ಮಂಗಳೂರು: ಅಕ್ಟೋಬರ್ ಐದರಂದು ಮಂಗಳೂರು ಮೋರ್ಗನ್ಸ್ ಗೇಟ್ ಬಳಿ ಶೂಟೌಟ್ ನಡೆಸಿದ ಪ್ರಕರಣದ ಆರೋಪಿ ರಾಜೇಶ್ ಪ್ರಭುಗೆ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಅಕ್ಟೋಬರ್ 5ರಂದು ಕೆಲಸಗಾರರೊಂದಿಗೆ ಜಗಳವಾಡಿದ್ದ ಆರೋಪಿ ಪ್ರಭು, ಆಕಸ್ಮಿಕವಾಗಿ ಗುಂಡು ಹಾರಿಸಿ ತನ್ನ ಪುತ್ರ ರಾಜೇಶ್ ಪ್ರಭುವಿನ ಸಾವಿಗೆ ಕಾರಣನಾಗಿದ್ದ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಅಭಯ್ ಧನ್ ಪಾಲ್ ಚೌಗಾಲ ಆಕಸ್ಮಿವಾಗಿ ಗುಂಡು ಹಾರಲ್ಪಟ್ಟಿದೆ ಹಾಗೂ ಸ್ವಂತ ಮಗ ಎನ್ನುವ ಕಾರಣಕ್ಕೆ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿಯಿಂದ 5 ಲಕ್ಷ ರೂ. ಬಾಂಡ್ ಪಡೆಯಲಾಗಿದೆ. ರಾಜೇಶ್ ಫ್ರಭು ಪರ ವಕೀಲರಾದ ವೈ ವಿಕ್ರಂ ಹೆಗ್ಡೆ, ನರಸಿಂಹ ಹೆಗ್ಡೆ ವಾದಿಸಿದ್ದರು.
ಪ್ರಕರಣ ವಿವರ: ಮೋರ್ಗನ್ಸ್ಗೇಟ್ ನ ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೊ ಸರಕು ಸಾಗಾಟ ಸಂಸ್ಥೆಯಲ್ಲಿ ಸೆ.30ರಂದು ಅಶ್ರಫ್, ಚಂದ್ರಹಾಸ ಎಂಬವರು ಕೆಲಸಕ್ಕೆ ಸೇರಿಕೊಂಡಿದ್ದರು. ಅದೇ ದಿನ ಗೂಡ್ಸ್ ಕಂಟೈನರ್ ವಾಹನಕ್ಕೆ ಚಾಲಕ, ಕ್ಲೀನರ್ ಆಗಿ ಮುಂಬೈಗೆ ತೆರಳಿ ಅ.3ಕ್ಕೆ ವಾಪಸಾಗಿದ್ದರು. ಅವರಿಗೆ ಮೊದಲೇ 10 ಸಾವಿರ ರೂ. ಸಂಬಳ ನೀಡಲಾಗಿತ್ತು. ಇನ್ನುಳಿದ 4,000 ರೂ.ನ್ನು ಪುನಃ ನೀಡುವುದಾಗಿ ಮಾಲಕ ರಾಜೇಶ್ ಪ್ರಭು ಎರಡು ದಿನ ಸತಾಯಿಸಿದ್ದರು.
ಅ.5ರಂದು ಸಂಜೆ 3:30ಕ್ಕೆ ಕಚೇರಿಗೆ ಬಂದ ಚಾಲಕ, ಕ್ಲೀನರ್ ಬಾಕಿ ಹಣ ನೀಡುವಂತೆ ಸಂಸ್ಥೆಯ ಮಾಲಕರ ಪತ್ನಿ ಶಾಂತಲಾ ಪ್ರಭು ಅವರಲ್ಲಿ ಒತ್ತಾಯಿಸಿದ್ದರು. ಈ ವೇಳೆ ಅವರು ಪತಿ, ಪುತ್ರನನ್ನು ಕರೆಸಿಕೊಂಡಿದ್ದರು. ಈ ವೇಳೆ ಅಶ್ರಫ್, ಚಂದ್ರಹಾಸ, ರಾಜೇಶ್ ಪ್ರಭು, ಸುಧೀಂದ್ರ ಪ್ರಭು ನಡುವೆ ಮಾತಿನ ಚಕಮಕಿ ನಡೆದು ವಾಗ್ವಾದಕ್ಕೆ ಕಾರಣವಾಗಿದೆ. ಈ ಸಂದರ್ಭ ಸುಧೀಂದ್ರನು ಚಂದ್ರಹಾಸನಿಗೆ ಹಲ್ಲೆಗೈದಿದ್ದಾನೆ. ತಳ್ಳಾಟದ ವೇಳೆ ರಾಜೇಶ್ ಎರಡು ಸುತ್ತಿನ ಗುಂಡು ಹಾರಿಸಿದ್ದರು. ಅಶ್ರಫ್, ಚಂದ್ರಹಾಸರತ್ತ ಹಾರಿಸಿದ್ದ ಗುಂಡು ಸ್ವಂತ ಮಗ ಸುಧೀಂದ್ರನ ಎಡಗಣ್ಣಿನ ಪಕ್ಕ ಹಾದು, ತಲೆಯ ಒಳಭಾಗದಲ್ಲಿ 7-8 ಇಂಚು ಆಳದಲ್ಲಿ ಗಾಯ ಮಾಡಿತ್ತು. ಗಂಭೀರ ಗಾಯಗೊಂಡ ಪುತ್ರನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅ.6ರಂದು ಮೃತಪಟ್ಟಿದ್ದನು. ಈ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.