ಹೊಸದಿಲ್ಲಿ: ಹೊಸ ರಾಷ್ಟ್ರಪತಿ ಸ್ಥಾನಕ್ಕೆ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮನಾಥ್ ಕೋವಿಂದ್ ತಮ್ಮ ಐದು ವರ್ಷದ ಸೇವೆಯ ಬಳಿಕ ರಾಷ್ಟ್ರಪತಿ ಸ್ಥಾನಕ್ಕೆ ವಿದಾಯ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ ಬೀಳ್ಗೊಡುಗೆ ಹಾಗೂ ಔತಣಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಎಲ್ಲಾ ಭಾರತೀಯರಿಗೆ ನನ್ನ ಧನ್ಯವಾದಗಳು. 5 ವರ್ಷದ ಹಿಂದೆ ಇದೇ ವೇದಿಕೆಯಲ್ಲಿ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದೆ. ಇದೀಗ ಹಲವು ಸ್ಮರಣೀಯ ನೆನೆಪುಗಳು, ತೃಪ್ತ ಭಾವದಿಂದ ವಿದಾಯ ಹೇಳುತ್ತಿದ್ದೇನೆ ಎಂದು ಹೇಳಿದರು.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಜನಪ್ರತಿನಿಧಿಗಳಿಗೆ, ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಕೋವಿಂದ್, ರಾಷ್ಟ್ರಪತಿ ಚುನಾವಣೆಯಲ್ಲಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರಿಗೆ ಅಭಿನಂದನೆ ಸಲ್ಲಿಸಿ ಶುಭಕೋರಿದರು.
ಶುಕ್ರವಾರದಂದು ದ್ರೌಪದಿ ಮುರ್ಮು ಅವರು ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಸೋಲಿಸಿದ ನಂತರ ಭಾರತದ ಮುಂದಿನ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಅವರು ಸೋಮವಾರ (ಜುಲೈ 25) ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.