ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ದಕ್ಷಿಣ ಭಾರತದ ರೈತರೂ ಕೂಡ ಕೈಜೋಡಿಸಲು ಸಿದ್ಧರಾಗಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಅವರ ನೇತೃತ್ವದಲ್ಲಿ ಹೋರಾಟ ನಡೆಸಲು ಕರ್ನಾಟಕದ ರೈತ ಸಂಘಟನೆಗಳು ನಿರ್ಧರಿಸಿದೆ.
ಬೆಂಗಳೂರಿನಲ್ಲಿ ನಡೆಯುವ ಬೃಹತ್ ರ‍್ಯಾಲಿಗೆ ಟಿಕಾಯತ್ ಅವರನ್ನು ಆಹ್ವಾನಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕರ್ನಾಟಕ ಫಾರ್ಮರ್ಸ್ ಅಸೋಸಿಯೇಶನ್ ಮತ್ತು ಗ್ರೀನ್ ಆರ್ಮಿ ಅಧ್ಯಕ್ಷ ನಾಗೇಂದ್ರ ಹೇಳಿದ್ದಾರೆ. “ಈ ಹೋರಾಟದಲ್ಲಿ ದಕ್ಷಿಣ ಭಾರತದ ಎಲ್ಲ ರೈತರನ್ನು ಒಂದುಗೂಡಿಸಲು ನಾವು ತೀರ್ಮಾನಿಸಿದ್ದೇವೆ. ಮೂರು ಕೃಷಿ ಸುಧಾರಣಾ ಕಾನೂನುಗಳು ಮತ್ತು ರೈತ ಸಮುದಾಯ ಎದುರಿಸುತ್ತಿರುವ ಇತರ ಬಿಕ್ಕಟ್ಟುಗಳನ್ನು ಪರಿಹರಿಸಬೇಕಾಗಿದೆ” ಎಂದು ನಾಗೇಂದ್ರ ಹೇಳಿದ್ದಾರೆ. ಕರ್ನಾಟಕದಲ್ಲಿ ಗೋಹತ್ಯೆಯನ್ನು ಬಿಜೆಪಿ ಸರ್ಕಾರ ನಿಷೇಧಿಸಿರುವುದಕ್ಕೂ ವಿರುದ್ಧವಾಗಿದೆ ಈ ರ‍್ಯಾಲಿ ಎಂದು ಅವರು ಹೇಳಿದ್ದಾರೆ.