೀಡಲು ಸಾಧ್ಯವಿಲ್ಲ. ಪಾಪಗಳು ಮಾನವನ ನೈಸರ್ಗಿಕ ಗುಣವಾಗಿದೆ. ಅದೇ ರೀತಿ ಪಾಪ ವಿಮೋಚನೆಗಾಗಿ ಪ್ರಾರ್ಥಿಸುವುದು ಮಾನವನ ಗುಣವಾಗಿದೆ. ಆದಿಪಿತ ಆದಂ ಮತ್ತು ಆದಿಮಾತೆ ಹವ್ವಾ (ರ) ಪಾಪವಿಮೋಚನೆಯನ್ನು ಬೇಡಿದ ಘಟನೆಯನ್ನು ಪವಿತ್ರ ಕುರ್‌ ಆನ್ ವಿವರಿಸುತ್ತದೆ;  ‘‘ಆ ಬಳಿಕ ಆದಮರು ತಮ್ಮೊಡೆಯನಿಂದ (ಕ್ಷಮೆ ಬೇಡುವ) ಕೆಲವು ಪದಗಳನ್ನು  ಕಲಿತುಕೊಂಡರು (ಮತ್ತು ಪಶ್ಚಾತ್ತಾಪ ಪ್ರಕಟಿಸಿದರು). ಅವನು (ಅಲ್ಲಾಹನು) ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ಅವನು ಖಂಡಿತ ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ’’; ಅಧ್ಯಾಯ 2 (ಅಲ್ ಬರಕಃ, ಸೂಕ್ತ: 37). ಆದ್ದರಿಂದ ವಿಶೇಷವಾಗಿ ರಮಝಾನ್ ತಿಂಗಳು ಪಾಪವಿಮೋಚನೆಯನ್ನು ಬೇಡಲು ಇರುವ ಸಮರ್ಪಕವಾದ ವೇಳೆಯಾಗಿದೆ.

ರಮಝಾನ್ ಮತ್ತು ಮಹಿಳೆಯರು

ರಮಝಾನ್ ಕೇವಲ ಪುರುಷರಿಗೆ ಮಾತ್ರ ಸೇರಿದ್ದಲ್ಲ. ಮಹಿಳೆಯರೂ ಅದರ ಪಾಲುದಾರರಾಗಿದ್ದಾರೆ. ಅವರನ್ನು ಕೇವಲ ಅಡುಗೆಕೋಣೆಗೆ ಸೀಮಿತಗೊಳಿಸಬಾರದು. ಕುರ್‌ ಆನ್ ಪಾರಾಯಣ, ದಿಕ್ರ್, ದುಆ, ರಾತ್ರಿ ನಮಾಝ್, ಇಅ್‌ ತಿಕಾಫ್, ಜಮಾಅತ್ ಮೊದಲಾದ ಪುಣ್ಯ ಕಾರ್ಯಗಳಲ್ಲಿ ಇಂದಿಗೂ ಅವರಿಗೆ ಪೂರ್ಣರೂಪದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರಿಗೆ ಅವಕಾಶಗಳನ್ನು ಒದಿಸಿಕೊಡುವುದು ಪುರುಷರ ಕರ್ತವ್ಯವಾಗಿದೆ. ತರಾವೀಹ್ ಮೊದಲಾದ ರಾತ್ರಿ ವೇಳೆಯ ನಮಾಝ್ ನಿರ್ವಹಿಸಲು ಅವರಿಗೆ ಮಸ್ಜಿದ್ ಅಥವಾ ಮನೆಯಲ್ಲಿ ಸೌಕರ್ಯ ಏರ್ಪಡಿಸುವುದು, ಮನೆಯಲ್ಲಿ ಇಮಾಂ ಜಮಾಅತಿನ ಸೌಕರ್ಯ ಏರ್ಪಡಿಸುವುದು ಮೊದಲಾಗಿ ಆಧ್ಯಾತ್ಮಿಕ ವಾತಾವರಣವನ್ನು  ನಿರ್ಮಿಸಿಕೊಡಬೇಕಾಗಿದೆ. ಪ್ರವಾದಿ(ಸ) ರಮಝಾನ್ ವೇಳೆ ರಾತ್ರಿ ಎಚ್ಚರಗೊಂಡು  ಮನೆಮಂದಿಯನ್ನು ಎಚ್ಚರಗೊಳಿಸುತ್ತಿದ್ದಾಗಿ ಹದೀಸ್‌ ಗಳಲ್ಲಿ ಉಲ್ಲೇಖಗೊಂಡಿದೆ. ಕೊನೆಯ ಹತ್ತರ ಇಅ್‌ ತಿಕಾಫ್‌ ನಲ್ಲಿ ಪ್ರವಾದಿರ್ಯವರೊಂದಿಗೆ ಪತ್ನಿಯರೂ ಸೇರಿಕೊಂಡಿದ್ದರೆಂದು ಹದೀಸ್‌ ಗಳು ವರದಿಯಾಗಿವೆ.

