ವಿದ್ಯಾರ್ಥಿಗಳ ವಿಷಯದಲ್ಲಿ ಕ್ಷುಲ್ಲಕ ರಾಜಕಾರಣ; ಹಲ್ಲೆ ಮಾಡಿದ ಎ.ಬಿ.ವಿ.ಪಿ ಕಾರ್ಯಕರ್ತರ ವಿರುದ್ಧ ಕ್ರಮ ಏಕಿಲ್ಲ: ರಕ್ಷಾ ರಾಮಯ್ಯ

Prasthutha|


ಬೆಂಗಳೂರು; ಶಾಲಾ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯ ಪಠ್ಯ ಪುಸ್ತಕ ಕೇಸರೀಕರಣ ನೀತಿ ವಿರೋಧಿಸಿ ಎನ್.ಎಸ್.ಯು.ಐ ವಿದ್ಯಾರ್ಥಿಗಳು ತಿಪಟೂರಿನಲ್ಲಿ ಶಿಕ್ಷಣ ಸಚಿವ ಬಿ.ವಿ. ನಾಗೇಶ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ ಕಾರಣಕ್ಕೆ ಅವರನ್ನು ಬಂಧಿಸಿ ತುಮಕೂರು ಕಾರಾಗೃಹದಲ್ಲಿಟ್ಟಿರುವುದನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಖಂಡಿಸಿದ್ದಾರೆ.

- Advertisement -


ಎನ್.ಎಸ್.ಯು.ಐ ಕಾರ್ಯಕರ್ತರ ಮೇಲೆ ಎಬಿವಿಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದು, ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಎನ್.ಎಸ್.ಯು.ಐ ಸಂಘಟನೆಯನ್ನು ಗುರಿ ಮಾಡಿಕೊಂಡಿದೆ. ವಿದ್ಯಾರ್ಥಿಗಳ ವಿಷಯದಲ್ಲಿ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.
ಮೇಲ್ಮನೆ ಸದಸ್ಯ ರಾಜೇಂದ್ರ ರಾಜಣ್ಣ ಅವರ ನೇತೃತ್ವದಲ್ಲಿ ಇಂದು ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ವಿದ್ಯಾರ್ಥಿ ಮುಖಂಡರ ಜತೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಭಾರೀ ಪ್ರಮಾಣದಲ್ಲಿ ಲೋಪವಾಗಿದೆ. ಇದನ್ನು ಮುಚ್ಚಿಕೊಳ್ಳಲು ಸರ್ಕಾರ ವಿದ್ಯಾರ್ಥಿಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸಿದೆ. ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಹೋರಾಟವನ್ನು ಹತ್ತಿಕ್ಕುವ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಹೇಳಿದರು.


ಸರ್ಕಾರದ ಪ್ರಜಾತಂತ್ರ ವಿರೋಧಿ ಧೋರಣೆ ತುಂಬಾ ದಿನ ನಡೆಯುವುದಿಲ್ಲ. ಇದು ಸರ್ಕಾರ ನಡೆಸುವ ರೀತಿ ಇದಲ್ಲ. ಇದೇ ರೀತಿ ಸರ್ವಾಧಿಕಾರಿ ಧೋರಣೆ ಮುಂದುವರೆಸಿದರೆ ಜನತೆ ತಕ್ಕ ಪಾಠ ಕಲಿಸುವ ಸಮಯ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಬಂಧಿತರಾಗಿರುವ ವಿದ್ಯಾರ್ಥಿಗಳ ಪಾಲಕರು ಮತ್ತು ಪೋಷಕರ ಜೊತೆ ಮಾತುಕತೆ ನಡೆಸಿ ಅವರಿಗೆ ರಾಜೇಂದ್ರ ರಾಜಣ್ಣಿ ಮತ್ತು ರಕ್ಷಾ ರಾಮಯ್ಯ ಧೈರ್ಯ ತುಂಬಿದರು.



Join Whatsapp