ಲಖನೌ : “ಈ ಹಿಂದೆ ಬಿಜೆಪಿಗೆ ಬೆಂಬಲ ನೀಡಿದ್ದು ನನ್ನ ದೊಡ್ಡ ತಪ್ಪು, ನನ್ನ ಹಿಂದಿನ ಸಭೆಗಳು ಬಿಜೆಪಿಯ ಚುನಾವಣಾ ರ್ಯಾಲಿಗಳಾಗಬೇಕು ಎಂಬ ಉದ್ದೇಶ ಯಾವತ್ತೂ ಇರಲಿಲ್ಲ” ಎಂದು ಭಾರತೀಯ ಕಿಸಾನ್ ಯೂನಿಯನ್ ನ ರಾಷ್ಟ್ರೀಯ ಅಧ್ಯಕ್ಷ ನರೇಶ್ ಟಿಕಾಯತ್ ಹೇಳಿದ್ದಾರೆ.
ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಮುಂಡೆರ್ವ ಎಂಬಲ್ಲಿ ನಡೆದ ರೈತರ ಸಮಾವೇಶದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. “ನಮ್ಮ ಜಮೀನು ಕಳೆದುಕೊಂಡು ಕೃಷಿ ಕಾರ್ಯ ನಡೆಸಲು ಸಾಧ್ಯವಿಲ್ಲದೆ ಇದ್ದರೆ ಮತ್ತೆ ನಮಗೇನು ಉಳಿದಿದೆ? ನಮ್ಮ ಜಮೀನುಗಳನ್ನು ಯಾವುದೇ ಸಂದರ್ಭದಲ್ಲಿಯೂ ಬಿಟ್ಟುಕೊಡುವುದಿಲ್ಲ” ಎಂದು ಅವರು ಹೇಳಿದರು.
ಬಿಜೆಪಿ ಶಾಸಕರುಗಳ ಜೊತೆಗೆ ಯಾವುದೇ ಸಂಬಂಧ ಇಟ್ಟುಕೊಳ್ಳಬೇಡಿ. ಅವರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಬೇಡಿ ಎಂದು ಹೇಳಿದ ಅವರು, ಇಂದು ಸರಕಾರ ನಮ್ಮ ಜೊತೆ ಘರ್ಷಣೆಗಿಳಿದಿದೆ. ನಮಗೆ ಮಾತುಕತೆಗಳು ಸೌಹಾರ್ಧತೆಯುತವಾಗಿ ನಡೆದು ಕೃಷಿ ಉತ್ಪನ್ನಗಳಿಗೆ ಸೂಕ್ತ ದರ ನೀಡಿ ನಮ್ಮ ಜಮೀನು ರಕ್ಷಿಸುವುದಷ್ಟೇ ಬೇಕಿದೆ ಎಂದರು.
ಈ ಸರಕಾರಕ್ಕೆ ಅಪಾಯಕಾರಿ ಉದ್ದೇಶವಿದೆ. ಸಣ್ಣ ವರ್ತಕರನ್ನು ಕೈಬಿಟ್ಟು ಎಲ್ಲಾ ವಸ್ತುಗಳೂ ದೊಡ್ಡ ಮಾಲ್ ಗಳಲ್ಲಿ ಮಾತ್ರ ಹೆಚ್ಚಿನ ಬೆಲೆಗೆ ಲಭ್ಯವಾಗುವಂತೆ ಮಾಡುವ ಯೋಜನೆ ಈ ಸರಕಾರಕ್ಕಿದೆ ಎಂದು ಅವರು ಆರೋಪಿಸಿದರು.