ಶಕ್ತಿಯ ತಿಂಗಳು

ಸತ್ಯವಿಶ್ವಾಸಿ ಶಕ್ತನಾಗಿರಬೇಕು. ಅಲ್ಲಾಹನ ಸಾನಿಧ್ಯದಲ್ಲಿ ಸತ್ಯವಿಶ್ವಾಸಿಯು ಸಂಪೂರ್ಣ ಶಕ್ತಿಯನ್ನು ಪಡೆದುಕೊಳ್ಳುತ್ತಾನೆ. ಊರು, ಕೇರಿ ತನ್ನನ್ನು ಬಹಿಷ್ಕರಿಸಿದಾಗ ಇಬ್ರಾಹಿಮ್ (ಅ) ಎತ್ತಿದ ಗೆಲುವಿನ ವಾಕ್ಯ ‘‘ನಾನು ನನ್ನ ರಬ್ಬಿನ ಕಡೆಗೆ’’ ಎಂದಾಗಿತ್ತು. ಕಣ್ಣಮುಂದೆ ಭೋರ್ಗರೆಯುವ ಸಮುದ್ರದ ಅಲೆಗಳು ಹಿಂಬದಿಯಲ್ಲಿ ಫರೋವನ ಸೇನೆ, ಆ ವೇಳೆ ಮೂಸಾ (ಅ), ‘‘ನನ್ನೊಂದಿಗೆ ನನ್ನ ರಕ್ಷಕನಿದ್ದಾನೆ’’ ಎಂದು ಘೋಷಿಸುತ್ತಾರೆ. ಸೌರ್ ಗುಹೆಯಲ್ಲಿ ಸಹಚರನಾದ ಅಬೂಬಕ್ಕರ್ (ರ) ಭಯಪಟ್ಟಾಗ ಪ್ರವಾದಿ(ಸ) ನೀಡಿದ ಸಾಂತ್ವನದ ಮಾತು ಹೀಗಿತ್ತು; ‘‘ದುಃಖಿಸಬೇಡಿ ಅಲ್ಲಾಹನು ನಮ್ಮೊಂದಿಗೆ ಇದ್ದಾನೆ’’. ನಿರಂತರವಾದ ಇಂತಹ ಮಾತುಗಳು  ಸತ್ಯವಿಶ್ವಾಸಿಗಳಲ್ಲಿ ಸದಾ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಆ ಆತ್ಮವಿಶ್ವಾಸವು ಶತ್ರು ಕೇಂದ್ರಗಳಲ್ಲಿ ಕಂಪನವನ್ನು ಸೃಷ್ಟಿಸುತ್ತದೆ. ರಮಝಾನ್ 17ರ ಬದ್ರ್‌ ನ ನೆನಪು ಅಂತಹ ಚೈತನ್ಯ ಮತ್ತು ಆತ್ಮವಿಶ್ವಾಸವನ್ನು ಮರಳಿ ಪಡೆದ ಐತಿಹಾಸಿಕ ದಿನವಾಗಿದೆ.

