ಬೆಂಗಳೂರು: ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಇಡೀ ಪ್ರದೇಶ ಜಲಾವೃತಗೊಂಡಿದ್ದರಿಂದ ಹೃದಯಾಘಾತಕ್ಕೊಳಗಾದ ವೃದ್ಧರೊಬ್ಬರನ್ನು ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗದೆ ಮನೆಯಲ್ಲಿಯೇ ಸಾವನ್ನಪ್ಪಿದ್ದು, ಶವಸಂಸ್ಕಾರಕ್ಕಾಗಿ ಕುಟುಂಬಸ್ಥರು ನೀರಿನಲ್ಲೇ ಮೃತದೇಹವನ್ನು ಹೊತ್ತೊಯ್ದ ಘಟನೆ ಮಹಾದೇವಪುರದ ರೈನ್ ಬೋ ಲೇಔಟ್ ನಲ್ಲಿ ನಡೆದಿದೆ.
86 ವರ್ಷದ ಶ್ರೀನಿವಾಸ ರಾಮರಾವ್ ಮೃತ ದುರ್ದೈವಿಯಾಗಿದ್ದಾರೆ.
ಭಾರೀ ಮಳೆಯಿಂದಾಗಿ ರೈನ್ ಬೋ ಬಡಾವಣೆಗೆ ನೀರು ನುಗ್ಗಿ ಇಡೀ ಬಡಾವಣೆ ಜಲಾವೃತಗೊಂಡಿದ್ದು, ಅಲ್ಲಿನ ನಿವಾಸಿಗಳು ಪರದಾಡುವಂತಾಗಿದೆ. ಅನಾರೋಗ್ಯಕ್ಕೊಳಗಾದ ರಾಮರಾವ್ ಅವರನ್ನು ಕುಟುಂಬಸ್ಥರು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಅವರನ್ನು ಶವಸಂಸ್ಕಾರಕ್ಕಾಗಿ ಕುಟುಂಬಸ್ಥರು ನೀರಿನಲ್ಲೇ ಹೊತ್ತುಕೊಂಡು ಹೋದರು.
ಮಳೆಯಿಂದಾಗಿ ರಸ್ತೆಗಳು ಕಿತ್ತುಹೋಗಿದ್ದು, ರಾಜಕಾಲುವೆಯ ಹೂಳೆತ್ತದೇ ಬಿಬಿಎಂಪಿ ನಿರ್ಲಕ್ಷ್ಯವಹಿಸಿದೆ. ಅಲ್ಲದೆ 2008ರಿಂದಲೂ ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಅರವಿಂದ ಲಿಂಬಾವಳಿ ಅವರು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.