ಜುನೈದ್ -ನಾಸಿರ್ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿ ರಾಜಸ್ಥಾನ ಮುಸ್ಲಿಂ ಫೋರಂ ನೇತೃತ್ವದಲ್ಲಿ ಪ್ರತಿಭಟನೆ

Prasthutha|

ಜೈಪುರ: ಭವಾನಿಯಲ್ಲಿ ನಡೆದ ಜುನೈದ್ –ನಾಸಿರ್ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಹಾಗೂ ಆರು ತಿಂಗಳೊಳಗೆ ತೀರ್ಪು ನೀಡಿ, ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಲು ಫಾಸ್ಟ್ ಟ್ರಾಕ್ ಕೋರ್ಟ್ ಸ್ಥಾಪಿಸುವಂತೆ ಒತ್ತಾಯಿಸಿ ಜೈಪುರದ ಮೋತಿ ಡುಂಗ್ರಿ ರಸ್ತೆಯಲ್ಲಿ ರಾಜಸ್ಥಾನ ಮುಸ್ಲಿಂ ಫೋರಂ ಬ್ಯಾನರ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಆರೋಪಿಗಳ ಬಂಧನ ವಿಳಂಬದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅನೇಕ ಸಂಘಟನೆಗಳ ಮುಖಂಡರು, ಹಂತಕರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

- Advertisement -


ಇಬ್ಬರು ಮುಸ್ಲಿಮ್ ಯುವಕರ ಹತ್ಯೆ ಖಂಡನೀಯ. ಎಫ್’ಐಆರ್’ನಲ್ಲಿ ಹೆಸರಿಸಲಾದ ಎಲ್ಲಾ ಆರೋಪಿಗಳನ್ನು ವಿಶೇಷವಾಗಿ ಮೋಹಿತ್ ಯಾದವ್ ಅಲಿಯಾಸ್ ಮೋನು ಮನೇಸರ್ ಎಂಬಾತನನ್ನು ತಕ್ಷಣ ಬಂಧಿಸುವಂತೆ ಈ ಸಂದರ್ಭದಲ್ಲಿ ಅಂಗೀಕರಿಸಲಾದ ನಿರ್ಣಯಗಳಲ್ಲಿ ಒತ್ತಾಯಿಸಲಾಯಿತು.


ಉನ್ನತ ಮಟ್ಟದ ವಿಚಾರಣೆ ನಡೆಸಬೇಕು. ತನಿಖಾ ತಂಡದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ನ್ಯಾಯಾಧೀಶರನ್ನು ಕೂಡ ನೇಮಿಸಬೇಕು ಎಂದು ಒತ್ತಾಯಿಸಲಾಗಿದೆ.
ಮೇವಾತ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಗೋರಕ್ಷಕ ದಲ್ಹಾನ್ ಎಂದು ಕರೆಯಲ್ಪಡುವವರು ವಿವಿಧ ಹೆಸರುಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದು, ಅವುಗಳನ್ನು ಅವರು ಬಹಿರಂಗವಾಗಿ ಪ್ರದರ್ಶಿಸುತ್ತಿದ್ದಾರೆ ಮತ್ತು ಬಳಸುತ್ತಿದ್ದಾರೆ. ಕಳ್ಳಸಾಗಣೆಯ ಹೆಸರಿನಲ್ಲಿ ಮುಗ್ಧ ರೈತರು ಮತ್ತು ಜಾನುವಾರು ಸಾಕಣೆದಾರರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದರು. ಇದರೊಂದಿಗೆ, ಹರಿಯಾಣ ಮತ್ತು ರಾಜಸ್ಥಾನ ಸರ್ಕಾರಗಳು ಈ ಅಕ್ರಮ ಗ್ಯಾಂಗ್ ಗಳನ್ನು ಸದೆಬಡಿಯಬೇಕು. ಮೇವಾತ್ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಬೇಕು ಎಂದು ಒತ್ತಾಯಿಸಲಾಯಿತು.

- Advertisement -


ಸಭೆಯ ಅಧ್ಯಕ್ಷತೆಯನ್ನು ರಾಜಸ್ಥಾನ ಮುಸ್ಲಿಂ ಫೋರಂ ಸಂಚಾಲಕ ಶಬ್ಬೀರ್ ಖಾನ್ ವಹಿಸಿದ್ದರು.
ಜಮಾಯತ್ ಉಲೇಮಾ-ಇ-ಹಿಂದ್ ರಾಜ್ಯ ಅಧ್ಯಕ್ಷ ಮುಹಮ್ಮದ್ ನಜೀಮುದ್ದೀನ್, ಎಸ್’ಡಿಪಿಐ ರಾಜ್ಯಾಧ್ಯಕ್ಷ ಡಾ. ಶಹಾಬುದ್ದೀನ್, ಶಿಯಾ ಜಾಮಾ ಮಸೀದಿಯ ಇಮಾಮ್ ಮೌಲಾನಾ ನಜೀಶ್ ಅಕ್ಬರ್ ಖಾಸ್ಮಿ, ರಾಜಸ್ಥಾನ ಮಿಲ್ಲಿ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಯ್ಯುಮ್ ಅಖ್ತರ್, ವಕ್ತಾರ ವಕೀಲ ಮುಜಾಹಿದ್ ಅಲಿ ನಖ್ವಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ವಕಾರ್ ಅಹ್ಮದ್ ಮತ್ತಿತರರು ಪಾಲ್ಗೊಂಡಿದ್ದರು.

Join Whatsapp