ವೈರಿಗಳನ್ನು ನೋಡಿ ಭಯಪಡಲು ನಾವು ತಯಾರಿಲ್ಲ ಎಂದು ಘೋಷಿಸಿದ ದಿನವಾಗಿದೆ ಬದ್ರ್. ವೈರಿಗಳ ಭೌತಿಕ ಶಕ್ತಿಗಳ ಮುಂದೆ ವಿಶ್ವಾಸಿಗಳ ಆತ್ಮೀಯ ಶಕ್ತಿ ಅತಿ ಜಯಿಸಿದ ದಿನ. ಎದುರಾಳಿಗಳ ಬಹುಸಂಖ್ಯೆಯನ್ನು ನಗಣ್ಯಗೊಳಿಸಿದ ದಿನ. ಕುರ್‌ ಆನಿನ ವಾರಿಸುದಾರರನ್ನು ಸೋಲಿಸಲು ಇಲ್ಲಿ ಯಾರಿಂದಲೂ ಸಾಧ್ಯವಿಲ್ಲ. ಅವರಿಗೆ ಬಾನಲೋಕದಿಂದ ಆರ್ಶೀವಾದ ಇರುವುದೆಂದೂ ಯಾವುದೇ ಬಲಶಾಲಿಯನ್ನು ಹೊಡೆದುರುಳಿಸಿ ನ್ಯಾಯ ನೀತಿಯನ್ನು ಸ್ಥಾಪಿಸಲು ಸಾಧ್ಯಎಂಬುದಕ್ಕೆ ಬದ್ರ್ ಸಾಕ್ಷಿಯಾಯಿತು. ರಮಝಾನ್ ಬದ್ರ್‌ ನ ವಾಹಕರಂತೆ ಸಜ್ಜುಗೊಳ್ಳಲಿರುವ ತರಬೇತಿ ಕೇಂದ್ರವೂ ಆಗಿದೆ. ಪವಿತ್ರ ಕುರ್‌ ಆನ್ ಬದ್ರ್ ಕಲಿಗಳನ್ನು ಈ ರೀತಿ ಪರಿಚಯಿಸುತ್ತದೆ.

ಅಧ್ಯಾಯ 8: (ಅಲ್ ಅನ್ಫಾಲ್ ) ಸೂಕ್ತ: 2

ಖಂಡಿತವಾಗಿಯೂ ಅಲ್ಲಾಹನ ಹೆಸರೆತ್ತಿದಾಗ ವಿಶ್ವಾಸಿಗಳ ಹೃದಯಗಳಲ್ಲಿ ಭಕ್ತಿ ಉಕ್ಕುತ್ತದೆ  ಹಾಗೂ ಅವರ ಮುಂದೆ ಅವನ ವಚನಗಳನ್ನು  ಓದಲಾದಾಗ ಅವರ ವಿಶ್ವಾಸವು ಬಲಿಷ್ಠವಾಗುತ್ತದೆ ಮತ್ತು ಅವರು ತಮ್ಮ ಒಡೆಯನಲ್ಲಿ  ಸಂಪೂರ್ಣ ಭರವಸೆ ಇಟ್ಟಿರುತ್ತಾರೆ.

ಸೂಕ್ತ: 3

ಅವರು ನಮಾಝನ್ನು ಪಾಲಿಸುತ್ತಾರೆ ಮತ್ತು ಅವರಿಗೆ ನಾವು ನೀಡಿರುವ ಸಂಪತ್ತಿನಿಂದ (ಸತ್ಕಾರ್ಯಕ್ಕೆ) ಖರ್ಚು ಮಾಡುತ್ತಾರೆ.

ಸೂಕ್ತ: 4

ಅವರೇ ನೈಜ ವಿಶ್ವಾಸಿಗಳು. ಅವರಿಗಾಗಿ ಅವರ ಒಡೆಯನ ಬಳಿ ಉನ್ನತ ಸ್ಥಾನಗಳಿವೆ, ಕ್ಷಮೆ ಇದೆ ಮತ್ತು ಧಾರಾಳ ಸಂಪತ್ತಿದೆ.

Join Whatsapp